More

    ಮೆಡಿಕಲ್ ಕಾಲೇಜ್​ಗೆ ಶಂಕುಸ್ಥಾಪನೆ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಜಿಲ್ಲೆಯ ಜನರ ದಶಕಗಳ ಬೇಡಿಕೆಯಾಗಿದ್ದ ಮೆಡಿಕಲ್ ಕಾಲೇಜ್ ನಿರ್ವಣದ ಕನಸು ನನಸಾಗುತ್ತಿದ್ದು, ನ. 13ರಂದು ದೇವಗಿರಿ-ಯಲ್ಲಾಪುರ ಗ್ರಾಮದ ಬಳಿಯಲ್ಲಿ ಕಟ್ಟಡ ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.

    ಕರೊನಾ ಹಿನ್ನೆಲೆಯಲ್ಲಿ ವರ್ಚುವಲ್ ವೇದಿಕೆ ಮೂಲಕ ಬೆಂಗಳೂರಿನಿಂದ ಸಿಎಂ ಯಡಿಯೂರಪ್ಪ ಅವರು ನ. 13ರಂದು ಸಂಜೆ 4.30ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಸ್ಥಳೀಯವಾಗಿ ಕಾರ್ಯಕ್ರಮದ ವೀಕ್ಷಣೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜ್​ನ ನಿವೇಶನದಲ್ಲಿ ಎಲ್​ಇಡಿ ಪರದೆ ಸೇರಿ ಅಳವಡಿಕೆ ಕಾರ್ಯ ನಡೆದಿದೆ. ಕೋವಿಡ್ ಹಿನ್ನೆಲೆಯಲ್ಲಿ 200 ಜನರಿಗೆ ಮಾತ್ರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

    ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ. ಸುಧಾಕರ, ಕೃಷಿ ಸಚಿವ ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು.

    ನೂತನ ವೈದ್ಯಕೀಯ ಕಾಲೇಜ್ ಆರಂಭದಿಂದ ಜಿಲ್ಲೆಯಲ್ಲಿ ಉನ್ನತ ವೈದ್ಯಕೀಯ ಸೌಲಭ್ಯಗಳ ಜೊತೆಗೆ 890 ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಸೇವೆ ಜಿಲ್ಲೆಗೆ ದೊರಕಲಿದೆ. 2021-22ನೇ ಶೈಕ್ಷಣಿಕ ಸಾಲಿನಿಂದ ಕಾಲೇಜ್ ತರಗತಿಗಳನ್ನು ಆರಂಭಿಸಲಾಗುವುದು. ಪ್ರತಿವರ್ಷ 150 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು. ವೈದ್ಯಕೀಯ ಕಾಲೇಜ್​ಗೆ ಈಗಾಗಲೇ 56.10 ಎಕರೆ ಜಮೀನನ್ನು ದೇವಗಿರಿ ಯಲ್ಲಾಪುರದಲ್ಲಿ ಮಂಜೂರು ಮಾಡಲಾಗಿದೆ. ಈ ವಿಶಾಲ ಜಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ 478.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜ್ ನಿರ್ಮಾಣ ಮಾಡಲಾಗುವುದು. ಈಗಾಗಲೇ ಸರ್ಕಾರ 37.23 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಂದಾಜು 478.75 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗುವ ಕಾಮಗಾರಿ ಪೈಕಿ 365 ಕೋಟಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿಗಳು, 85 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಹಾಗೂ 28.75 ಕೋಟಿ ವೆಚ್ಚದಲ್ಲಿ ವಿದ್ಯುತ್, ನೀರಿನ ಸಂಪರ್ಕ, ಡಿಜಿಟಲ್ ಗ್ರಂಥಾಲಯ ಸೌಲಭ್ಯ ಸೇರಿ ಇತರ ವೆಚ್ಚಗಳಿಗೆ ಕಾಯ್ದಿರಿಸಲಾಗಿದೆ.

    ವೈದ್ಯಕೀಯ ಕಾಲೇಜ್​ನ ಮುಖ್ಯಕಟ್ಟಡವನ್ನು ನಾಲ್ಕು ಅಂತಸ್ತಿನ ಕಟ್ಟಡ ನಿರ್ವಣಕ್ಕೆ ವಿನ್ಯಾಸಗೊಳಿಸಲಾಗಿದೆ.

    ಐದು ಅಂತಸ್ತಿನ 1,13,842 ಚದರಡಿ ವಿಸ್ತೀರ್ಣದಲ್ಲಿ 375 ವಿದ್ಯಾರ್ಥಿಗಳ ವಾಸಕ್ಕೆ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ವಣ, 375 ವಿದ್ಯಾರ್ಥಿನಿಯರ ವಾಸಕ್ಕೆ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ವಿುಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿವರ್ಷ 100 ಜನ ಸ್ನಾತಕೋತ್ತರ ವಿದ್ಯಾರ್ಥಿಗಳು, ಸುಮಾರು 250 ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್(ಅರೇವೈದ್ಯಕೀಯ) ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಲ್ಕು ಅಂತಸ್ತಿನ 99,802 ಚದರಡಿ ವಿಸ್ತೀರ್ಣದಲ್ಲಿ 32 ಬೋಧಕರ, ವೈದ್ಯರ ವಸತಿಗೃಹಗಳು, ಆರು ಅಂತಸ್ತಿನ 31,265 ಚದರಡಿ ವಿಸ್ತೀರ್ಣದಲ್ಲಿ 48 ಬೋಧಕೇತರ ವಸತಿಗೃಹಗಳು, ಆರು ಅಂತಸ್ತಿನ 31,265 ಚದರಡಿ ವಿಸ್ತೀರ್ಣದಲ್ಲಿ ಶುಶ್ರೂಷಕಿಯರ 72 ವಸತಿಗೃಹಗಳು, ಡೀನ್ ಹಾಗೂ ಪ್ರಾಂಶುಪಾಲರಿಗಾಗಿ ತಲಾ 2,962 ಚದರಡಿ ವಿಸ್ತೀರ್ಣದ ವಸತಿ ಗೃಹಗಳ ನಿರ್ವಣವೂ ಈ ಯೋಜನೆಯಲ್ಲಿದೆ. ಎರಡನೇ ಹಂತದಲ್ಲಿ 1000 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಸೆಂಟರ್, ಟ್ರಾಮಾ ಸೆಂಟರ್ ಆರಂಭಕ್ಕೆ ಉದ್ದೇಶಿಸಲಾಗಿದೆ.

    ಜಿಲ್ಲೆಯ ಜನರ ದಶಕಗಳ ಕನಸು ಇಂದು ಈಡೇರುತ್ತಿದೆ. ಮೆಡಿಕಲ್ ಕಾಲೇಜ್ ಆರಂಭದ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮತ್ತೊಂದು ಗರಿ ಮೂಡಲಿದೆ. ನಾವು ಜನರಿಗೆ ಭರವಸೆ ನೀಡಿದಂತೆ ಮೆಡಿಕಲ್ ಕಾಲೇಜ್​ಗೆ ಅನುದಾನ ಬಿಡುಗಡೆಗೊಳಿಸಿ ಈಗ ಶಂಕುಸ್ಥಾಪನೆ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಕರೆಯಿಸಿ ಬೃಹತ್ ಸಂಭ್ರಮದ ಕಾರ್ಯಕ್ರಮ ಮಾಡುವ ಇರಾದೆಯಿತ್ತು. ಕೋವಿಡ್ ಕಾರಣದಿಂದ ವರ್ಚುವಲ್ ವೇದಿಕೆ ಮೂಲಕ ಕಾರ್ಯಕ್ರಮ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸಲಾಗುವುದು.

    | ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts