More

    ಮತ್ತಿಬ್ಬರಲ್ಲಿ ಸೋಂಕು ಪತ್ತೆ: ಕನಕಪುರದಲ್ಲಿ ಕರೊನಾಗೆ ಮೊದಲ ಬಲಿ

    ರಾಮನಗರ: ಕರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಕನಕಪುರದ ವ್ಯಕ್ತಿ ಮಂಗಳವಾರ ಸಂಜೆ ಮೃತಪಟ್ಟಿದ್ದಾನೆ. ನಾಲ್ಕು ದಿನಗಳ ಹಿಂದೆ ಈತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೃತ ವ್ಯಕ್ತಿ ನಗರದ ಮೇಗಳ ಬೀದಿ ನವಗ್ರಹ ದೇವಾಲಯ ಹಿಂದಿನ ರಸ್ತೆ ನಿವಾಸಿಯಾಗಿದ್ದು ಹಾಗೂ ಬೂದಿಕೆರೆ ರಸ್ತೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ. ಮೃತನಿಗೆ 75 ವರ್ಷ ವಯಸ್ಸಾಗಿತ್ತು ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರು ತಿಳಿಸಿದ್ದಾರೆೆ.

    ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಏರಿಕೆಯಾಗುತ್ತಿದ್ದು, ಮಂಗಳವಾರವೂ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇನ್ನೆರೆಡು ಪ್ರಕರಣಗಳು ಸಂದೇಹವನ್ನುಂಟು ಮಾಡಿದ್ದು, ಬುಧವಾರದ ಹೆಲ್ತ್ ಬುಲೆಟಿನ್ ಮೇಲೆ ದೃಷ್ಟಿ ನೆಟ್ಟಿದೆ.
    ಮಂಗಳವಾರ ಎರಡು ಪ್ರಕರಣಗಳು ದೃಢಪಡುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆ ಆಗಿದೆ.

    ಚನ್ನಪಟ್ಟಣ ತಾಲೂಕಿನ 25 ವರ್ಷದ ಮಹಿಳೆಗೆ ಕರೊನಾ ಪಾಸಿಟಿವ್ ಬಂದಿದ್ದು, ಪ್ರಕರಣ ಸಂಖ್ಯೆ 6138 ಸೋಂಕಿತ ವ್ಯಕ್ತಿ ಜೆಜೆ ನಗರ ಪೊಲೀಸ್ ಠಾಣೆ ಕಾನ್‌ಸ್ಟೇಬಲ್ ಅವರ ಸಹೋದರಿ ಆಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದ ಸಹೋದರಿ ಮನೆಗೆ ಸೋಂಕಿತ (6138) ಯುವಕ 3ರಿಂದ4 ಬಾರಿ ಹೋಗಿ ಬಂದಿದ್ದ. ಜೂ. 10ರಂದು ಪ್ರಕರಣ ಸಂಖ್ಯೆ 6138 ಯುವಕನಿಗೆ ಸೋಂಕು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತನ ಸಹೋದರಿ ಹಾಗೂ ಭಾವ ಚನ್ನಪಟ್ಟಣದ ಹೊನ್ನಾಯಕನಹಳ್ಳಿ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಇದೀಗ ಕ್ವಾರಂಟೈನ್‌ನಲ್ಲಿದ್ದ ಮಹಿಳೆಗೆ ಪಾಸಿಟಿವ್ ಬಂದಿದೆ. ಸೋಂಕಿತ ಮಹಿಳೆಯನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಕನಕಪುರ: ತಾಲೂಕಿನಲ್ಲಿ ಮಂಗಳವಾರ ಮತ್ತೊಂದು ಕರೊನಾ ಪ್ರಕರಣ ಪತ್ತೆಯಾಗಿದೆ. 40 ವರ್ಷದ ವ್ಯಕ್ತಿಗೆ ಮಂಗಳವಾರ ಸೋಂಕು ಪತ್ತೆಯಾಗಿದೆ. ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕುತ್ತಿದ್ದಾರೆ. ಈತ ಬೆಂಗಳೂರಿನ ಕಾರ್ಖನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಅಲ್ಲಿಂದಲೇ ಸೋಂಕು ಹರಡಿರಬಹುದು ಎನ್ನುವುದು ಆರೋಗ್ಯ ಇಲಾಖೆಯ ವಾದ.
    ಎರಡು ಪ್ರಕರಣಗಳು ಸಂದೇಹ: ಬಿಡದಿಯಲ್ಲಿ ಕೆಲಸ ಮಾಡುತ್ತಾ ಪಟ್ಟಣದ ಹಳೇ ಆವರಗೆರೆ ರಸ್ತೆಯಲ್ಲಿ ಆಂಧ್ರಪ್ರದೇಶದಿಂದ ಬಂದಿದ್ದ ವ್ಯಕ್ತಿಗೆ ಸೋಂಕು ಇತ್ತು ಎನ್ನಲಾಗಿದ್ದು, ಇದೀಗ ಈತ ತನ್ನ ರಾಜ್ಯಕ್ಕೆ ವಾಪಸಾಗಿದ್ದಾನೆ. ಆಂಧ್ರದಲ್ಲೇ ಪರೀಕ್ಷೆಗೆ ಒಳಗಾಗಿದ್ದರು. ಈತನ ಜತೆ ಇದ್ದ ಮತ್ತೊಬ್ಬ ಯುವಕನನ್ನು ಸದ್ಯ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಹೀಗಾಗಿ ಈತನಿಗೂ ಬುಧವಾರ ಸೋಂಕು ಧೃಡಪಡುವ ಸಾಧ್ಯತೆಗಳಿವೆ. ಹೀಗಾಗಿ ಬಿಡದಿಯ ಕೇತಗಾನಹಳ್ಳಿ ರಸ್ತೆ, ಮಸೀದಿ ರಸ್ತೆ, ಹೊಸಬೀದಿ, ಆರ್‌ಜಿಎಸ್ ರಸ್ತೆಗಳ ಮೇಲೆ ಅಧಿಕಾರಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ.

    ಇನ್ನು ಮಾಗಡಿ ಪಟ್ಟಣದಲ್ಲಿ ಮಂಗಳವಾರ ಮತ್ತೊಂದು ಪ್ರಕರಣ ಪತ್ತೆಯಾಗಿರುವ ಮಾಹಿತಿ ಇದೆ. ತಿರುಮಲೆ ಬಡಾವಣೆಯ 56 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಮಾಗಡಿ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಶನಿವಾರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆಗೆಂದು ಕಿಮ್ಸ್ ಆಸ್ಪತ್ರೆಗೆ ತೆರಳಿದ್ದಾಗ, ವೈದ್ಯರು ತಪಾಸಣೆ ವೇಳೆ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳಿಸಿದ್ದರು. ವರದಿ ಪಾಸಿಟಿವ್ ಬಂದಿದ್ದರಿಂದ ಮಂಗಳವಾರ ಮಧ್ಯಾಹ್ನ ಸೋಂಕಿತನನ್ನು ವಿಕ್ಟೋರಿಯಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ ಬಾಮೈದ, ಹೆಂಡತಿ, ಇಬ್ಬರು ಮಕ್ಕಳನ್ನು ಹುಲಿಕಟ್ಟೆ ಕ್ವಾರಂಟೈನ್ ಸೆಂಟರ್‌ಗೆ ದಾಖಲಿಸಲಾಗಿದೆ. ಸೋಂಕಿತನಿದ್ದ ಬೀದಿಯನ್ನು ಸೀಲ್‌ಡೌನ್ ಮಾಡಲು ಪುರಸಭೆ ಮುಖ್ಯಾಧಿಕಾರಿ ಮಹೇಶ್ ಕ್ರಮ ಕೈಗೊಂಡಿದ್ದಾರೆ. ಸ್ಥಳವನ್ನು ಈಗಾಗಲೇ ಸ್ಯಾನಿಟೈಸ್ ಮಾಡಿ, ಔಷಧ ಸಿಂಪಡಿಸಲಾಗಿದೆ. ಆದರೆ ಈ ಎರಡೂ ಪ್ರಕರಣಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಖಚಿತ ಪಡಿಸಿಲ್ಲ.

    ನಿಗಾದಲ್ಲಿ ಸಂಸ್ಕಾರ: ಸೋಮವಾರ ಕರೊನಾ ಸೋಂಕಿನಿಂದ ಮೃತಪಟ್ಟ ಬಿಡದಿ ವ್ಯಕ್ತಿಯ ಅಂತ್ಯಸಂಸ್ಕಾರ ವೈದ್ಯಕೀಯ ಮುಂಜಾಗ್ರತೆಗಳೊಂದಿಗೆ ತಹಸೀಲ್ದಾರ್ ಸಮ್ಮುಖದಲ್ಲಿ ಬಿಡದಿಯಲ್ಲಿ ನೆರವೇರಿಸಲಾಯಿತು. ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು(ವಿದ್ಯುತ್ ಚಿತಾಗಾರದಲ್ಲಿ) ಅವಕಾಶವಿತ್ತು. ಆದರೆ, ಸೋಮವಾರ ಬೆಂಗಳೂರಿನಲ್ಲೇ ಮೃತ ಪಟ್ಟ ನಾಲ್ವರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಹೀಗಾಗಿ ಬಿಡದಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ.

    ಸರ್ಕಾರದ ಮಾರ್ಗಸೂಚಿಯಂತೆ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲಾಗಿದೆ. ಜಿಲ್ಲೆಯಲ್ಲಿ ಮಂಗಳವಾರದ ಅಂತ್ಯಕ್ಕೆ 25 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳು ಧೃಡಪಟ್ಟಿವೆ. ಜನತೆ ಎಚ್ಚರಿಕೆಯಿಂದ ವರ್ತಿಸಬೇಕಿದೆ.
    ಎಂ.ಎಸ್.ಅರ್ಚನಾ, ಜಿಲ್ಲಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts