More

    ಕೃಷಿ ಇಲ್ಲದೇ ನಮ್ಮೆಲ್ಲರ ಜೀವನ ಸಾಗಲ್ಲ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಡೆ ಹೇಳಿಕೆ

    ಮಂಡ್ಯ: ದೇಶದ ಶೇ.70ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದು, ಇನ್ನುಳಿದ ಭಾಗದಲ್ಲಿ ವಿವಿಧ ರೀತಿಯ ಕಸುಬುಗಳನ್ನು ಮಾಡಲಾಗುತ್ತಿದೆ. ಆದ್ದರಿಂದ ಕೃಷಿ ಇಲ್ಲದಿದ್ದರೆ ನಮ್ಮ ಜೀವನ ಸಾಗುವುದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಡೆ ಹೇಳಿದರು.
    ನಗರದ ಸ್ಪಂದನಾ ಆಸ್ಪತ್ರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ನೂತನ ಸಿ.ಟಿ ಸ್ಕಾೃನ್ ಘಟಕ ಲೋಕಾರ್ಪಣೆ, ಆರೋಗ್ಯ ರಕ್ಷಾ ಕಾರ್ಡ್ ಹಾಗೂ ಉಚಿತವಾಗಿ ವಿವಿಧ ವೈದ್ಯಕೀಯ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ರೈತರು ಬಿತ್ತನೆ ಮಾಡಿ ಬೆಳೆ ತೆಗೆಯದಿದ್ದರೆ ಬೆಂಗಳೂರಿಗರ ಹೊಟ್ಟೆ ತುಂಬುವುದಿಲ್ಲ. ಇಲ್ಲಿಯ ರೈತರು ಬಹಳ ಕಷ್ಟಪಟ್ಟು ಕಬ್ಬು, ಭತ್ತ, ರಾಗಿ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯುತ್ತಾರೆ ಎಂದರು.
    ಪ್ರಪಂಚದಲ್ಲಿರುವ ವಿವಿಧ ಸಮುದಾಯದವರಿಗೆ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಅವರದೇ ಆದ ವಿವಿಧ ಧಾರ್ಮಿಕ ಸ್ಥಳಗಳಿವೆ. ಆದರೆ, ಸರ್ವಧರ್ಮೀಯರು ಯಾವುದೇ ಜಾತಿ-ಮತವಿಲ್ಲದೆ ಒಂದೆಡೆ ಸೇರುವ ಸ್ಥಳ ಎಂದರೆ ಅದು ಆಸ್ಪತ್ರೆ. ಚಿಕಿತ್ಸೆಗಾಗಿ ಬರುವವರಿಗೆ ಯಾವುದೇ ಜಾತಿ-ಧರ್ಮವಿಲ್ಲ. ಉತ್ತಮ ಸೇವೆ ನೀಡುವುದೇ ವೈದ್ಯರು ಹಾಗೂ ಶುಶ್ರೂಷಕರ ಕಾಯಕವಾಗಬೇಕು. ರೋಗಿಗಳಿಗೆ ಒಂದೇ ಕಡೆ ಎಲ್ಲ ರೀತಿಯ ಸೌಲಭ್ಯಗಳು ಹಾಗೂ ಗುಣಮಟ್ಟದ ಚಿಕಿತ್ಸೆ ಸಿಕ್ಕಿದರೆ ಆ ರೋಗಿಯು ಶೀಘ್ರ ಗುಣಮುಖರಾಗುತ್ತಾರೆ. ಸ್ಪಂದನ ಆಸ್ಪತ್ರೆಯು ಆ ದಾರಿಯಲ್ಲಿ ನಡೆದು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಿ ಎಂದು ಆಶಿಸಿದರು.
    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸುಮಾರು 800 ವರ್ಷದ ಇತಿಹಾಸವಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು ಆಧ್ಯಾತ್ಮಿಕ ಮತ್ತು ಮನಸ್ಸುಗಳ ಕಟ್ಟುವ ಶಕ್ತಿ ಕೇಂದ್ರವಾಗಿದೆ. ಶಕ್ತಿ ಮತ್ತು ಯುಕ್ತಿ ಎರಡೂ ಇದೆ. ಧಾರ್ಮಿಕ ಕಾರ್ಯಕಗಳ ಜತೆಗೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರಿಸಲಾಗಿದೆ. ಒಡೆದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ಸಾಮಾಜಿಕ ಕಳಕಳಿ ಇದ್ದು, ಪ್ರತಿಯೊಬ್ಬರೂ ಆರೋಗ್ಯ ಮತ್ತು ಸಂತಸವಾಗಿರುವುದೇ ಖಾವಂದರಾದ ಹೆಗ್ಡೆ ಅವರ ಗುರಿಯಾಗಿದೆ ಎಂದರು.
    ಶಾಸಕ ಪಿ.ರವಿಕುಮಾರ್ ಗಣಿಗ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಸ್ಪಂದನಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಆದಿತ್ಯಗೌಡ, ಡಾ.ರವೀಂದ್ರ, ಇಕ್ಬಾಲ್, ಆಸಿಫ್ ಖಾನ್, ಅಮಿತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts