More

    ವಚನ ಸಾಹಿತ್ಯ ಉಳಿವಿಗಾಗಿ ನಡೆದಿತ್ತು ಹೋರಾಟ ; ಸಾಹಿತಿ ಮಹಾಂತಪ್ಪ ನಂದೂರು ಹೇಳಿಕೆ

    ಚೆನ್ನಬಸವಪ್ಪ ಬೆಟ್ಟದೂರು ಪುಣ್ಯಸ್ಮರಣೋತ್ಸವ

    ಮಾನ್ವಿ: ಜಗತ್ತಿಗೆ ಸಮಾನತೆ ಸಾರಿದ ಬಸವಣ್ಣ ಮತ್ತು ಅವರ ಸಮಕಾಲೀನ ಶರಣರು ರಚಿಸಿದ ವಚನ ಸಾಹಿತ್ಯ ಉಳಿಸಲು ಅಕ್ಕನಾಗಮ್ಮ ಹಾಗೂ ಇತರ ಶರಣರು ಹೋರಾಟ ಮಾಡಿದ್ದರು ಎಂದು ಸಾಹಿತಿ ಮಹಾಂತಪ್ಪ ನಂದೂರು ಹೇಳಿದರು.

    ಪಟ್ಟಣದ ಖಾದ್ರಿ ಇಂಪೀರಿಯಲ್ ಗಾರ್ಡನ್ ಸಭಾಂಗಣದಲ್ಲಿ ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ್ದ ಲಿಂ.ಚೆನ್ನಬಸವಪ್ಪ ಬೆಟ್ಟದೂರು 14 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ‘ಅರಿವೇ ಪ್ರಮಾಣು’ ಕೃತಿಗೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಪ್ರಸ್ತುತ ಕನ್ನಡ ಸಾಹಿತ್ಯ ತಿರುಚುವ ಕೆಲಸ ನಡೆಯುತ್ತಿದೆ. ಆದರೆ ಬಸವಣ್ಣ ಮತ್ತು ಸಮಕಾಲೀನರ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗಾಗಿ ತಮ್ಮ ಪ್ರಾಣ ಲೆಕ್ಕಿಸದೆ ಹೋರಾಟ ಮಾಡಿ ಉಳಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದರು.

    12 ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣ ಸಮಾನತೆ ಸಾರಿದರು. ಆದರೂ, ಬಸವಣ್ಣ ವಿರುದ್ಧ ಸನಾತನವಾದಿಗಳು ಇಲ್ಲಸಲ್ಲದ ಅರೋಪ ಮಾಡಿದರು ಇದಕ್ಕೆ ಬಸವಣ್ಣ ಜಗ್ಗಲಿಲ್ಲ. ಎಲ್ಲ ಸಮುದಾಯದ ಶರಣರಿಂದಾಗಿ ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಧ್ಯವಾಯಿತು ಎಂದರು ಮಹಾಂತಪ್ಪ ನಂದೂರು ತಿಳಿಸಿದರು.

    ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲಿಯವರೆಗೂ ರೈತರಿಗೆ ವೈಜ್ಞಾನಿಕ ಬೆಲೆ ದೊರೆಯುವುದಿಲ್ಲವೋ ಅಲ್ಲಿವರೆಗೆ ರೈತ ಋಣಮುಕ್ತನಾಗಲು ಸಾಧ್ಯವಾಗುವುದಿಲ್ಲ. ಚೆನ್ನಬಸವಪ್ಪ ಬೆಟ್ಟದೂರು ಈ ಭಾಗದಲ್ಲಿ ರೈತಸಂಘವನ್ನು ಕಟ್ಟಿ ಬೆಳೆಸಿದರು. ಅವರ ಸ್ಫೂರ್ತಿಯಿಂದ ಅನೇಕ ಯುವ ರೈತರು ರೈತ ಸಂಘ ಸೇರ್ಪಡೆಗೊಂಡರು ಎಂದರು.

    ಹಿರಿಯ ವೈದ್ಯ ಬಸವಪ್ರಭು ಪಾಟೀಲ್ ಬೆಟ್ಟದೂರು ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಬೋಧಿಸಿದ ಸಮಾನತೆಯನ್ನು ಬದಿಗಿಟ್ಟು ಪಠ್ಯ ಪುಸ್ತಕಗಳ ಮೂಲಕ ಮೌಢ್ಯಾಚಾರಣೆ, ಅಸಮಾನತೆ, ಜಾತಿ ಪದ್ಧತಿ ಬೋಧಿಸುವ ಸನಾತನ ಧರ್ಮವನ್ನು ತರಲು ಹೊರಟಿರುವುದು ಖಂಡನೀಯ. ನಾವೆಲ್ಲರೂ ಅದನ್ನು ಒಟ್ಟಾಗಿ ವಿರೋಧಿಸುವ ಅಗತ್ಯವಿದೆ ಎಂದು ತಿಳಿಸಿದರು.

    2021-22ನೇ ಸಾಲ್ಲಿನ ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿಯನ್ನು ‘ಅರಿವೇ ಪ್ರಮಾಣು’ ಕೃತಿಗಾಗಿ ಸಾಹಿತಿ ಮಹಾಂತಪ್ಪ ನಂದೂರುಗೆ ಪ್ರದಾನ ಮಾಡಲಾಯಿತು. ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭಾಕರ ಪಾಟೀಲ್, ನಿವೃತ್ತ ಪ್ರಾಚಾರ್ಯ ಅಲ್ಲಮಪ್ರಭು ಬೆಟ್ಟದೂರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts