More

    ಮೂವರು ಶಾಸಕರಿದ್ದರೂ ಮಾರ್ಜೆನಹಳ್ಳಿ ಗ್ರಾಮ ಪಂಚಾಯಿತಿ ಅನಾಥ: 2500ಕ್ಕೂ ಹೆಚ್ಚು ವಸತಿ ಹೀನರು, ಗ್ರಾಮ ಸ್ವರಾಜ್ಯದ ಕನಸಿಗೆ ಅಡ್ಡಿ

    ಕೋಲಾರ: ತಾಲೂಕಿನ ಮಾರ್ಜೆನಹಳ್ಳಿ ಗ್ರಾಮ ಪಂಚಾಯಿತಿ ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಟ್ಟ ತ್ರಿವೇಣಿ ಸಂಗಮವಾಗಿದ್ದು, ವಸತಿರಹಿತರಿಗೆ ಆಶ್ರಯ ಸಿಗದಿರುವುದರಿಂದ ಗ್ರಾಮ ಸ್ವರಾಜ್ಯದ ಕನಸಿನ ಸಾಕಾರಕ್ಕೆ ಅಡ್ಡಿಯಾಗಿದೆ. ಮೂವರು ಶಾಸಕರಿದ್ದರೂ ಇಲ್ಲಿನ ವಸತಿರಹಿತರಿಗೆ ಆಶ್ರಯ ಸಿಗುವುದು ಕನಸಾಗಿದೆ.

    ಕೋಲಾರ, ಶ್ರೀನಿವಾಸಪುರ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಹೋದ ಮಾರ್ಜೆನಹಳ್ಳಿ ಗ್ರಾಪಂನಲ್ಲಿ ಮಾರ್ಜೆನಹಳ್ಳಿ, ಕಾಮಧೇನಹಳ್ಳಿ, ಕುತಾಂಡಹಳ್ಳಿ, ಯಲವಾರ, ಚಿನ್ನಾಪುರ, ಪಾರೇಹೊಸಹಳ್ಳಿ, ಬೇಸ್ತೇನಹಳ್ಳಿ, ಎಳಚಿಪುರ, ವರದೇನಹಳ್ಳಿ ಸೇರಿ ಒಟ್ಟು 9 ಹಳ್ಳಿಗಳು ಇವೆ. ಸುಮಾರು 8 ಸಾವಿರ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಿದ್ದಾರೆ. ಪಾರೇಹೊಸಳ್ಳಿ ಬಂಗಾರಪೇಟೆಗೆ, ಬೇಸ್ತೇನಹಳ್ಳಿ ಶ್ರೀನಿವಾಸಪುರಕ್ಕೆ ಹಾಗೂ ಮಾರ್ಜೆನಹಳ್ಳಿ ಸಹಿತ 7 ಹಳ್ಳಿಗಳು ಕೋಲಾರಕ್ಕೆ ಸೇರಿದ್ದು, ಮೂರು ವರ್ಷಗಳಿಂದ ಈ ಹಳ್ಳಿಗಳಿಗೆ ಒಂದೇ ಒಂದು ಮನೆ ಮಂಜೂರು ಆಗಿಲ್ಲ.

    ಒಂಬತ್ತು ಹಳ್ಳಿಗಳಲ್ಲಿ ಕನಿಷ್ಠ 2500 ಮನೆಗಳ ನಿಮಾಣವಾದರೆ ಗ್ರಾಪಂನ ಸರ್ವರಿಗೂ ವಸತಿ ಸಿಕ್ಕಂತಾಗುತ್ತದೆ. ಆದರೆ ಈ ಮೂರೂ ಕ್ಷೇತ್ರಗಳ ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಬರುತ್ತಾರೆಯೇ ಹೊರತೂ ಗೆದ್ದ ಮೇಲೆ ಗಮನಹರಿಸುತ್ತಿಲ್ಲವೆಂಬ ಅಸಮಾಧಾನ ವ್ಯಕ್ತವಾಗಿದೆ.

    ಗ್ರಾಮ ಸ್ವರಾಜ್ಯದ ಪರಿಕಲ್ಪನೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅರಿವಿನ ಕೊರತೆ ಹಾಗೂ ಪ್ರತಿನಿಧಿಗಳು ತಮ್ಮ ಜುಟ್ಟನ್ನು ಅಧಿಕಾರಿಗಳ ಕೈಗೆ ನೀಡಿ ಅವರು ಕೊಟ್ಟಷ್ಟು ಪಡೆದು ಸುಮ್ಮನೆ ಕೂರುವುದರಿಂದ ಗ್ರಾಪಂಗಳಿಗೆ ಮೂಲಸೌಕರ್ಯ ಕಲ್ಪಿಸುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ಜನರ ಅಳಲು.

    ಮನೆಗಳಿಗೆ ಶೌಚಗೃಹ

    ಗ್ರಾಪಂ ವ್ಯಾಪ್ತಿಯಲ್ಲಿರುವ ಹತ್ತಾರು ಕುಂಟೆಗಳಿಗೆ ಭದ್ರತೆ ಕಲ್ಪಿಸಿಲ್ಲ, ಲೋಕೋಪಯೋಗಿ ಇಲಾಖೆಯಿಂದ ನಿಮಾಣವಾಗಿರುವ ಚರಂಡಿಗಳಿಗೆ ತಡೆಗೋಡೆ ಇಲ್ಲ. ತಿಪ್ಪೆಗುಂಡಿಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುತ್ತಿಲ್ಲ, ಅನೇಕ ಮನೆಗಳಿಗೆ ಶೌಚಗೃಹವೂ ಇಲ್ಲ. ನರೇಗಾ ಯೋಜನೆಯಡಿ ಕೆರೆ ಅಂಗಳದಲ್ಲಿ ಸಸಿ ನೆಡಲು ಹೆಚ್ಚಿನ ಆಸಕ್ತಿ ತೋರಲಾಗಿದ್ದು, ಯೋಜನೆಯ ಅನುದಾನವನ್ನು ಶೌಚಗೃಹ ನಿಮಾಣಕ್ಕೆ ಬಳಕೆ ಮಾಡಿಕೊಂಡಿದ್ದರೆ ಮಾದರಿ ಗ್ರಾಪಂ ಎಂಬ ಹೆಗ್ಗಳಿಕೆ ಪಡೆಯುತ್ತಿತ್ತು.

    ನೀರು ಕಲುಷಿತ: ನೀರಿನ ಸೌಕರ್ಯ ಪರವಾಗಿಲ್ಲ, ಅಂಗನವಾಡಿಗೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ, ಗ್ರಂಥಾಲಯ ಇದ್ದರೂ ಓದುಗರನ್ನು ಸೆಳೆಯಲಾಗುತ್ತಿಲ್ಲ. ಗ್ರಾಪಂಗೆ ಹೊಸ ಕಟ್ಟಡ ನಿರ್ವಿುಸಲಾಗಿದ್ದರೂ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ. ಚಿನ್ನಾಪುರದಲ್ಲಿ ಕೊಳಚೆ ನೀರು ಸಂಗ್ರಹಣಾ ಘಟಕ ನಿರ್ವಿುಸಲಾಗಿದೆ. ಆದರೆ, ಕೆಸಿ ವ್ಯಾಲಿಯ ರೀತಿಯಲ್ಲಿ ಕೊಳಚೆ ನೀರನ್ನು ಸಂಸ್ಕರಣೆ ಮಾಡದೆ ಗ್ರಾಮದ ಕೊಳವೆ ಬಾವಿಗಳ ನೀರು ಕಲುಷಿತವಾಗುತ್ತಿದ್ದು, ಜನ ಆತಂಕದಿಂದ ಬದುಕುತ್ತಿದ್ದಾರೆ.

    ಕಳೆದ 5 ವರ್ಷಗಳಿಗೆ ಹೊಲಿಕೆ ಮಾಡಿದಲ್ಲಿ ಗ್ರಾಪಂ ಆಡಳಿತದಲ್ಲಿ ಕೊಂಚ ಮಟ್ಟಿಗೆ ಸುಧಾರಣೆಯಾಗಿದೆಯಾದರೂ ಗ್ರಾಮ ಸ್ವರಾಜ್ಯದ ಉದ್ದೇಶ ಇನ್ನೂ ಶೇ.60 ಈಡೇರಬೇಕಿದೆ. ಗ್ರಾಂಪಗೆ ಆಯ್ಕೆಯಾಗುವವರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮಾದರಿಯಾಗಿಸಬೇಕಿದೆ. ಸರ್ಕಾರದಿಂದ ಬರುವ ಅನುದಾನ ವ್ಯರ್ಥವಾಗದಂತೆ ರಚನಾತ್ಮಕ ಯೋಜನೆಗಳಿಗೆ ಬಳಕೆ ಮಾಡಲು ಪಾರದರ್ಶಕವಾಗಿ ಕ್ರಿಯಾ ಯೋಜನೆ ರೂಪಿಸಬೇಕಾಗಿದೆ. ಗ್ರಾಮ ಸಭೆಗಳನ್ನು ನಡೆಸುವಾಗ ಬಡ ಜನರನ್ನು ಆಹ್ವಾನಿಸಿ ಅವರಿಗೆ ಬೇಕಾದ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕಾಗಿದೆ, ಗುಣಮಟ್ಟದ ಶಿಕ್ಷಣ, ಆರೋಗ್ಯಕ್ಕೆ ಗಮನ ನೀಡಿದಲ್ಲಿ ಗ್ರಾಮ ಸ್ವರಾಜ್ಯದ ಉದ್ದೇಶ ಸಾರ್ಥಕವಾಗುತ್ತದೆ.

    ಗ್ರಾಪಂ ಇತಿಮಿತಿಯಲ್ಲಿ ಸಣ್ಣಪುಟ್ಟ ಕೆಲಸಗಳಾಗುತ್ತಿವೆ. ಸಂಸದರು, ಎಂಎಲ್​ಎಗಳು, ಎಂಎಲ್​ಸಿಗಳು ಇತ್ತ ಸುಳಿದಿಲ್ಲ, ಗ್ರಾಮಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಅನುದಾನ ಬಿಡುಗಡೆ ಮಾಡಿಸಿದರೆ ಮಾದರಿ ಗ್ರಾಪಂ ಮಾಡಬಹುದು.

    | ಎಂ.ಎನ್.ರವೀಂದ್ರ, ಗ್ರಾಪಂ ಮಾಜಿ ಸದಸ್ಯ, ಮಾರ್ಜೆನಹಳ್ಳಿ

    ಕಳೆದ 3 ವರ್ಷದಿಂದ ವಸತಿ ಯೋಜನೆಯಡಿ ಒಂದು ಮನೆಯೂ ಸಿಕ್ಕಿಲ್ಲ. ವಸತಿ ಸಮಸ್ಯೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವೆ. ನರೇಗಾ ಯೋಜನೆಯ ಜಾಬ್ ಕಾರ್ಡ್​ದಾರರಿಗೆ ಸಕಾಲಕ್ಕೆ ಹಣ ಪಾವತಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಸುಧಾರಣೆಯಾಗಿದೆ.

    | ಕಮಲಾ, ಪಿಡಿಒ, ಮಾರ್ಜೆನಹಳ್ಳಿ

    ಪಾ.ಶ್ರೀ.ಅನಂತರಾಮ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts