More

    ಮಾಸಾಂತ್ಯದಲ್ಲಿ ಮಾವು, ಹಲಸು ಮೇಳ

    ಅವಿನಾಶ್ ಜೈನಹಳ್ಳಿ ಮೈಸೂರು
    ಮಾವುಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ…
    ನಗರದಲ್ಲಿ ಶೀಘ್ರದಲ್ಲೇ ಮಾವು ಮತ್ತು ಹಲಸು ಮೇಳ ಆಯೋಜನೆಗೊಳ್ಳಲಿದ್ದು, ಒಂದೇ ಸೂರಿನಡಿ ಮಾವಿನ ವಿವಿಧ ತಳಿಯ ಹಣ್ಣುಗಳನ್ನು ಖರೀದಿಸಿ ರುಚಿ ಸವಿಯುವುದಲ್ಲದೆ, ಬಗೆ ಬಗೆಯ ಹಲಸಿನ ಸ್ವಾದವನ್ನೂ ಆಸ್ವಾದಿಸಬಹುದು!

    ತೋಟಗಾರಿಕೆ ಇಲಾಖೆ, ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ನಗರದ ಕರ್ಜನ್ ಪಾರ್ಕ್ ಆವರಣದಲ್ಲಿ ಮೇ ಕಡೇ ವಾರ ‘ಮಾವು ಮತ್ತು ಹಲಸು’ ಮೇಳ ಆಯೋಜಿಸಲು ಚಿಂತಿಸಲಾಗಿದೆ. ಮೂರಕ್ಕೂ ಹೆಚ್ಚು ದಿನಗಳ ಕಾಲ ಮೇಳ ನಡೆಸುವ ಉದ್ದೇಶವಿದ್ದು, ವಿವಿಧ ಸ್ವಾದದ ಮಾವು, ಹಲಸು ಮೈಸೂರಿಗರಿಗೆ ಲಭ್ಯವಾಗಲಿದೆ.

    ಈ ಸಂಬಂಧ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ರೈತರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಚರ್ಚಿಸಿ ಮೇಳದ ದಿನಾಂಕ ಅಂತಿಮಗೊಳಿಸಲಿದ್ದಾರೆ.
    ಮಾವಿನಹಣ್ಣು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹಲಸಿನ ಘಮಲೂ ಸೂಸತೊಡಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಈ ಹಣ್ಣುಗಳ ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡುವುದು ಹಾಗೂ ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದೊಂದಿಗೆ ತೋಟಗಾರಿಕೆ ಇಲಾಖೆ ಹಲವು ವರ್ಷಗಳಿಂದ ಮಾವು ಮತ್ತು ಹಲಸು ಮೇಳ ಏರ್ಪಡಿಸುತ್ತಿದೆ. ಈ ಬಾರಿಯೂ ಅದನ್ನು ಮುಂದುವರಿಸಲು ಸಿದ್ಧತೆ ನಡೆಸಿದೆ.

    ಉತ್ಕೃಷ್ಟ ದರ್ಜೆಯ ಹಣ್ಣಿಗೆ ಒತ್ತು

    ಮಾವುಪ್ರಿಯರ ಆರೋಗ್ಯದ ಹಿತದೃಷ್ಟಿಯಿಂದ ಕ್ಯಾಲ್ಸಿಯಂ ಕಾರ್ಬೈಡ್‌ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಉತ್ಕೃಷ್ಟ ದರ್ಜೆಯ ವಿವಿಧ ತಳಿಯ ಹಣ್ಣುಗಳು ಮೇಳದಲ್ಲಿ ಗ್ರಾಹಕರಿಗೆ ದೊರೆಯುವಂತೆ ಮಾಡುವ, ಉತ್ತಮ ಬೆಲೆ ನಿಗದಿಪಡಿಸುವ ಸಂಬಂಧ ರೈತರ ಸಭೆಯಲ್ಲಿ ಚರ್ಚೆ ನಡೆಯಲಿದೆ.
    ವಿವಿಧ ಮಾವು, ಹಲಸಿನ ತಳಿಗಳನ್ನು ಮೇಳದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ. ಮಾನಕೂರ, ಆಮ್ಲೆಟ್, ಚೈತ್ರಪೈರಿ, ಸೇಲಂ, ಶಿರಸಿ ಲೋಕಲ್, ರತ್ನಗಿರಿ(ಆಲ್ಫನ್ಸ್), ಬಾದಾಮಿ, ರಸಪುರಿ, ಮಲಗೋವ, ಮಲ್ಲಿಕಾ, ಸಿಂಧೂರ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಸರ್, ಸಕ್ಕರೆಗುತ್ತಿ, ಆಮ್ರಪಾಲಿ, ದಿಲ್‌ಪಸಂದ್ ಸೇರಿದಂತೆ ಹಲವು ತಳಿಯ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡುವ ಸಂಬಂಧವೂ ಚರ್ಚೆ ನಡೆಯಲಿದೆ.

    ಒಂದೊಂದು ಜಾತಿಯ ಮಾವಿಗೂ ಒಂದೊಂದು ಬೆಲೆ ನಿಗದಿ ಮಾಡಲಾಗುತ್ತದೆ. ತೋಟಗಾರಿಕೆ ಇಲಾಖೆ ದರ ನಿಗದಿಪಡಿಸಲಿದೆ. ರೈತರ ಸಭೆಯಲ್ಲೇ ಕೆ.ಜಿ. ಹಣ್ಣಿಗೆ ಕನಿಷ್ಠ ಮತ್ತು ಗರಿಷ್ಠ ಬೆಲೆ ನಿಗದಿಯೂ ಆಗಲಿದೆ.

    ನೈಸರ್ಗಿಕ ಹಣ್ಣು ಮಾರಾಟ

    ನೈಸರ್ಗಿಕವಾಗಿ ಹಣ್ಣಾಗಿಸಿದ ಮಾವಿನಹಣ್ಣುಗಳ ಜತೆಗೆ, ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿಸಿದ ಹಣ್ಣುಗಳೂ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿವೆ. ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಸಿಂಪಡಿಸಿದ ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್, ಅಸ್ತಮಾ, ಕೆಮ್ಮು, ನೆಗಡಿ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಆದರೆ ನೈಸರ್ಗಿಕವಾಗಿ ಮತ್ತು ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಮಾಗಿಸಿದ ಹಣ್ಣುಗಳ ನಡುವಿನ ವ್ಯತ್ಯಾಸ ಗುರುತಿಸುವುದು ಗ್ರಾಹಕರಿಗೆ ಕಷ್ಟವಾಗಲಿದೆ. ಆದ್ದರಿಂದ ಮೇಳದಲ್ಲಿ ಈ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

    ಮಾರುಕಟ್ಟೆ ಪ್ರವೇಶಿಸಿದ ಹಣ್ಣುಗಳ ರಾಜ!

    ಹಣ್ಣುಗಳ ರಾಜ ಮಾವು ಸಾಂಸ್ಕೃತಿಕ ನಗರಿ ಮೈಸೂರಿನ ಮಾರುಕಟ್ಟೆ ಪ್ರವೇಶಿಸಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ವಿವಿಧ ತಳಿಯ ಹಣ್ಣುಗಳು ಜನರ ಬಾಯಲ್ಲಿ ನೀರೂರುತ್ತಿವೆ.
    ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಾದಾಮಿ, ರಸಪುರಿ, ತೋತಾಪುರಿ, ಬಂಗನಪಲ್ಲಿ, ದಶೇರಿ, ಮಲ್ಲಿಕಾ, ಮಲಗೋವ, ನೀಲಂ, ಸಿಂಧೂರ ತಳಿಯ ಮಾವು ಮೈಸೂರಿನ ಮಾರುಕಟ್ಟೆ ಪ್ರವೇಶ ಮಾಡಿದ್ದು, ನಗರದ ಮೂಲೆ ಮೂಲೆಯಲ್ಲೂ ವ್ಯಾಪಾರ ಭರಾಟೆ ಜೋರಾಗಿದೆ. ಕನಿಷ್ಠ 80ರಿಂದ 180 ರೂ.ವರೆಗೆ ಹಣ್ಣು ಮಾರಾಟವಾಗುತ್ತಿದೆ.
    ಕುಕ್ಕರಹಳ್ಳಿ ಕೆರೆ ರಸ್ತೆ, ಜೆಎಲ್‌ಬಿ ರಸ್ತೆ, ಮಹಾರಾಜ ಕಾಲೇಜು ಮುಂಭಾಗದ ರಸ್ತೆ, ಕ್ರಾಫರ್ಡ್ ಹಾಲ್ ಮುಂಭಾಗ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ನಗರದ ಹಲವೆಡೆ ತಳ್ಳುಗಾಡಿ ಹಾಗೂ ಆಟೋಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

    ಮಾವಿನಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಅಂಶಗಳಿರುತ್ತವೆ. ಅಲ್ಲದೆ, ನಾರಿನಾಂಶ ಒಳಗೊಂಡಿರುತ್ತದೆ. ಹಾಗಾಗಿ ಮಾವು ಮಲಬದ್ಧತೆ ನಿವಾರಣೆಗೆ ತುಂಬ ಒಳ್ಳೆಯದು. ಜತೆಗೆ, ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಾವಿನಹಣ್ಣಿನ ಸೀಜನ್ ಬಂದಾಗಲೆಲ್ಲ ನಾವು ಮಾವಿನ ವಿವಿಧ ತಳಿಯ ಹಣ್ಣುಗಳನ್ನು ಸವಿಯುವುದನ್ನು ತಪ್ಪಿಸುವುದಿಲ್ಲ. ನಮ್ಮ ಮನೆಯಲ್ಲಿ ಮಾವು ಎಂದರೆ ಎಲ್ಲರಿಗೂ ಪಂಚಪ್ರಾಣ. ವಾರಕ್ಕೆ ಎರಡು ಬಾರಿ ಹಣ್ಣು ಖರೀದಿಸುತ್ತೇವೆ ಎನ್ನುತ್ತಾರೆ ಕುವೆಂಪುನಗರದ ನಿವಾಸಿ ಶಿವಕುಮಾರ್.

    ತೋಟಗಾರಿಕೆ ಇಲಾಖೆ, ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ನಗರದ ಕರ್ಜನ್ ಪಾರ್ಕ್ ಆವರಣದಲ್ಲಿ ಈ ಬಾರಿ ಮಾವು ಮತ್ತು ಹಲಸು ಮೇಳವನ್ನು ಮೇ ಕಡೆಯ ವಾರದಲ್ಲಿ ಆಯೋಜಿಸಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ರೈತರ ಸಭೆ ನಡೆಸಲಿದ್ದು, ಈ ಸಂಬಂಧ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    ರುದ್ರೇಶ್, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಮೈಸೂರು

    ನಾನು ಎಲ್ಲ ರೀತಿಯ ಹಣ್ಣಿನ ವ್ಯಾಪಾರ ಮಾಡುತ್ತೇನೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಾವಿನ ವ್ಯಾಪಾರ ಬಹಳ ಚೆನ್ನಾಗಿ ನಡೆಯುತ್ತದೆ. ಈ ಬಾರಿ ಏಪ್ರಿಲ್ ಮೂರನೇ ವಾರದಿಂದಲೇ ವ್ಯಾಪಾರ ಉತ್ತಮವಾಗಿದೆ. ದಿನಕ್ಕೆ 1ರಿಂದ 2 ಸಾವಿರ ರೂ. ವ್ಯಾಪಾರವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಲಾಭದ ನಿರೀಕ್ಷೆ ಇದೆ.
    ರಮೇಶ್, ಹಣ್ಣಿನ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts