More

    ಎಷ್ಟೇ ದೊಡ್ಡವರಿರಲಿ ಮುಲಾಜಿಲ್ಲದೆ ಕ್ರಮ ಅಗತ್ಯ

    ಮೈಸೂರು: ಡ್ರಗ್ಸ್ ದಂಧೆಯಲ್ಲಿ ಯಾರೇ ಇರಲಿ, ಎಷ್ಟೇ ದೊಡ್ಡವರಿರಲಿ ಯಾವ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.

    ಡ್ರಗ್ಸ್ ದಂಧೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇದರಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಅವರ ಮಕ್ಕಳು, ವ್ಯಾಪಾರಸ್ಥರು, ಅಧಿಕಾರಿ ವರ್ಗ ಸೇರಿದಂತೆ ಯಾರೇ ಅದರೂ ಇಂತಹ ದುಶ್ಚಟಗಳ ವ್ಯಸನಕ್ಕೆ ತುತ್ತಾಗಿದ್ದರೆ ಅಂಥಹವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ. ಯಾರೇ ತಪ್ಪು ಮಾಡಿದರೂ ಅದು ತಪ್ಪೇ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರಕರಣದಲ್ಲಿ ಭಾಗಿಯಾದವರು ನಟ, ನಟಿ, ಯಾವ ರಾಜಕಾರಣಿ, ಮಕ್ಕಳು, ಉದ್ಯಮಿಯಾದರೂ ಬಿಡಬೇಕು ಎನ್ನುವುದೇನಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಅವರಿಂದ ಸಮಾಜ ಯಾವ ರೀತಿ ಹಾಳಾಗುತ್ತಿದೆ ಅದನ್ನು ನಿಯಂತ್ರಿಸಲು ಸರ್ಕಾರ ಯಾವ ಕಾನೂನು ರೀತಿ ಕ್ರಮ ಜರುಗಿಸಬೇಕು ಅದನ್ನು ಖಂಡಿತ ಮಾಡುತ್ತದೆ ಎಂದರು.

    20 ವರ್ಷಗಳಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ. ರಾಜಕೀಯಕ್ಕೆ ಬಂದ ಮೇಲೂ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಇದೇ ಮೊದಲು ಚಿತ್ರರಂಗದಲ್ಲಿ ಡ್ರಗ್ಸ್ ವಿಷಯವನ್ನು ಕೇಳುತ್ತಿರುವುದು. ಈಗ ಡ್ರಗ್ಸ್ ದಂಧೆ ಸಿನಿಮಾರಂಗದಲ್ಲಿ ಬಂದಿದೆ ಎನ್ನುವುದು ಬಹಳ ದುರದೃಷ್ಟಕರ. ಸಿನಿಮಾದವರಿಗೆ ಆಗಾಗ ಯಾಕೆ ಜಾಸ್ತಿ ಪ್ರಚಾರ ಸಿಗುತ್ತದೆ ಅಂತ ಹೇಳಿದರೆ ಸಿನಿಮಾದಲ್ಲಿರೋರು ಸೆಲೆಬ್ರಿಟಿಗಳು ಎಂದು ಪ್ರಶ್ನೆಗೆ ಉತ್ತರಿಸಿದರು.
    ಚಿತ್ರರಂಗ, ರಾಜಕೀಯದಲ್ಲಿ ಇರುವವರು ಗಾಜಿನ ಮನೆಯಲ್ಲಿ ಇದ್ದ ಹಾಗೆ. ನಮ್ಮನ್ನು ಇಡೀ ಜಗತ್ತು ನೋಡುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ನಾವೊಂದು ಸಣ್ಣ ತಪ್ಪು ಮಾಡಿದರೂ ಅದು ಪರಿಣಾಮ ಬೀರುತ್ತದೆ. ಆದರೆ ಈಗ ಮಾದಕ ವ್ಯಸನಿಗಳು ಎಂದು ತಿಳಿದಾಗ ಅವರಿಂದ ಯಾವ ಸಂದೇಶ ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು.

    ಸಿನಿಮಾ ರಂಗ ಮಾದರಿಯಾಗಬೇಕೇ ಹೊರತು, ಕೆಟ್ಟ ರೀತಿಯಲ್ಲಿ ತೋರಿಸಿಕೊಳ್ಳುವುದರ ಜತೆಗೆ ನಾವು ಅದರಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದ ಮೇಲೆ, ಅಭಿಮಾನಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅದನ್ನು ಬಹಳ ಗಂಭೀರವಾಗಿ ಸರ್ಕಾರ ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದರು.

    ದೊಡ್ಡ, ಪ್ರತಿಷ್ಠಿತ ಶಾಲೆಗಳ ಸುತ್ತಮುತ್ತ ಡ್ರಗ್ಸ್ ದಂಧೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂತಹ ದಂಧೆಯನ್ನು ಸಂಪೂರ್ಣ ನಾಶ ಆಗಬೇಕು. ಇಲ್ಲವಾದರೆ ಮುಂದಿನ ಜನಾಂಗಕ್ಕೆ ಇದು ಬಹುದೊಡ್ಡ ಮಾರಕವಾಗಲಿದೆ ಎಂದು ತಿಳಿಸಿದರು.

    ರೈತರ ಮನೆಯಲ್ಲಿ ವಾಸ್ತವ್ಯ: ಕೃಷಿ ಸಚಿವನಾಗಿ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿ ಬಂದಿದ್ದೇನೆ. ಕರೊನಾ ವೈರಸ್ ಅಬ್ಬರ ಕಡಿಮೆಯಾದ ಬಳಿಕ ಮುಂದಿನ ದಿನಗಳಲ್ಲಿ ರೈತರ ಮನೆಗಳಲ್ಲಿ ವಾಸ್ತವ್ಯ ಮಾಡಿ ಅವರ ಸಮಸ್ಯೆಗಳನ್ನು ಅಲಿಸುತ್ತೇನೆ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ಕೆ ಮುಂದಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ನಿರೀಕ್ಷೆಗಿಂತ ಹೆಚ್ಚು ಮುಂಗಾರು ಮಳೆಯಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ. ರೈತರಿಗೆ ಯಾವುದೇ ರೀತಿಯ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ನನ್ನ ಜತೆಯಲ್ಲಿರುವವರು ಆದಷ್ಟು ಬೇಗ ಸಚಿವರಾಗುತ್ತಾರೆ. ಆದರೆ ಯಾವಾಗ, ಯಾರು ಆಗುತ್ತಾರೆ ಎನ್ನುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ತೀರ್ಮಾನಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts