More

    ಮರಿಯಮ್ಮನಹಳ್ಳಿ ಬಂದ್‌ಗೆ ಉತ್ತಮ ಸ್ಪಂದನೆ

    ಮರಿಯಮ್ಮನಹಳ್ಳಿ: ತುಂಗಭದ್ರಾ ನದಿಯಿಂದ ಕುಡಿವ ನೀರು ಯೋಜನೆ ರೂಪಿಸುವಂತೆ ಆಗ್ರಹಿಸಿ ಮರಿಯಮ್ಮನಹಳ್ಳಿ ಕುಡಿವ ನೀರು ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಬಂದ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ.

    ವ್ಯಾಪಾರಸ್ಥರು ವಹಿವಾಟು ಸ್ಥಗಿತಗೊಳಿಸಿದ್ದರು. ವಾಹನ ಓಡಾಟಕ್ಕೆ ಅವಕಾಶವಿರಲಿಲ್ಲ. ಹೀಗಾಗಿ ಸಾರಿಗೆ ಸಂಸ್ಥೆಯ ವಾಹನಗಳು ಪಟ್ಟಣದ ಹೊರಭಾಗದಿಂದ ಸಂಚರಿಸಲು ಪೊಲೀಸರು ವ್ಯವಸ್ಥೆ ಕಲ್ಪಿಸಿದರು. ಪಟ್ಟಣದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

    ಬೆಳಗ್ಗೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಪಟ್ಟಣದ ಮುಖ್ಯ ಬೀದಿಯ ಮೂಲಕ ಪಪಂ ಕಚೇರಿ ವರೆಗೂ ಸಾಗಿ ಮರಳಿ ನಾಣಿಕೆರೆ ವೃತ್ತದಲ್ಲಿ ಸಭೆ ಸೇರಲಾಯಿತು. ಹೋರಾಟ ಸಮಿತಿ ಅಧ್ಯಕ್ಷ ಗೋವಿಂದರ ಪರಶುರಾಮ, ಕಾರ್ಯದರ್ಶಿ ಚಿದ್ರಿಸತೀಶ, ಮಾಜಿ ಮಂಡಲ ಪ್ರಧಾನ ಎಂ.ವಿಶ್ವನಾಥ ಶೆಟ್ಟಿ, ಎಸ್.ಕೃಷ್ಣ ನಾಯ್ಕ, ವಕೀಲ ಜಿ.ಎಂ.ಕೊಟ್ರೇಶ, ಮ.ಬ.ಸೋಮಣ್ಣ, ಎನ್.ಎಸ್.ಬುಡೇನ್‌ಸಾಬ್, ಎಲ್.ಪರಮೇಶ್ವರ ಸೇರಿ ಇತರ ಮುಖಂಡರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

    ತುಂಗಭದ್ರಾ ಜಲಾಶಯದ ನಿರ್ಮಾಣಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೇವೆ. ನೀರಿಗಾಗಿ ಮಾಡುತ್ತ ಬಂದಿರುವ 72 ವರ್ಷದ ಹೋರಾಟ ಕನಸಾಗಿಯೇ ಉಳಿದೆ. ಅಧಿಕಾರಿಗಳು, ಪ್ರತಿನಿಧಿಗಳು ಸುಳ್ಳು ಭರವಸೆ ನೀಡುವುದನ್ನು ಕೇಳಿ ಕೇಳಿ ರೋಸಿ ಹೋಗಿದ್ದೇವೆ. ಸಾರ್ವಜನಿಕ ಮೂಲಭೂತ ಸೌಕರ್ಯಗಳ ಹಕ್ಕಲ್ಲಿ ಪ್ರಮುಖವಾದ ಕುಡಿವ ನೀರು ನೀಡಲು ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.

    ತುಂಗಭದ್ರಾ ಜಲಾಶಯದಿಂದ ಮರಿಯಮ್ಮನಹಳ್ಳಿ 4 ಕಿ.ಮೀ. ದೂರದಲ್ಲಿದೆ. ಆದರೆ, ಇಲ್ಲಿಗೆ ನೀರು ಕೊಡದೇ ಜಲಾಶಯದಿಂದ ಪಾವಗಡಕ್ಕೆ ನೀರು ಒಯ್ಯಲಾಗುತ್ತಿದೆ. ಮೊದಲು ನಮಗೆ ನೀರು ಕೊಡಿ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಪ್ರಮುಖರಾದ ಎಸ್.ಕೃಷ್ಣ ನಾಯ್ಕ, ಎನ್.ಸತ್ಯನಾರಾಯಣ, ಗರಗ ಪ್ರಕಾಶ, ಗುಂಡಾ ಸ್ವಾಮಿ, ಕೊಟಗಿ ಲೋಕೇಶ್, ಬಿ.ವಿಜಯಕುಮಾರ್, ಎಚ್.ಗೋಪಾಲ, ಎಸ್.ನವೀನ್, ಲಾಲ್ಯಾನಾಯ್ಕ್ ಇತರರಿದ್ದರು.

    ಬಿಗಿ ಪೊಲೀಸ್ ಬಂದೋಬಸ್ತ್: ಕೂಡ್ಲಿಗಿ ಡಿವೈಎಸ್ಪಿ ಹರೀಶ, ಹ.ಬೊ.ಹಳ್ಳಿ ಸಿಪಿಐ ಮಂಜಣ್ಣ ನೇತೃತ್ವದಲ್ಲಿ ಮೂವರು ಸಿಪಿಐ, ಒಬ್ಬ ಕೆಎಸ್‌ಆರ್‌ಪಿ, ಒಬ್ಬ ಡಿಆರ್, ಹತ್ತು ಪಿಎಸ್‌ಐಗಳು, 150ಕ್ಕೂ ಹೆಚ್ಚು ಪೇದೆಗಳನ್ನು ಬಂದೊಬಸ್ತ್‌ಗಾಗಿ ನಿಯೋಜಿಸಲಾಗಿತ್ತು.

    ಸಾತ್ ನೀಡಿದ ಸಚಿವ ಆನಂದ ಸಿಂಗ್: ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಕುಡಿವ ನೀರು ಒದಗಿಸದೆ ಪಾವಗಡಕ್ಕೆ ಒಂದು ಹನಿ ನೀರು ಹೋಗಲು ಬಿಡುವುದಿಲ್ಲ ಎಂದು ಸಚಿವ ಆನಂದ ಸಿಂಗ್ ಸ್ಪಷ್ಟಪಡಿಸಿದರು. ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ, ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ನಡೆಸುತ್ತಿದ್ದ ಬಂದ್ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ನೂತನ ವಿಜಯನಗರ ಜಿಲ್ಲೆಯ ಅಭಿವೃದ್ಧಿಗಾಗಿ 9 ಸಾವಿರ ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ. ಮರಿಯಮ್ಮನಹಳ್ಳಿಗೆ ನೀರು ಕೊಡದೆ ಯಾರಾದರೂ ಪಾವಗಡಕ್ಕೆ ನೀರು ಒಯ್ಯಲು ಮುಂದಾದರೆ ನಿಮ್ಮೊಂದಿಗೆ ನಾನೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts