More

    ಮತಭಾರತ ಲೋಕಸಭೆ ಚುನಾವಣೆ 2024| ಬೆಂಗಳೂರು ಕೇಂದ್ರ ನಾನಾ ಲೆಕ್ಕಾಚಾರ

    ವಿಲಾಸ ಮೇಲಗಿರಿ, ಬೆಂಗಳೂರು

    ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವು 2008ರ ಕ್ಷೇತ್ರ ಮರುವಿಂಗಡಣೆ ಬಳಿಕ ಹುಟ್ಟು ಪಡೆದಿದೆ. ಆ ತರುವಾಯ ನಡೆದ 2009, 2014, 2019ರ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ಪಿ.ಸಿ.ಮೋಹನ್ ಸತತವಾಗಿ ವಿಜಯ ಸಾಧಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬ ಭಾವನೆ ಇದೆ. ಸಂಸದ ಪಿ.ಸಿ.ಮೋಹನ್ ಈ ಬಾರಿಯೂ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಕೆಲವು ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಬಿಜೆಪಿಯಲ್ಲಿದೆ. ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಜೈಶಂಕರ್ ಹೆಸರು ಚಾಲ್ತಿಯಲ್ಲಿವೆ. ಅರವಿಂದ ಲಿಂಬಾವಳಿ ಕೂಡ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಕಾರಣ ಮಂಡ್ಯ ಟಿಕೆಟ್ ಕೈತಪ್ಪಬಹುದೆಂಬ ಲೆಕ್ಕಾಚಾರದಲ್ಲಿ ಸಂಸದೆ ಸುಮಲತಾ ಕೂಡ ಕ್ಷೇತ್ರದಿಂದ ಕಣಕ್ಕಿಳಿಯಬಹುದೆಂಬ ಸುದ್ದಿಯೂ ಇದೆ. ಬಿಜೆಪಿಯಲ್ಲಿ ಕ್ಷೇತ್ರವಾರು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಹಾಗಾಗಿ ಅಭ್ಯರ್ಥಿಗಳ ಕುರಿತ ಚರ್ಚೆ ಇನ್ನೂ ಅಂತಿಮ ಹಂತ ತಲುಪಿಲ್ಲ. ಕಾರಣ ಗಾಳಿ ಸುದ್ದಿಗಳು ಬೀಸುತ್ತಿದ್ದು, ಹೊಸ ಹೆಸರುಗಳು ತೇಲುತ್ತಿವೆ.
    5 ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ: ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 2023ರ ಚುನಾವಣೆಯಲ್ಲಿ 5 ಕಾಂಗ್ರೆಸ್, 3 ಬಿಜೆಪಿ ಪಾಲಾಗಿವೆ. ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಮತ ಬಾಹುಳ್ಯದ ಕಾರಣ ಕ್ಷೇತ್ರದ ಮೇಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.
    ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಹ್ಯಾರೀಸ್ ಎಐಸಿಸಿ ಮಟ್ಟದಲ್ಲಿ ಟಿಕೆಟ್​ಗೆ ಪ್ರಯತ್ನ ನಡೆಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲವೂ ಇದೆ. ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಪುತ್ರ ಹಾಗೂ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಆಲಿಖಾನ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎ.ಹುಸೇನ್ ಕೂಡ ಆಕಾಂಕ್ಷಿಗಳು. 2019ರ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿ, 70,968 ಮತಗಳ ಅಂತರದಿಂದ ಪರಾಭವಗೊಂಡಿದ್ದ ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಅವರನ್ನು ಪುನಃ ಕಣಕ್ಕಿಳಿಸಿದರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಕಾಂಗ್ರೆಸ್​ನಲ್ಲಿದೆ. ಆದರೆ ರಿಜ್ವಾನ್ ಸ್ಪರ್ಧೆ ನಿರಾಕರಿಸಿದ್ದಾರೆಂದು ಹೇಳಲಾಗುತ್ತಿದೆ. ಬಿ.ಕೆ.ಹರಿಪ್ರಸಾದ್ ಕೂಡ ಟಿಕೆಟ್ ಬಯಸಿದ್ದಾರೆ ಎನ್ನಲಾಗಿದೆ.

    ಮೋಹನ್ ಸ್ಪರ್ಧೆಗೆ ಅಡ್ಡಿ!: ಎರಡು ಬಾರಿ ಶಾಸಕರು, ಮೂರು ಬಾರಿ ಸಂಸದರಾಗಿರುವ ಪಿ.ಸಿ.ಮೋಹನ್​ಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್​ನಲ್ಲಿ ಅನಿಶ್ಚಿತತೆ ಇದೆ ಎನ್ನಲಾಗಿದ್ದು, ಟಿಕೆಟ್ ನೀಡಬೇಕೇ? ಬೇಡವೇ? ಎಂಬ ಜಿಜ್ಞಾಸೆ ಶುರುವಾಗಿದೆ. ಈ ನಡುವೆ ಸುಮಲತಾ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಚರ್ಚೆಯೂ ನಡೆಯುತ್ತಿದೆ. ಬಿ.ಎಸ್.ಯಡಿಯೂರಪ್ಪ ಜತೆ ಮೋಹನ್ ಉತ್ತಮ ಒಡನಾಟ ಹೊಂದಿದ್ದು, ಅವರೇ ಹುರಿಯಾಳಾಗುವ ಸಾಧ್ಯತೆ ದಟ್ಟವಾಗಿವೆ.

    ಬೆಂಗಳೂರು ಕೇಂದ್ರ
    ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಇಡಲು ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ದಂಡು

    ವಿಧಾನಸಭಾ ಕ್ಷೇತ್ರದ ಬಲಾಬಲ
    ಸರ್ವಜ್ಞನಗರ ಕಾಂಗ್ರೆಸ್
    ಶಿವಾಜಿನಗರ ಕಾಂಗ್ರೆಸ್
    ಶಾಂತಿನಗರ ಕಾಂಗ್ರೆಸ್
    ಗಾಂಧಿನಗರ ಕಾಂಗ್ರೆಸ್
    ಚಾಮರಾಜಪೇಟೆ ಕಾಂಗ್ರೆಸ್
    ಸಿ.ವಿ.ರಾಮನ್ ನಗರ ಬಿಜೆಪಿ
    ರಾಜಾಜಿನಗರ ಬಿಜೆಪಿ
    ಮಹದೇವಪುರ ಬಿಜೆಪಿ

    ಲಿಂಬಾವಳಿ ಲೆಕ್ಕಾಚಾರ ಏನು? ವಿಧಾನಸಭೆ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರಕ್ಕೆ ಅರವಿಂದ ಲಿಂಬಾವಳಿ ಬದಲು ಅವರ ಪತ್ನಿಗೆ ಟಿಕೆಟ್ ನೀಡಲಾಗಿತ್ತು. ಕ್ಷೇತ್ರ 6 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಜತೆಗೆ, ಪತ್ನಿ ಮಂಜುಳಾ ಲಿಂಬಾವಳಿ ಹಾಲಿ ಶಾಸಕಿ. ಈ ಮ್ಯಾಟ್ರಿಕ್ಸ್ ಮುಂದಿಟ್ಟು ಲಿಂಬಾವಳಿ ಟಿಕೆಟ್ ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಸರ್ವೆ ವರದಿಯಿಂದ ಪೈಪೋಟಿ ಕ್ಷೇತ್ರದಲ್ಲಿ ಪ್ರಯತ್ನ ಪಟ್ಟರೆ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂಬ ವರದಿಯೊಂದು ಕೆಪಿಸಿಸಿ ಕೈಸೇರಿದೆ. ಜತೆಗೆ ಈ ಬಾರಿ ಮೂವರು ಮುಸ್ಲಿಂರಿಗೆ ಟಿಕೆಟ್ ನೀಡಬೇಕೆಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಬೇಡಿಕೆ ಇಟ್ಟಿದ್ದು, ನೀವೇ ಅಭ್ಯರ್ಥಿಯಾಗಿ ಎಂದು ವರಿಷ್ಠರು ಸಂದೇಶ ರವಾನಿಸಿದ್ದಾರೆ. ನನಗೆ ಬೇಡ. ಯಾರಿಗೇ ಕೊಟ್ಟರೂ ಗೆಲುವಿಗೆ ಶ್ರಮಿಸುವುದಾಗಿ ಜಮೀರ್ ಭರವಸೆ ನೀಡಿದ್ದಾರೆ.  ಮೂವರು ಸಚಿವರಿಗೆ ಟಾಸ್ಕ್ ಬಿಜೆಪಿ ಸಂಸದರಿದ್ದರೂ ಕ್ಷೇತ್ರವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಮೂವರು ಸಚಿವರಿದ್ದಾರೆ. ಸರ್ವಜ್ಞ ನಗರದ ಕೆ.ಜೆ.ಜಾರ್ಜ್, ಚಾಮರಾಜಪೇಟೆಯ ಜಮೀರ್ ಅಹಮ್ಮದ್, ಗಾಂಧಿನಗರದ ದಿನೇಶ್ ಗುಂಡೂರಾವ್​ಗೆ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಬೇಕಾದ ಹೊಣೆಗಾರಿಕೆ ಇರುವುದರಿಂದ ಟಿಕೆಟ್​ಗೆ ಪೈಪೋಟಿ ಕಂಡುಬಂದಿದೆ. ಕಾಂಗ್ರೆಸ್ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವುದರಿಂದ ಈ ಬಾರಿ ಪೈಪೋಟಿ ಎದುರಾಗುವ ಸಾಧ್ಯತೆಗಳಿವೆ. ಕ್ಷೇತ್ರದಲ್ಲಿ ಕಾಪೋರೇಟ್ ಕಲ್ಚರ್, ಐಟಿ, ಬಿಟಿ ಕಂಪನಿಗಳೇ ಹೆಚ್ಚಿರುವ ಕಾರಣ ರಾಮಮಂದಿರ, ಮೋದಿ ಮತ್ತೆ ಪ್ರಧಾನಿ ವಿಷಯಗಳೇ ಹೆಚ್ಚು ಪ್ರಾಶಸ್ತ್ಯ ಪಡೆಯುವ ಮಾತುಗಳು ಕೇಳಿ ಬರುತ್ತಿವೆ. ಗಮನಸೆಳೆದ ಸ್ಪರ್ಧಿಗಳು 2009ರಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ (ಕಾಂಗ್ರೆಸ್), 2014ರಲ್ಲಿ ಇನ್ಪೋಸಿಸ್ ಮಾಜಿ ನಿರ್ದೇಶಕ ವಿ. ಬಾಲಕೃಷ್ಣನ್ (ಎಎಪಿ), 2019ರ ಚುನಾವಣೆಯಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
    ಗ್ಯಾರಂಟಿಯೋ? ಮೋದಿಯೋ? ಮೋದಿ ಮತ್ತೆ ಪ್ರಧಾನಿ ಯಾಗಬೇಕೆಂಬ ಒಲವು ಕ್ಷೇತ್ರದ ಜನರಲ್ಲಿ ಹೆಚ್ಚು ಪ್ರಬಲವಾಗಿದೆ. ಕಾರಣ ರಾಜ್ಯ ಸರ್ಕಾರದ ಗ್ಯಾರಂಟಿಗಳಿಗಿಂತಲೂ ಮೋದಿ ವರ್ಚಸ್ಸು ಹೆಚ್ಚು ಕೆಲಸ ಮಾಡುವ ಸಾಧ್ಯತೆಗಳಿವೆ.

    ಮೂಲಸೌಕರ್ಯಗಳ ಭರಪೂರ ಅಭಿವೃದ್ಧಿ

    ಮತಭಾರತ ಲೋಕಸಭೆ ಚುನಾವಣೆ 2024| ಬೆಂಗಳೂರು ಕೇಂದ್ರ ನಾನಾ ಲೆಕ್ಕಾಚಾರಪಿ.ಸಿ. ಮೋಹನ್​, ಬೆಂಗಳೂರು ಕೇಂದ್ರ

    ನಾಲ್ಕು ಕಾರಿಡಾರ್​ಗಳಲ್ಲಿ 148 ಕಿಮೀ ಉದ್ದದ 58 ನಿಲ್ದಾಣಗಳೊಂದಿಗೆ ಬೆಂಗಳೂರು ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ.ಹೂಡಿಕೆ, 37 ಹೊಸ ರೈಲ್ವೆ ಯೋಜನೆಗಳ ಪ್ರಗತಿ, 33 ಹೆಚ್ಚುವರಿ ರೈಲ್ವೆ ಮಾರ್ಗ ಸ್ಥಾಪನೆ, ನಗರದಾದ್ಯಂತ ವಿವಿಧ ರೈಲು ನಿಲ್ದಾಣಗಳಲ್ಲಿ 28 ರೈಲುಗಳ ನಿಲುಗಡೆ, ತಡೆರಹಿತ ಪ್ರಯಾಣದ ಅನುಭವ ಖಾತರಿಪಡಿಸುವ 212.64 ಕೋಟಿ ರೂ. ಮೌಲ್ಯದ 6 ಪ್ರಮುಖ ರೈಲ್ವೆ ಮೂಲಸೌಕರ್ಯ ಸುಧಾರಣೆ ಯೋಜನೆ, 10 ರೈಲು ನಿಲ್ದಾಣಗಳಲ್ಲಿ 64 ವಿವಿಧ ಸೌಕರ್ಯಗಳಿಗಾಗಿ 365.207 ಕೋಟಿ ರೂ. ಹೂಡಿಕೆ ಖಾತ್ರಿಪಡಿಸಲಾಗಿದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಬೆಂಗಳೂರಿನ ಕೆ.ಆರ್.ಪುರ ಮತ್ತು ವೈಟ್​ಫೀಲ್ಡ್ ನಿಲ್ದಾಣ ನಿರ್ವಣ, ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು 480 ಕೋಟಿ ರೂ. ವೆಚ್ಚದಲ್ಲಿ ವಿಶ್ವ ದರ್ಜೆಯ ರಚನೆಯಾಗಿ ಮರು ಅಭಿವೃದ್ಧಿ, ಟ್ರಾಫಿಕ್ ದಟ್ಟಣೆ ನಿವಾರಿಸಲು 288 ಕಿ.ಮೀ. ಬೆಂಗಳೂರಿನಲ್ಲಿ ಪ್ರಯಾಣ ಸುಲಭಗೊಳಿಸಲು 17,000 ಕೋಟಿ ರೂ. ಉಪಕ್ರಮ, ಸ್ಮಾರ್ಟ್ ಸಿಟಿ ಯೋಜನೆಯಡಿ ಪರಿವರ್ತಕ ಅಭಿವೃದ್ಧಿ ಯೋಜನೆಗಳಿಗೆ 1,000 ಕೋಟಿ ರೂ. ಅನುದಾನದ ಬೆಂಬಲ ಸೇರಿ ಹಲವು ಹತ್ತು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಹಸಿರು ಸಾರಿಗೆಗೆ ಆದ್ಯತೆ, ನಿರ್ಭಯ ಅನುದಾನದ ಅಡಿಯಲ್ಲಿ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸೇಫ್ ಸಿಟಿ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಬೆಂಗಳೂರಿನ ರೈಲು ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆ, ಅಮೃತ್ ಯೋಜನೆಯಡಿ ಬೆಳ್ಳಂದೂರು, ವರ್ತರು ಮತ್ತು ರಾಂಪುರ ಕೆರೆಗಳ ಅಭಿವೃದ್ಧಿ ಸಂಸದರ ಸಾಧನೆಗಳ ಪಟ್ಟಿಗೆ ಸೇರಿವೆ. ಆದರೂ ಸಂಚಾರ ದಟ್ಟಣೆ ನಿವಾರಿಸಲು ಗಂಭೀರ ಪ್ರಯತ್ನ ಮಾಡಿಲ್ಲ. ಮೂರು ಬಾರಿ ಸಂಸದರಾದರೂ ವಿಶೇಷ ಅನುದಾನ ತಂದು ಶಾಶ್ವತವಾಗಿ ಉಳಿಯುವ ಕೆಲಸಗಳಾಗಿಲ್ಲ ಎಂಬ ಆರೋಪಗಳೂ ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts