More

    ಅನ್ನದಾತನ ಬದುಕು ಹಸನಾಗಲಿ

    ನಾಗಮಂಗಲ: ರೈತರಿಗೆ ತಾವು ಬೆಳೆಯುವ ಕಾಯಕದ ಪರಿಶ್ರಮದ ಜತೆಗೆ ಬೆಳೆದ ಬೆಳೆಗಳನ್ನು ಉತ್ಪನ್ನಗಳನ್ನಾಗಿ ಮಾಡುವ ಮೌಲ್ಯವರ್ಧನೆಯ ಅರಿವು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಗತ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 79ನೇ ವರ್ಷದ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಕೃಷಿ ಮೇಳ ಮತ್ತು ರೈತ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

    ದೇಶದ ಸ್ವಾಭಿಮಾನ ವಿಶ್ವ ಮಟ್ಟದಲ್ಲಿ ಗುರುತಿಸಬೇಕಾದರೆ ರೈತನ ಬದುಕು ಹಸನಾಗಬೇಕು. ಸ್ವಾತಂತ್ರ್ಯದ ನಂತರದ ಕಾಲಘಟ್ಟದಲ್ಲಿ ದೇಶದ ಒಟ್ಟು ಆರ್ಥಿಕತೆಯಲ್ಲಿ ಶೇ.50 ರಷ್ಟಿದ್ದ ಕೃಷಿ ಕ್ಷೇತ್ರದ ಆದಾಯ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಕೃಷಿಕನ ಆರ್ಥಿಕ ಸುಧಾರಣೆಗಾಗಿ ಕೃಷಿ ವಿಜ್ಞಾನದ ತರಬೇತಿಗಳು ಅತ್ಯವಶ್ಯಕ. ಕೇವಲ ಜಾನಪದ ಸಾಹಿತ್ಯದಲ್ಲಿ ಮಾತ್ರವಲ್ಲದೆ ಶಿಷ್ಟ ಮತ್ತು ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಸಂಬಂಧಿತ ಸಾಹಿತ್ಯ ಅಗ್ರಸ್ಥಾನದಲ್ಲಿದೆ. ಕೃಷಿ ವಿಜ್ಞಾನದ ಸಂಶೋಧನೆಗಳ ಸದುಪಯೋಗ ಆದಾಗ ಮಾತ್ರ ಬೇಸಾಯದಲ್ಲಿ ಪ್ರಗತಿ ಕಾಣಲು ಸಾಧ್ಯ. ಬೆಳೆ ಬೆಳೆಯುವ ಕಾಯಕದ ಪರಿಶ್ರಮದ ಜತೆಗೆ ಗ್ರಾಹಕರಿಗೆ ತಲುಪುವ ನೇರ ಮಾರುಕಟ್ಟೆಗೆ ಅವಶ್ಯವಿರುವ ಆಹಾರ ಪದಾರ್ಥಗಳನ್ನು ಮೌಲ್ಯವರ್ಧನಾ ಚಟುವಟಿಕೆಯ ಮೂಲಕ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಕೆಲಸ ರೈತರಿಂದ ಆಗಗಬೇಕು ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ವ್ಯಕ್ತವಾಗುವ ಆವಿಷ್ಕಾರಗಳ ಫಲ ರೈತರಿಗೆ ತಲುಪಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಶೇ.70 ರಷ್ಟು ಜನರು ಕೃಷಿ ಅವಲಂಬಿತರ ದೇಶ ನಮ್ಮದಾಗಿದೆ. ಬಹುಸಂಖ್ಯೆಯಲ್ಲಿ ಕೃಷಿ ಅವಲಂಬಿಸಿರುವ ರೈತರು ಸಧೃಡರಾಗಬೇಕು, ಆಗ ಕುಟುಂಬ, ಜಿಲ್ಲೆ, ರಾಜ್ಯ ಮತ್ತು ದೇಶ ಸದೃಢವಾಗುತ್ತದೆ. ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಕೃಷಿ ಕ್ಷೇತ್ರ ಹಾಗೂ ಪರಿಸರದ ಬಗ್ಗೆ ಅನನ್ಯ ಪ್ರೀತಿ ಹೊಂದಿದ್ದರು. ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಮಲಾನಂದನಾಥ ಶ್ರೀಗಳು ಕೃಷಿ ಕ್ಷೇತ್ರ ಬಲವರ್ಧನೆಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಪ್ರತಿವರ್ಷ ಕೃಷಿ ಮೇಳ, ರೈತ ಸಂಗಮ ಮತ್ತಿತರ ಕೃಷಿ ಪೂರಕ ಚಟುವಟಿಕೆ ಆಯೋಜಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

    ರಾಜ್ಯ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್ ಮಾತನಾಡಿ, ಶಿಕ್ಷಣ, ಆರೋಗ್ಯ, ಧಾರ್ಮಿಕ ಸೇವೆಯ ಜತೆಗೆ ರೈತ ಸಂಗಮ ಆಯೋಜಿಸುವ ಮೂಲಕ ರಾಜ್ಯದ ಉತ್ತರ ಹಾಗೂ ದಕ್ಷಿಣ ಭಾಗದ ಸಮ್ಮಿಲನಕ್ಕೆ ವೇದಿಕೆ ಸೃಷ್ಟಿಸಿ, ಕೃಷಿ ಚಟುವಟಿಕೆ ವಿಲೀನಕ್ಕೆ ನಾಂದಿಯಾಡಿರುವ ಶ್ರೀಗಳ ದೂರದೃಷ್ಟಿ ಅನುಕರಣೀಯ ಎಂದರು.

    ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ರೈತರು ದೇಶದ ಆಧಾರಸ್ತಂಭ ಹಾಗೂ ಶಕ್ತಿಯಾಗಿದ್ದು, ರೈತ ಮತ್ತು ಕೃಷಿ ಕ್ಷೇತ್ರವನ್ನು ಉತ್ತೇಜಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದರು.

    ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಜಿಕೆವಿಕೆ ಕುಲಪತಿ ಡಾ.ಎಸ್.ಬಿ.ಸುರೇಶ್, ಕೃಷಿ ಇಲಾಖೆಗೆ ನಿರ್ದೇಶಕ ಜಿ.ವಿ.ಪುತ್ರ, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಂ.ಎಚ್.ಪದ್ಮನಾಭ್, ವೈಭವ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಸ್ಪಿ ಎನ್.ಯತೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ನಿರ್ದೇಶಕಿಯರಾದ ಡಾ.ಮಾಲತಿ, ಮಮತಾ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts