More

    ವಿಜೃಂಭಣೆಯ ಮಾರಿಕಾಂಬದೇವಿ ಅಡ್ಡಪಲ್ಲಕ್ಕಿ ಉತ್ಸವ

    ಹಿರೀಸಾವೆ: ಹೋಬಳಿಯ ದಿಡಗ ಹಳೇ ಗ್ರಾಮದಲ್ಲಿ ಶ್ರೀ ಮಾರಿಕಾಂಬದೇವಿ ಹಬ್ಬ ಹಾಗೂ ಜಾತ್ರಾ ಮಹೋತ್ಸವ ಮಂಗಳವಾರ ವೈಭವದಿಂದ ನಡೆಯಿತು.

    ಗ್ರಾಮದಲ್ಲಿ 3 ದಿನಗಳಿಂದ ಹಬ್ಬ ಅದ್ದೂರಿಯಾಗಿ ನಡೆಯುತ್ತಿದ್ದು, ಭಾನುವಾರ ಗಂಗೆ ಹಾಗೂ ವಿಘ್ನೇಶ್ವರ ಪೂಜೆ ನೆರವೇರಿದ ಬಳಿಕ ಮಾರಿಕಾಂಬದೇವಿ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಾಯಿತು. ಸೋಮವಾರ ತಂಬಿಟ್ಟಿನಾರತಿ ಹಾಗೂ ಬಾಯಿಬೀಗ ನೆರವೇರಿತು. ಆ ಬಳಿಕ ಬೀದಿಗಳನ್ನು ಸ್ವಚ್ಛಗೊಳಿಸಿ ದೇಗುಲವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

    ಮಂಗಳವಾರ ಬೆಳಗ್ಗೆ 9.30 ರಲ್ಲಿ ಚನ್ನಕೇಶವ ದೇಗುಲ ಬಳಿಯಿಂದ ಬಾಯಿಬೀಗ ಹಾಗೂ ಆರತಿಯೊಂದಿಗೆ ಮಾರಿಕಾಂಬ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿತು. ಉತ್ಸವದಲ್ಲಿ ಹಿರಿಯ ತಾಯಂದಿರು ಸೋಬಾನೆ ಪದ ಹಾಡಿದರೆ ಹೆಣ್ಣು ಮಕ್ಕಳು ದೀಪದಾರತಿ ಹಾಗೂ ತಂಬಿಟ್ಟಿನ ಆರತಿ ಹಿಡಿದು ಸರದಿ ಸಾಲಿನಲ್ಲಿ ನಡೆದರು. ಉತ್ಸವದಲ್ಲಿ ಕೆಂಚರಾಯ ಹಾಗೂ ಭೂತರಾಯ ಸೋಮನ ಕುಣಿತ ಗಮನ ಸೆಳೆಯಿತು. ಮೆಳ್ಳಹಳ್ಳಿ, ಕರಿಕ್ಯಾತನಹಳ್ಳಿ ಹಾಗೂ ಕೆಳಗಲ ಕಾಮನಘಟ್ಟ ಗ್ರಾಮದ ಹೆಣ್ಣು ಮಕ್ಕಳು ಮಡೆ ಆರತಿ ತಂದು ಉತ್ಸವದಲ್ಲಿ ಸೇರಿಕೊಂಡರು.

    ಮುಂಜಾನೆಯಿಂದಲೆ ನೂರಾರು ಭಕ್ತರು ದೇವಾಲಯದಲ್ಲಿ ಜಮಾಯಿಸಿದ್ದು, ದೇವಿಗೆ ಪುಷ್ಪಾಲಂಕಾರ, ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು. ದೇವಿಗೆ ಮಹಾಮಂಗಳಾರತಿ ಬೆಳಗಿದ ಬಳಿಕ ಪ್ರಸಾದ ವಿನಿಯೋಗ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts