More

    ದೃಶ್ಯಮಾಧ್ಯಮ, ಜಾಲತಾಣಗಳ ನಡುವೆಯೂ ಪತ್ರಿಕೆ ಮಹತ್ವ ಉಳಿಸಿಕೊಂಡಿದೆ

    • ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿಕೆ

    ಬೆಂಗಳೂರು: ತಂತ್ರಜ್ಞಾನ ಅಭಿವೃದ್ಧಿಯ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಸುದೀರ್ಘ ಇತಿಹಾಸ ಹೊಂದಿರುವ ಮುದ್ರಣ ಮಾಧ್ಯಮ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡು ಸಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.

    ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮಾಧ್ಯಮಗಳು’ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

    ನಿತ್ಯದ ಅಗತ್ಯವಸ್ತುಗಳಲ್ಲಿ ಪತ್ರಿಕೆಯೂ ಒಂದಾಗಿದ್ದು, ದೃಶ್ಯಮಾಧ್ಯಮಗಳಿದ್ದರೂ ಪತ್ರಿಕೆಗಳಿಲ್ಲದ ಮನೆಗಳು ವಿರಳ. ಸರ್ಕಾರ ಹಾಗೂ ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಪತ್ರಿಕಾ ಮಾಧ್ಯಮ ತಂತ್ರಜ್ಞಾನ ಬಳಕೆಯೊಂದಿಗೆ ಬಹಳಷ್ಟು ಬೆಳವಣಿಗೆ ಹೊಂದಿದೆ. ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸುತ್ತಿರುವ ಯುವ ಸಮೂಹ ನಿಖರ ಸುದ್ದಿಗಾಗಿ ಪತ್ರಿಕೆಗಳ ಓದನ್ನು ರೂಢಿಸಿಕೊಳ್ಳಬೇಕು. ಇನ್ನು ಪರಿಪೂರ್ಣ ಪತ್ರಕರ್ತರಾಗಲು ಬಯಸುವವರು ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಬೆಂಕಿ ಬಳಸಿದಂತೆ ಉಪಯೋಗ: ತಂತ್ರಜ್ಞಾನ ಬೆಂಕಿ ಇದ್ದಂತೆ. ಅದರಿಂದ ಅಡುಗೆಯನ್ನೂ ಮಾಡಬಹುದು, ಮನೆಯನ್ನೂ ಸುಡಬಹುದು. ಅದನ್ನು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿದೆ. ಮಾಧ್ಯಮ ಕ್ಷೇತ್ರದಲ್ಲಿ ಈ ಬೆಂಕಿಯನ್ನು ಸದ್ದುದ್ದೇಶಕ್ಕೆ ಬಳಕೆ ಮಾಡಿದಲ್ಲಿ ಮಾತ್ರ ಸಮಾಜಕ್ಕೆ ಒಳಿತು. ಏಕೆಂದರೆ ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ಸುದ್ದಿಗಳ ಖಚಿತತೆ, ನಿಖರತೆ ಮತ್ತು ಸ್ಪಷ್ಟತೆಯ ಸವಾಲು ನಮ್ಮಎದುರಿಗಿದೆ ಎಂದರು.

    ಧಾವಂತ ಮತ್ತು ನಮ್ಮಲ್ಲೇ ಮೊದಲು ಸುದ್ದಿ ನೀಡಬೇಕು ಎಂಬ ಅವಸರದಲ್ಲಿ ಖಚಿತತೆ ಇಲ್ಲದೆ ಸುದ್ದಿ ಪ್ರಸಾರದಿಂದಾಗಿ ಸುದ್ದಿಯ ವಿಶ್ವಾಸಾರ್ಹತೆ ಕಳೆದು ಹೋಗುತ್ತಿದೆ. ಈ ಸಂದರ್ಭದಲ್ಲಿ ಊಹಾಪೋಹ ಪತ್ರಿಕೋದ್ಯಮವೆಂಬ ಅನಾಹುತಕಾರಿ ಬೆಳವಣಿಗೆ ಆರಂಭವಾಗಿದ್ದು, ಪ್ರಮುಖವಾಗಿ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಣ್ಮುಂದಿನ ಸತ್ಯವನ್ನು ತಮಗೆ ಬೇಕಾದಂತೆ ಚಿತ್ರಿಸಲಾಗುತ್ತಿದೆ ಎಂದು ಕೃತಕ ಬುದ್ಧಿಮತ್ತೆ ಸೃಷ್ಟಿಸುತ್ತಿರುವ ಅವಾಂತರ ಹಾಗೂ ಪತ್ರಿಕಾ ಮಾಧ್ಯಮದ ಉಳಿಸಿಕೊಂಡಿರುವ ವಿಶ್ವಾಸಾರ್ಹತೆಯ ಕುರಿತು ವಿವರಿಸಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಮಾತನಾಡಿ, ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಈಗಾಗಲೇ ಪ್ರವೇಶಿಸಿದ್ದು, ಮಾಧ್ಯಮ ಕ್ಷೇತ್ರದಲ್ಲಿ ತಡವಾಗಿ ಬಂದಿದೆ. ಬ್ರೇಕಿಂಗ್ ನ್ಯೂಸ್ ರೇಸ್‌ನಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ದೊಡ್ಡದಿದೆ. ಇದು ಸೃಷ್ಟಿಸುತ್ತಿರುವ ಸವಾಲುಗಳ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.

    ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ವಿಜ್ಞಾನ ಅಂಕಣಕಾರ ಟಿ.ಜಿ. ಶ್ರೀನಿಧಿ, ತಂತ್ರಾಂಶ ಪರಿಣಿತರಾದ ಕಾವ್ಯಶ್ರೀ ತಿಮ್ಮಯ್ಯ ಅವರು ‘‘ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮಾಧ್ಯಮಗಳು’ ವಿಷಯ ಕುರಿತು ಮಾತನಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪಾ, ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್, ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ್, ಹಿರಿಯ ಪತ್ರಕರ್ತರು ಹಾಗೂ ಅಧಿಕಾರಿಗಳು, ಮಾಧ್ಯಮ ವಿದ್ಯಾರ್ಥಿಗಳು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts