ಬೆಳಗಾವಿ: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಹಲವು ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ, ಸಾರ್ವಜನಿಕರಿಗೆ ಸಾಮೂಹಿಕ ಶೌಚಗೃಹ ಸೌಲಭ್ಯಗಳಿಲ್ಲದೆ ರಸ್ತೆ ಬದಿ, ಸರ್ಕಾರಿ ಕಟ್ಟಡಗಳ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಅಲ್ಲಲ್ಲಿ ಗಬ್ಬು ವಾಸನೆ ಬರುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಂದ ನಗರದ ಜನರು ಎದುರಿಸುತ್ತಿರುವ ಮೂಲ ಸೌಕರ್ಯಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು, ಮಾರುಕಟ್ಟೆಗಳ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ತಪ್ಪಿಲ್ಲ, ರಸ್ತೆ ಬದಿಯಲ್ಲಿ ಬೀದಿ ವ್ಯಾಪಾರ ವಹಿವಾಟು ನಿಂತಿಲ್ಲ.
ಜಿಲ್ಲೆಯ ವಿವಿಧ ಭಾಗಗಳಿಂದ ಸರ್ಕಾರಿ ಕಚೇರಿಗಳಿಗೆ, ನ್ಯಾಯಾಲಯಕ್ಕೆ, ಆಸ್ಪತ್ರೆಗಳಿಗೆ ಇತರ ಕೆಲಸಗಳ ನಿಮಿತ್ತ ಬೆಳಗಾವಿ ನಗರಕ್ಕೆ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ, ಕೇಂದ್ರ ಬಸ್ ನಿಲ್ದಾಣ ಹೊರತು ಪಡಿಸಿದರೆ ಇತರ ಕಡೆಗಳಲ್ಲಿ ಸಾಮೂಹಿಕ ಶೌಚಗೃಹಗಳ ಸೌಲಭ್ಯ ಇಲ್ಲ. ಪರಿಣಾಮ ರಾಣಿ ಚನ್ನಮ್ಮ ವೃತ್ತ, ಕಾಲೇಜ್ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಆರ್‌ಟಿಒ ಮಾರ್ಗ, ಆರ್‌ಪಿಡಿ ವೃತ್ತ ಸೇರಿ ವಿವಿಧ ಕಡೆಗಳಲ್ಲಿ ಜನರು ಕಾಂಪೌಂಡ್, ಮರಗಳ ಪೊದೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಇದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ. ನಗರದಲ್ಲಿ ಸಂಚಾರ ದಟ್ಟಣೆ, ಪಾರ್ಕಿಂಗ್, ಕಿರಿದಾದ ರಸ್ತೆಗಳಿಂದ ನಿತ್ಯ ಜನರು ಸಮಸ್ಯೆ ಎದುರಿಸುತ್ತಿದ್ದರೂ ಪಾಲಿಕೆ, ದಂಡು ಮಂಡಳಿ, ಸಂಚಾರಿ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಮಗೆ ಸಂಬಂಧ ಇಲ್ಲ ಎನ್ನುತ್ತ ಕೈ ಕಟ್ಟಿ ಕುಳಿತುಕೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಓಡಾಡುವುದು ಕಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಸಾಮೂಹಿಕ ಶೌಚಗೃಹಗಳ ನಿರ್ಮಾಣದ ಯೋಜನೆ ಹಾಕಿಕೊಂಡಿದ್ದೇವೆ. ಸ್ಮಾರ್ಟ್ ರಸ್ತೆಗಳ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗದಲ್ಲಿ ಸಮಸ್ಯೆ ಉಂಟಾಗಿದೆ. ಅಲ್ಲದೆ, ಪಾಲಿಕೆ ವತಿಯಿಂದ ಅವಶ್ಯಕತೆಯಿರುವ ಕಡೆ ಸಾಮೂಹಿಕ ಶೌಚಗೃಹಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
| ಜಗದೀಶ ಕೆ.ಎಚ್ ಪಾಲಿಕೆ ಆಯುಕ್ತ