More

    ತುಳುನಾಡಲ್ಲಿ ಬಯಲುಸೀಮೆ ಬೆಳೆ, ಚೆಂಡು ಹೂವು ಕೃಷಿಯಲ್ಲಿ ಉತ್ತಮ ಇಳುವರಿ ಪಡೆದ ಬೆಳ್ಮಣ್‌ನ ರೈತ

    ಹರಿಪ್ರಸಾದ್ ನಂದಳಿಕೆ, ಬೆಳ್ಮಣ್

    ಕರಾವಳಿ ಭಾಗದ ಕೃಷಿ ಎಂದ ಕ್ಷಣ ಅಡಿಕೆ, ತೆಂಗು ಜತೆಗೆ ಭತ್ತದ ಗದ್ದೆಗಳೇ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಬೆಳ್ಮಣ್‌ನ ಕೃಷಿಕರೊಬ್ಬರು ಬಯಲುಸೀಮೆ, ಅರೆ ಬಯಲುಸೀಮೆಯಲ್ಲಿ ಹೆಚ್ಚಾಗಿ ಕಂಡುಬರುವ ಚೆಂಡು ಹೂವನ್ನು ಕರಾವಳಿಯ ಗದ್ದೆಯಲ್ಲಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ.
    ಕಾರ್ಕಳ ತಾಲೂಕಿನ ಬೆಳ್ಮಣ್ ಪುನಾರು ನಿವಾಸಿ ರಘುನಾಥ್ ನಾಯಕ್ ಚೆಂಡು ಹೂವನ್ನು ಬೆಳೆದು ಉತ್ತಮ ಇಳುವರಿ ಪಡೆದ ಕೃಷಿಕ. ರಘುನಾಥ್ ನಾಯಕ್ ತಮ್ಮ ನಿವಾಸದ ಬಳಿ ಬೇರೊಬ್ಬ ಕೃಷಿಕರ ಹಡಿಲು ಬಿಟ್ಟಿದ್ದ ಗದ್ದೆಯನ್ನು ಪಡೆದು ಚೆಂಡು ಹೂವು ಬೆಳೆಗೆ ಕೈ ಹಾಕಿದ್ದರು. ಚೆಂಡು ಹೂ ಉಷ್ಣಾಂಶ ಹೆಚ್ಚಿರುವ ಭಾಗದಲ್ಲಿ ಇಳುವರಿ ಕಡಿಮೆ. ಆದರೆ ಉಡುಪಿಯ 35 ಡಿಗ್ರಿ ಉಷ್ಣಾಂಶದಲ್ಲೂ ಒಳ್ಳೆಯ ಇಳುವರಿ ಲಭಿಸಿದೆ. ಒಂದುವರೆ ಎಕರೆ ಭೂಮಿಯಲ್ಲಿ 12 ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದೆ. ಗಿಡಗಳನ್ನು ಬಾಗಲಕೋಟೆಯ ನರ್ಸರಿಯಿಂದ ತರಿಸಿಕೊಂಡಿದ್ದು, ಹಟ್ಟಿ ಗೊಬ್ಬರದ ಬದಲು ಕೋಳಿ ಗೊಬ್ಬರ ಹಾಗೂ ತೋಟಗಾರಿಕೆ ಇಲಾಖೆ ಸೂಚಿಸಿದ ಗೊಬ್ಬರವನ್ನು ಬಳಸಿಕೊಂಡು ಇಳುವರಿ ಪಡೆದಿದ್ದಾರೆ.

    ಇಳುವರಿ ಬಂದರೂ ನಷ್ಟ
    ಒಂದೂವರೆ ಎಕರೆ ಭೂಮಿಯಲ್ಲಿ ಬೆಳೆಯಲಾದ ಚೆಂಡು ಹೂವಿನಿಂದ ಉತ್ತಮ ಇಳುವರಿ ಪಡೆದರೂ ಲಾಕ್‌ಡೌನ್‌ನಿಂದ ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ತೌಕ್ತೆ ಚಂಡಮಾರುತದ ಹೊಡೆತಕ್ಕೆ ಹಲವು ಗಿಡಗಳು ಧರೆಗೆ ಉರುಳಿದ್ದು ಭಾರೀ ನಷ್ಟ ಸಂಭವಿಸಿದೆ. ಪ್ರಸಕ್ತ ಚೆಂಡು ಹೂವು ಮಾರಾಟವಾಗದೆ ಗಿಡದಲ್ಲೇ ಉಳಿಯುವಂತಾಗಿದ್ದು ಹೂವು ಬೇಕಾದವರು ರಘುನಾಥ್ ನಾಯಕ್ ಪುನಾರ್ (8747915883) ಅವರನ್ನು ಸಂಪರ್ಕಿಸಬಹುದಾಗಿದೆ.

    ಕರಾವಳಿ ಭಾಗದಲ್ಲಿ ಭತ್ತದ ಕೃಷಿಯೇ ಹೆಚ್ಚಾಗಿ ಕಂಡು ಬರುತ್ತದೆ. ಮಂಗ ಹಾಗೂ ನವಿಲಿನ ಹಾವಳಿಯಿಂದ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಏನಾದರೂ ಹೊಸ ಕೃಷಿಯನ್ನು ಮಾಡಬೇಕು ಎಂಬ ಆಲೋಚನೆಯಲ್ಲಿ ಚೆಂಡು ಹೂವನ್ನು ಬೆಳೆಯಲಾಗಿದೆ. ಉತ್ತಮ ಇಳುವರಿ ಬಂದಿದೆ.
    ರಘುನಾಥ್ ನಾಯಕ್ ಪುನಾರ್, ಚೆಂಡು ಹೂವು ಬೆಳೆಗಾರ.

    ತುಳುನಾಡಿನ ನೆಲದಲ್ಲಿ ಹೊಸ ಕೃಷಿಯ ಮೂಲಕ ಉತ್ತಮ ಇಳುವರಿ ಪಡೆದು ಇಲ್ಲಿಯೂ ಚೆಂಡು ಹೂವು ಬೆಳೆಯಬಹುದು ಎನ್ನುವುದನ್ನು ರಘುನಾಥ ನಾಯಕ್ ನಿರೂಪಿಸಿದ್ದಾರೆ. ಇದು ಇತರ ಕೃಷಿಕರಿಗೆ ಮಾದರಿ.
    ದಿನೇಶ್, ಸ್ಥಳೀಯ ಯುವ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts