More

    ದೇಶದಲ್ಲಿ ಕರೊನಾ ತಡೆ ಸುಲಭವಲ್ಲ; ಸರ್ಕಾರದ ಮುಂದಿದೆ ಸಾಲು ಸಾಲು ಸವಾಲು

    ನವದೆಹಲಿ: ಕರೊನಾ ವೈರಸ್​ಗೆ ಇಡೀ ಪ್ರಪಂಚವೇ ತತ್ತರಿಸಿದೆ. ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಈ ವೈರಸ್​ ಪ್ರತಿದಿನ ಸಾವಿರಾರು ಜನರಲ್ಲಿ ಹೊಸದಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಭಾರತದಲ್ಲಿಯೂ ಸಹ ಈ ಸೋಂಕಿನ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನಡೆಸಲಾಗುತ್ತಿರುವ ಕರೊನಾ ಪರೀಕ್ಷೆಗಳು ಹಿಂದುಳಿದಿವೆ. ಅದಕ್ಕೆ ಕಾರಣ ಇಲ್ಲಿದೆ.

    ಪ್ರಯೋಗಾಲಯಗಳ ಕೊರತೆ: ಮುಂದುವರೆದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿರುವ ಪ್ರಯೋಗಾಲಯಗಳು ಮತ್ತು ತಪಾಸಣೆ ನಡೆಸುವಂತಹ ಕಿಟ್​ಗಳ ಸಂಖ್ಯೆ ಕಡಿಮೆಯಿದೆ. ದೇಶದಲ್ಲಿ 3 ಲಕ್ಷದಷ್ಟು ಕಿಟ್​ಗಳಿವೆ. ಅಷ್ಟಿದ್ದರೂ ಸೋಮವಾರದಂದು ಕೇವಲ 9,000 ಜನರ ಗಂಟಲಿನ ದ್ರವವನ್ನು ಟೆಸ್ಟ್​ ಮಾಡಲಾಗಿದೆ. ಜರ್ಮನಿಯಿಂದ ಒಂದು ಮಿಲಿಯನ್​ ಕಿಟ್​ಗಳನ್ನು ತರಲು ಆದೇಶವನ್ನು ನೀಡಲಾಗಿದೆಯಾದರೂ ಅದೂ ಸಹ ಮುಂದಿನ ದಿನಗಳಲ್ಲಿ ಸಾಕಾಗುವುದಿಲ್ಲ ಎನ್ನಲಾಗಿದೆ.

    ಜನಸಂಖ್ಯೆ ಸಮಸ್ಯೆ: ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ವೈದ್ಯಕೀಯ ಅಭಿವೃದ್ಧಿಯ ಪಟ್ಟಿಯಲ್ಲಿ ಅಂತ ಮಹತ್ತರ ಸ್ಥಾನವನ್ನೇನು ಕಾಯ್ದುಕೊಂಡಿಲ್ಲ. ಭಾನುವಾರದಂದು ದೆಹಲಿಯ ಎಐಐಎಮ್​ಎಸ್​ ಸೇರಿದಂತೆ ಒಟ್ಟು 50 ಕೇಂದ್ರಗಳಲ್ಲಿ ತಲಾ 20ರಂತೆ 1000 ರೋಗಿಗಳ ಗಂಟಲ ದ್ರವವನ್ನು ಪರೀಕ್ಷಿಸಲಾಗಿದೆ. 1 ಬಿಲಿಯನ್​ಗೂ ಹೆಚ್ಚು ಜನರಿರುವ ದೇಶದಲ್ಲಿ ದಿನವೊಂದಕ್ಕೆ 1000 ಜನರ ತಪಾಸಣೆ ಮಾತ್ರವೇ ಸಾಧ್ಯವಾಗುವುದಾದರೆ ದೇಶದಲ್ಲಿ ಕರೊನಾ ಕಾಟ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

    ಪರೀಕ್ಷೆ ನಡೆಸುವುದು ಯಾವಾಗ?: ಅನೇಕರ ಗಮನಕ್ಕೆ ಬಾರದಿರುವ ವಿಚಾರವೇನೆಂದರೆ ಯಾವ ಸಮಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎನ್ನುವುದು. ಕಿಟ್​ಗಳ ಕೊರತೆ ಮತ್ತು ಪರೀಕ್ಷಾ ಕೇಂದ್ರಗಳ ಕೊರತೆ ಇರುವ ಕಾರಣ ರೋಗಲಕ್ಷಣ ಕಂಡವರನ್ನೆಲ್ಲರನ್ನು ತಕ್ಷಣಕ್ಕೆ ತಪಾಸಣೆಗೆ ಒಳಪಡಿಸಲಾಗುತ್ತಿಲ್ಲ. ವುಹಾನ್​ನ ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ಬೇರೆ ಬೇರೆ ರೋಗಗಳಿರುವವರು ಮೊದಲು ಕರೊನಾಕ್ಕೆ ಬಲಿಯಾಗುತ್ತಾರೆ. ಹಾಗಾಗಿ ದೇಶದಲ್ಲಿ ನಿಮೋನಿಯಾ ಹಾಗೂ ಇತರೆ ರೋಗಗಳಿಂದ ಬಳಲುತ್ತಿರುವವರ ಗಂಟಲಿನ ದ್ರವದ ಪರೀಕ್ಷೆಯನ್ನು ಮಾಡಲಾಗುತ್ತಿದೆ. ರೋಗಿ ಐಸಿಯುಗೆ ವರ್ಗಾವಣೆಯಾದ ನಂತರ ಆತನ ಗಂಟಲಿನ ದ್ರವವನ್ನು ಪರೀಕ್ಷೆಗ ಕಳುಹಿಸಲಾಗುತ್ತಿದೆ. ಸೋಂಕು ತಗುಲಿ 8ರಿಂದ 10 ದಿನವಾದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಾಗಾದರೆ ಮೂರ್ನಾಲ್ಕು ದಿನಗಳ ಹಿಂದೆ ಸೋಂಕು ತಗುಲಿರುವವರ ಕಥೆಯೇನು? ಅವರಿಂದ ಸೋಂಕು ಹರಡಿದರೆ ಯಾರು ಹೊಣೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

    ಜನರಿಗಿಲ್ಲ ಕಾಳಜಿ: ಭಾರತದ ಬಹುದೊಡ್ಡ ಸಮಸ್ಯೆಯಾಗಿರುವುದು ಜನರಲ್ಲಿ ಮೂಡದ ಜಾಗೃತಿ. ದಿನದಿಂದ ದಿನಕ್ಕೆ ಕರೊನಾ ಸಂಖ್ಯೆ ಹೆಚ್ಚುತ್ತಿದೆ, ಎಚ್ಚೆತ್ತುಕೊಳ್ಳಿ ಎಂದು ಸರ್ಕಾರ ಅದೆಷ್ಟೇ ಹೇಳಿದರೂ ಜನರು ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಬಿಡುತ್ತಿಲ್ಲ. ಸರ್ಕಾರ ನೀಡುತ್ತಿರುವ ಆದೇಶವನ್ನಾಗಲೀ ಅಥವಾ ಮಾರ್ಗದರ್ಶನವನ್ನಾಗಲೀ ಪಾಲಿಸುವುದುರಲ್ಲಿ ಜನತೆ ವಿಫಲವಾಗುತ್ತಿರುವು ಕರೊನಾ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಬಹುದೊಡ್ಡ ಕಾರಣವಾಗಿದೆ.

    ಖಾಸಗಿ ಆಸ್ಪತ್ರೆಗಳಲ್ಲಿಲ್ಲ ಬೆಂಬಲ: ದೇಶಕ್ಕೆ ದೇಶವೇ ಭಯಪಡುವತಹ ಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈ ಜೋಡಿಸದೇ ದೂರ ನಿಂತಿವೆ. ಕರೊನಾ ತಡೆಗೆ ಖಾಸಗಿ ವಲಯದಿಂದ ಅಲ್ಪ ಸಹಕಾರವಿರುವುದು ದೊಡ್ಡ ಸಮಸ್ಯೆಯಾಗಿದೆ. ಒಂದು ವೇಳೆ ಸಂಪೂರ್ಣ ಸಹಕಾರ ದೊರೆತದ್ದಾದಲ್ಲಿ ಕರೊನಾ ತಡೆ ಸುಲಭವಾಗಲಿದೆ. (ಏಜೆನ್ಸೀಸ್​)

    ಕೇಂದ್ರ ಸಚಿವಾಲಯದ ಮೇಲೂ ಕರೊನಾ ನೆರಳು?! ತನಗೆ ತಾನೇ ನಿರ್ಬಂಧ ಹೇರಿಕೊಂಡ ಸಚಿವ

    ಸನ್ನಿ ಲಿಯೋನ್​ಗೆ ಕರೊನಾ ಕೊರಗು: ಇನ್​ಸ್ಟಾಗ್ರಾಂನಲ್ಲಿ ಅಳಲು ತೋಡಿಕೊಂಡ ಬಾಲಿವುಡ್ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts