More

    ವಿವಾಹ ಪ್ರೋತ್ಸಾಹಧನ ಯೋಜನೆಗೆ ಸೀಮಿತ ಸ್ಪಂದನೆ, ಅಂತರ್ಜಾತಿ, ಒಳಪಂಗಡ ಮದುವೆಗಿದೆ ಸರ್ಕಾರದ ಕೊಡುಗೆ

    – ಭರತ್ ಶೆಟ್ಟಿಗಾರ್ ಮಂಗಳೂರು
    ಪರಿಶಿಷ್ಟ ಜಾತಿ ಯುವಕ/ಯುವತಿಯ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಿ, ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಮತ್ತು ಪ.ಜಾತಿ ಮತ್ತ ಪಂಗಡದ ಒಳಪಂಗಡಗಳ ನಡುವೆ ವಿವಾಹ ಏರ್ಪಡುವ ಅಂತರ್ಜಾತಿ ವಿವಾಹ ಯೋಜನೆಗಳಿಗೆ ದ.ಕ, ಉಡುಪಿಯಲ್ಲಿ ಸೀಮಿತ ಸ್ಪಂದನೆ ವ್ಯಕ್ತವಾಗಿದೆ.

    ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಒಟ್ಟು ಜನಸಂಖ್ಯೆ ಕಡಿಮೆ ಎನ್ನಬಹುದು. ಇನ್ನೊಂದೆಡೆ ವಿವಿಧ ಕಾರಣಗಳಿಗಾಗಿ ಪ.ಜಾತಿ, ಪ.ಪಂಗಡಗಳ ನಡುವೆ ಒಳಪಂಗಡ ಅಂತರ್ಜಾತಿ ವಿವಾಹಗಳು ನಡೆಯುವುದೂ ಕಡಿಮೆ. ಆದ್ದರಿಂದ ಅರ್ಜಿ ಸಲ್ಲಿಕೆ ಪ್ರಮಾಣ ಕಡಿಮೆ ಇದೆ. ಕೆಲವು ವಿವಾಹಗಳು ಶ್ರೀಮಂತ ಕುಟುಂಬಗಳ ನಡುವೆ ನಡೆಯುವುದರಿಂದ, ಅಲ್ಲಿ ಆದಾಯ ಮಿತಿ ಹೆಚ್ಚಾಗಿ ಯೋಜನೆಯಿಂದ ವಂಚಿತರಾಗುತ್ತಾರೆ. ಯೋಜನೆ ಹೆಚ್ಚು ಜನಪ್ರಿಯವಾಗುವ ನಿಟ್ಟಿನಲ್ಲಿ ಸಮಗ್ರ ಮಾಹಿತಿಯಿರುವ ಕರಪತ್ರಗಳನ್ನು ಇಲಾಖೆ ಸಮುದಾಯದ ಮುಖಂಡರ ಮೂಲಕ ಮನೆಮನೆಗಳಿಗೆ ವಿತರಿಸುವ ಕೆಲಸವನ್ನು ಮಾಡುತ್ತಿದೆ.

    ಸರ್ಕಾರದ ಕೊಡುಗೆ ಏನು?: ಪ.ಜಾತಿಗೆ ಸೇರಿದ ಯುವತಿ ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದು, ದಂಪತಿ ವಾರ್ಷಿಕ ಆದಾಯ 2 ಲಕ್ಷದ ಒಳಗಿದ್ದರೆ ದಂಪತಿಗೆ ಸರ್ಕಾರ 3 ಲಕ್ಷ ರೂ. ಪ್ರೋತ್ಸಾಹಧನ ನೀಡುತ್ತದೆ. ಪ.ಜಾ. ಯುವಕ ಇತರ ಬೇರೆ ಯುವತಿಯನ್ನು ಮದುವೆಯಾದಲ್ಲಿ 2.50 ಲಕ್ಷ ರೂ. ದೊರೆಯುತ್ತದೆ. ಇದರಲ್ಲಿ ಅರ್ಧ ಮೊತ್ತ ಕಂತಿನಲ್ಲಿ ದಂಪತಿಗಳ ಜಂಟಿ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಯಾದರೆ ಉಳಿದ ಮೊತ್ತವನ್ನು ದಂಪತಿಗಳ ಹೆಸರಿನಲ್ಲಿ ರಾಷ್ಟ್ರೀಯ ಉಳಿತಾಯ ಪತ್ರ(ಎನ್‌ಎಸ್‌ಸಿ) ರೂಪದಲ್ಲಿ ಪತಿ-ಪತ್ನಿಯ ಹೆಸರಿನ ಜಂಟಿ ಖಾತೆಯಲ್ಲಿ ಎಫ್‌ಡಿ ಇಡಲಾಗುತ್ತದೆ. ಪ.ಜಾತಿ/ಪ.ಪಂ. ಯುವಕ ಯುವತಿಯರು ತಮ್ಮ ಸಮುದಾಯದ ಒಳಗಡೆ ಅಂತರ್ಜಾತಿ ವಿವಾಹವಾದರೆ 2 ಲಕ್ಷ ರೂ. ಪ್ರೋತ್ಸಾಹಧನ ಧನ ದೊರೆಯಲಿದ್ದು, ಇದರಲ್ಲಿಯೂ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮೀರಿರಬಾರದು.

    ಇಲ್ಲಿವರೆಗಿನ ಅರ್ಜಿ ಸಲ್ಲಿಕೆ ಮಾಹಿತಿ: ಪರಿಶಿಷ್ಟ ಜಾತಿ ಹುಡುಗ/ಹುಡುಗಿಯ ಅಂತರ್ಜಾತಿ ವಿವಾಹಕ್ಕೆ ಸಂಬಂಧಿಸಿ ದ.ಕ ಜಿಲ್ಲೆಯಲ್ಲಿ 2016-17ರಿಂದ ಇಲ್ಲಿಯ ವರೆಗೆ 88 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 7 ಮಂದಿಗೆ ಮೊದಲ ಕಂತಿನ ಮೊತ್ತ ಪಾವತಿಯಾಗಿದೆ. 49ಕ್ಕೆ ಇಲಾಖಾ ಅನುಮೋದನೆ ಸಿಕ್ಕಿದೆ. 18 ಅರ್ಜಿ ಪರಿಶೀಲನೆಗೆ ಬಾಕಿ ಇದೆ. ದ್ವಿತೀಯ ಕಂತಿಗೆ ಸಂಬಂಧಿಸಿ 8 ಅರ್ಜಿಗಳಿಗೆ ಮೊತ್ತ ಬಿಡುಗಡೆಯಾಗಿದ್ದು, 2 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. 4 ವಿವಿಧ ಕಾರಣಗಳಿಗೆ ಸಂಬಂಧಿಸಿ ತಿರಸ್ಕೃತಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಬಂದ 115 ಅರ್ಜಿಗಳಲ್ಲಿ 34ಕ್ಕೆ ಮೊದಲ ಕಂತು ಪಾವತಿಯಾಗಿದೆ. 17ರ ಪರಿಶೀಲನೆ ಮುಗಿದ್ದು, 4 ಬಾಕಿ ಇದೆ. ದ್ವಿತೀಯ ಕಂತಿಗೆ ಸಂಬಂಧಿಸಿ 47 ಮಂದಿಗೆ ಮೊತ್ತ ಪಾವತಿಯಾಗಿದ್ದು, 2 ಅರ್ಜಿ ಪರಿಶೀಲನೆ ಮಾಡಿ ಮೊತ್ತ ಬಿಡುಗಡೆಗೆ ಬಾಕಿ ಇದೆ. 8 ತಿರಸ್ಕೃತಗೊಂಡಿದ್ದು, 3 ಅಪೂರ್ಣ ಅರ್ಜಿ ಬಂದಿದೆ. ಪ.ಜಾತಿ ಮತ್ತ ಪಂಗಡದ ಒಳಪಂಗಡಗಳ ನಡುವೆ ವಿವಾಹ ಪ್ರೋತಾಹಧನಕ್ಕಾಗಿ ದ.ಕ.ದಲ್ಲಿ 7 ಅರ್ಜಿ ಸಲ್ಲಿಕೆಯಾಗಿದ್ದು, ಐವರಿಗೆ ಮೊತ್ತ ದೊರೆತಿದೆ. 2 ಅರ್ಜಿ ಪರಿಶೀಲನೆಗೆ ಬಾಕಿ ಇದೆ. ಉಡುಪಿಯಲ್ಲಿ ಸಲ್ಲಿಕೆಯಾದ 3 ಅರ್ಜಿ ಪೈಕಿ 2 ಅರ್ಜಿಗಳಿಗೆ ಮೊತ್ತ ಪಾವತಿಯಾಗಿದೆ, 1 ಅರ್ಜಿ ವಿಲೇ ಬಾಕಿ ಇದೆ.

    ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಸೀಮಿತ ಸಂಖ್ಯೆಯಲ್ಲಿದ್ದಾರೆ. ಜತೆಗೆ ಅಂತರ್ಜಾತಿ ವಿವಾಹಗಳ ಸಂಖ್ಯೆಯೂ ಕಡಿಮೆ. ಸರ್ಕಾರದ ನಿರ್ದೇಶನದಂತೆ ಯೋಜನೆಯ ಕುರಿತಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತಿದೆ.
    – ಪ್ರೇಮ್‌ಸಾಗರ್ ದಾಂಡೇಕರ್, ಉಪನಿರ್ದೇಕರು, ಸಮಾಜ ಕಲ್ಯಾಣ ಇಲಾಖೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts