More

    ಜನರ ಕಲ್ಯಾಣಕ್ಕಾಗಿ ಮಠಗಳು ಶ್ರಮ

    ನಂಜನಗೂಡು: ಸರ್ಕಾರ ಮಾಡಲಾಗದ ಅನೇಕ ಕೆಲಸ ಕಾರ್ಯಗಳನ್ನು ಮಠಮಾನ್ಯಗಳು ಮಾಡುವ ಮೂಲಕ ಜನಸಾಮಾನ್ಯರ ಕಲ್ಯಾಣಕ್ಕೆ ಶ್ರಮಿಸುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

    ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶನಿವಾರ ನಡೆದ ಕೃಷಿಮೇಳ ಹಾಗೂ ವಸ್ತುಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಠಮಾನ್ಯಗಳು ಧರ್ಮವನ್ನು ಉಳಿಸಿ ವಿಸ್ತರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಮೈಸೂರಿನ ಮಹಾರಾಜರು ಅರಮನೆ ಕಟ್ಟಿದ್ದರೆ, ಸುತ್ತೂರು ಮಠ ಅರಿವಿನ ಮನೆ ಕಟ್ಟಿರುವುದನ್ನು ನಾವು ಸುತ್ತೂರು ಜಾತ್ರೆಯಲ್ಲಿ ಕಾಣಬಹುದು. ನಾವೆಲ್ಲರೂ ಧರ್ಮದ ಹಾದಿಯಲ್ಲಿ ಬದುಕು ಕಟ್ಟಿಕೊಂಡು ಸುಖ ಶಾಂತಿ ಕಾಣಬೇಕು ಎಂದರು.

    ಮೇಕೆದಾಟು ಹೋರಾಟ ಕೈಗೊಳ್ಳುವ ಮುನ್ನ ಸುತ್ತೂರು ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದಾಗ ಸಾವಿರಾರು ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹರಸುವ ಮೂಲಕ ಹೋರಾಟಕ್ಕೆ ಚೈತನ್ಯ ತುಂಬಿದ್ದರು. ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡುವುದರಿಂದ ರಾಜ್ಯದ ಹಲವು ಪ್ರದೇಶಗಳಿಗೆ ಅನುಕೂಲ ಆಗಲಿದೆ. ಈ ದಿಶೆಯಲ್ಲಿ ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಬದ್ಧನಾಗಿರುವುದಾಗಿ ತಿಳಿಸಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಭಾರತೀಯ ಸಂಸ್ಕೃತಿ ವಿಶ್ವಾದ್ಯಂತ ಮನ್ನಣೆಗೆ ಪಾತ್ರವಾಗಿದೆ ಎಂದರೆ ಮಠಮಾನ್ಯಗಳ ಅಹರ್ನಿಷಿ ಸೇವಾ ಕಾರ್ಯಗಳಿಂದ ಸಾಧ್ಯವಾಗಿದೆ. ಸುತ್ತೂರು ಜಾತ್ರೆಯ ಮೂಲಕ ಜನರಲ್ಲಿ ಅರಿವಿನ ಬುತ್ತಿಯನ್ನು ಕಟ್ಟಿಕೊಡುವ ಮೂಲಕ ಜಾಗೃತ ಸಮಾಜ ನಿರ್ಮಾಣಕ್ಕೆ ಸದಾ ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

    ಹೋದ ಕಡೆಯೆಲ್ಲ ಮಹಿಳೆಯರು ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಯಿಂದ ನಮಗೆ ಸಾಕಷ್ಟು ನೆರವಾಗಿದೆ ಎಂದು ಹೇಳುವುದನ್ನು ಕೇಳಿದಾಗ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಿದ್ದಕ್ಕೂ ಸಾರ್ಥಕ ಎಂಬ ಭಾವ ಮೂಡುತ್ತದೆ ಎಂದು ಹೇಳಿದರು.

    ವಸ್ತುಪ್ರದರ್ಶನ ಹಾಗೂ ಕೃಷಿ ಮೇಳದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಾಟಾಳಿನ ಸೂರ್ಯ ಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ದಿವ್ಯಜ್ಯೋತಿ ಜಾಗೃತಿ ಸಂಸ್ಥಾನದ ಮಾತಾ ಸಾಧ್ವಿ ಉನ್ಮೇಷ ಭಾರತೀ ಆಶೀರ್ವಚನ ನೀಡಿದರು.

    ಮಾಜಿ ಸಚಿವ ಸಿ.ಟಿ.ರವಿ, ಶಾಸಕರಾದ ದರ್ಶನ್ ಧ್ರುವನಾರಾಯಣ, ನಯನಾ ಮೋಟಮ್ಮ, ಮೈಮುಲ್ ಅಧ್ಯಕ್ಷ ಪ್ರಸನ್ನ, ಅಯೋಧ್ಯೆ ಮಾಜಿ ಮೇಯರ್ ಋಷಿಕೇಶ ಉಪಾಧ್ಯ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts