More

    ಕಲ್ಲುಸಂಕದ ಭೂಗುಣ ಅಧ್ಯಯನ

    ಸಿದ್ದಾಪುರ: ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಮಲವಳ್ಳಿ ಸಮೀಪ ನೈಸರ್ಗಿಕವಾಗಿ ನಿರ್ವಣಗೊಂಡಿರುವ ಅಪರೂಪದ ಕಲ್ಲುಸಂಕದ ಸಂರಕ್ಷಣೆಗಾಗಿ ಅಲ್ಲಿಯ ಭೂ ಗುಣದ ಅಧ್ಯಯನಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರಜ್ಞರಾದ ಡಾ. ಇಬ್ರಾಹಿಂ ಹಾಗೂ ಡಾ.ಸಲೀಂ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಪ್ರಕೃತಿ ನಿರ್ವಿುತ ಕಲ್ಲುಸಂಕದ ಸಂರಕ್ಷಣೆ ಮಾಡುವಂತೆ ಸ್ಥಳೀಯ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರಿಂದ ಇತ್ತೀಚೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತಂದು ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಮೂಲಕ 20 ಲಕ್ಷ ರೂಪಾಯಿ ಅನುದಾನ ಮಂಜೂರಿ ಮಾಡಿಸಿದ್ದರು. ಶಿಥಿಲಗೊಳ್ಳುತ್ತಿರುವ ಕಲ್ಲುಸಂಕದ ಸಂರಕ್ಷಣೆ ಕಾಮಗಾರಿ ನಡೆಸುವ ಮುನ್ನ ಅದಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರಿಂದ ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಜಿ.ಸಿ. ಅವರು ಭೂ ಗರ್ಭ ಶಾಸ್ತ್ರಜ್ಞರನ್ನು ಪರೀಕ್ಷೆಗೆ ಕರೆ ತಂದಿದ್ದರು.

    ಕಲ್ಲು ಸಂಕದ ಮೇಲ್ಭಾಗ ಹಾಗೂ ಕೆಳಗಿನ ಹಳ್ಳದಲ್ಲಿನ ಮಣ್ಣು, ಕಲ್ಲುಗಳ ಪರೀಕ್ಷೆ, ಹಳ್ಳದಲ್ಲಿ ನೀರು ಹರಿಯುವಿಕೆಗಳ ಬಗ್ಗೆ ಪರೀಕ್ಷೆ ನಡೆಸಿದ ಡಾ.ಇಬ್ರಾಹಿಂ ಹಾಗೂ ಡಾ.ಸಲೀಂ, ಕಲ್ಲು ಸಂಕವು ಲ್ಯಾಟ್ರೇಟ್(ಜಂಬಿಟ್ಟಿಗೆ)ನಿಂದ ಪರಿವರ್ತಿತವಾದ ಅಗ್ನಿಶಿಲೆ ಕಲ್ಲುಗಳಿಂದ ರಚನೆಯಾಗಿದೆ. ತಳ ಭಾಗದಲ್ಲಿ ಹಳ್ಳದ ನೀರಿನ ಹರಿಯುವಿಕೆಯಿಂದ ಕೊರೆದಿದೆ. ಅನೇಕ ವರ್ಷಗಳ ಹಿಂದಿನ ಪ್ರಕ್ರಿಯೆ ಇದಾಗಿದ್ದು, ವಾತಾವರಣ ಬದಲಾವಣೆ ಕಾರಣ ಶಿಲೆಗಳು ಶಿಥಿಲಗೊಳ್ಳುತ್ತಿವೆ. ಇಲ್ಲಿ ಕಾಮಗಾರಿ ಮಾಡುವುದು ಸೂಕ್ಷ್ಮವಾದ ಮತ್ತು ಸವಾಲಿನ ಕೆಲಸವಾಗಿದೆ. ನಾವು ಯೋಜನಾ ವರದಿ ನೀಡುವ ಮುನ್ನ ಇನ್ನೊಮ್ಮೆ ಪರಿಶೀಲನೆ ನಡೆಸುತ್ತೇವೆ ಎಂದು ವಿವರಿಸಿದರು.

    ‘ಮಳೆಗಾಲದ ರಭಸದ ನೀರಿನ ಹರಿವಿನ ಕಾರಣ ಕಲ್ಲುಸಂಕದ ತಳಭಾಗದ ಕಲ್ಲುಗಳು ಕುಸಿದಿವೆ. ಹಾಗಾಗಿ ಹಳ್ಳದ ನೀರಿನ ಹರಿಯುವಿಕೆಯನ್ನು ಕಲ್ಲುಸಂಕದ ಮತ್ತೊಂದು ತಳ ಭಾಗದಲ್ಲಿ ಹರಿಯುವಂತೆ ಮಾಡಬೇಕು. ಯಾವುದೇ ಕಾರಣಕ್ಕೂ ಸಿಮೆಂಟ್ ಮುಂತಾದ ಆಧುನಿಕ ಪರಿಕರಗಳ ಬಳಕೆ ಬೇಡ. ಹಳ್ಳದ ಅಂಚಿನಲ್ಲಿ ಪಿಚಿಂಗ್ ನಿರ್ಮಾಣ ಮತ್ತು ಗಿಡಗಂಟಿಗಳನ್ನ ತೆರವು ಮಾಡಬೇಕು’ ಎಂದು ಗ್ರಾಮಸ್ಥರಾದ ಲಕ್ಷ್ಮಿನಾರಾಯಣ ಕಲಗಾರು, ಗುರುಮೂರ್ತಿ ಹೆಗಡೆ ಮತ್ತಿತರರು ಆಗ್ರಹಿಸಿದರು.

    ಪ್ರಾಧಿಕಾರದ ಸಹಾಯಕ ನಿರ್ದೇಶಕ ಶೇಜೇಶ್ವರ, ಕಾರವಾರ ನಿರ್ವಿುತಿ ಕೇಂದ್ರದ ಸಂಯೋಜನಾ ಆಯುಕ್ತ ಕುಮಾರ ಶೆಟ್ಟಿ, ಗ್ರಾಪಂ ಸದಸ್ಯ ಶ್ರೀನಿವಾಸ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts