More

    ಏಕದಿನಕ್ಕೆ ಮಯಾಂಕ್ ಅಗರ್ವಾಲ್, ಟೆಸ್ಟ್​ಗೆ ಶುಭಮಾನ್ ಗಿಲ್ ಆಯ್ಕೆ: ಕಿವೀಸ್ ಪ್ರವಾಸದಿಂದ ರೋಹಿತ್ ಔಟ್

    ನವದೆಹಲಿ: ಭಾರತ ನಿಗದಿತ ಓವರ್​ಗಳ ತಂಡದ ಉಪನಾಯಕ ರೋಹಿತ್ ಶರ್ಮ ನ್ಯೂಜಿಲೆಂಡ್ ಪ್ರವಾಸದ ಏಕದಿನ ಹಾಗೂ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಏಕದಿನ ತಂಡಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಟೆಸ್ಟ್ ತಂಡಕ್ಕೆ ಯುವ ಬ್ಯಾಟ್ಸ್​ಮನ್ ಶುಭಮಾನ್ ಗಿಲ್ ಅವರನ್ನು ಆರಿಸಲಾಗಿದೆ.

    ಭಾನುವಾರ ನ್ಯೂಜಿಲೆಂಡ್ ಎದುರು ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದ ವೇಳೆ ರೋಹಿತ್ ಶರ್ಮ ಮೀನಖಂಡ ನೋವಿಗೆ ತುತ್ತಾಗಿದ್ದರು. 41 ಎಸೆತಗಳಲ್ಲಿ 60 ರನ್ ಸಿಡಿಸಿದ್ದ ರೋಹಿತ್ ಕಣದಿಂದ ಹಿಂದೆ ಸರಿದಿದ್ದರು. ‘ರೋಹಿತ್ ಶರ್ಮ ಫಿಟ್ನೆಸ್​ಅನ್ನು ಫಿಸಿಯೋ ಪರಿಶೀಲಿಸುತ್ತಿದ್ದು, ಅವರ ಗಾಯದ ಗಂಭೀರತೆ ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ. ಆದರೆ, ಅವರು ಪ್ರವಾಸದ ಮುಂದಿನ ಭಾಗದಲ್ಲಿ ತಂಡದ ಜತೆಗಿರುವುದಿಲ್ಲ ಎಂಬುದು ಖಚಿತ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಟಿ20 ಸರಣಿ ಕ್ಲೀನ್​ಸ್ವೀಪ್ ಸಾಧಿಸಿ ಪ್ರವಾಸದಲ್ಲಿ ಶುಭಾರಂಭ ಕಂಡಿದ್ದ ಭಾರತ ತಂಡಕ್ಕೆ ರೋಹಿತ್ ಗೈರು ಉಳಿದೆರಡು ಸರಣಿಗಳಲ್ಲಿ ಹೊಡೆತ ನೀಡಲಿದೆ. ಭಾರತ ತಂಡ ಬುಧವಾರದಿಂದ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಬಳಿಕ ಫೆ. 21ರಿಂದ 2 ಟೆಸ್ಟ್ ಪಂದ್ಯಗಳನ್ನಾಡಲಿದೆ.

    ಈಗಾಗಲೆ ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಮಯಾಂಕ್ ಅಗರ್ವಾಲ್, ಏಕದಿನ ತಂಡದಲ್ಲಿ ರೋಹಿತ್ ಜಾಗ ತುಂಬಲಿದ್ದಾರೆ. ಈಗಾಗಲೆ ಕೆಎಲ್ ರಾಹುಲ್ ಮತ್ತು ಗಾಯಾಳು ಶಿಖರ್ ಧವನ್ ಬದಲು ತಂಡ ಕೂಡಿಕೊಂಡಿರುವ ಪೃಥ್ವಿ ಷಾ ತಂಡದಲ್ಲಿರುವ ಆರಂಭಿಕರಾಗಿದ್ದಾರೆ. ಇನ್ನಷ್ಟೇ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಬೇಕಿರುವ ಮಯಾಂಕ್, ಮೀಸಲು ಆರಂಭಿಕರಾಗಿರಲಿದ್ದಾರೆ. ಈ ಮುನ್ನ ಏಕದಿನ ವಿಶ್ವಕಪ್ ಮತ್ತು ತವರು ನೆಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮಯಾಂಕ್ ಭಾರತ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ.

    ಟೆಸ್ಟ್​ಗೆ ರಾಹುಲ್ ವಾಪಸ್?: ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಬಿಸಿಸಿಐ ಇನ್ನಷ್ಟೇ ಭಾರತ ತಂಡವನ್ನು ಪ್ರಕಟಿಸಬೇಕಿದೆ. ಆದರೆ ಮೂಲಗಳ ಪ್ರಕಾರ, ಎಂಎಸ್​ಕೆ ಪ್ರಸಾದ್ ಒಳಗೊಂಡ ಹಿಂದಿನ ಆಯ್ಕೆ ಸಮಿತಿಯಿಂದ ಈಗಾಗಲೆ ಟೆಸ್ಟ್ ತಂಡದ ಆಯ್ಕೆ ನಡೆದಿದೆ. ಆದರೆ ಅದನ್ನು ಅಧಿಕೃತವಾಗಿ ಪ್ರಕಟಿಸುವುದಷ್ಟೇ ಬಾಕಿ ಇದೆ. ಇದರನ್ವಯ ಸೀಮಿತ ಓವರ್ ಕ್ರಿಕೆಟ್​ನಲ್ಲಿ ಇತ್ತೀಚೆಗೆ ತೋರುತ್ತಿರುವ ಭರ್ಜರಿ ನಿರ್ವಹಣೆಯಿಂದಾಗಿ ಕೆಎಲ್ ರಾಹುಲ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಮುಂಬೈ ಬ್ಯಾಟ್ಸ್​ಮನ್ ಪೃಥ್ವಿ ಷಾ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ರೋಹಿತ್ ಬದಲಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಶುಭಮಾನ್ ಗಿಲ್​ಗೆ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ. ಪಂಜಾಬ್ ಆಟಗಾರ ಗಿಲ್ ಈಗಾಗಲೆ ನ್ಯೂಜಿಲೆಂಡ್ ಎ ವಿರುದ್ಧದ ಚತುರ್ದಿನ ಟೆಸ್ಟ್​ನಲ್ಲಿ ಭಾರತ ಎ ತಂಡದ ಪರ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಹಾಗೂ ಖಜಾಂಚಿ ಅರುಣ್ ಧುಮಾಲ್ ನ್ಯೂಜಿಲೆಂಡ್​ಗೆ ಪ್ರಯಾಣಿಸುತ್ತಿದ್ದು, ಅವರ ಒಪ್ಪಿಗೆ ಸಿಕ್ಕ ಬಳಿಕ ಭಾರತ ಟೆಸ್ಟ್ ತಂಡ ಮತ್ತು ರೋಹಿತ್​ಗೆ ಬದಲಿ ಆಟಗಾರರ ಹೆಸರನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
    -ಪಿಟಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts