More

    ಬಜೆಟ್ ಮಂಡನೆಗೆ ಪ್ರತಿಪಕ್ಷ ಅಡ್ಡಿ, ಖರ್ಚು-ವೆಚ್ಚದ ಮಾಹಿತಿ ಕೇಳಿದ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ

    ಮಾನ್ವಿ: ಈ ಹಿಂದಿನ ವರ್ಷಗಳಲ್ಲಿ ಮಂಡಿಸಿದ ಬಜೆಟ್‌ನ ಖರ್ಚು-ವೆಚ್ಚಗಳ ಸಂಪೂರ್ಣ ಮಾಹಿತಿ ನೀಡಿ ನಂತರ ಈ ವರ್ಷದ ಬಜೆಟ್ ಮಂಡನೆ ಮಾಡಬೇಕು ಎಂದು ಪುರಸಭೆ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ ಒತ್ತಾಯಿಸಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2021-22ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿ, ಬಜೆಟ್ ಮಂಡನೆ ಪೂರ್ವ ಸದಸ್ಯರ ಜತೆ ಚರ್ಚೆ ಮಾಡಿಲ್ಲ. ಜಿಲ್ಲಾಧಿಕಾರಿ ಪರಿಶೀಲಿಸಿರುವ ಹಿಂದಿನ ವರ್ಷದ ಆಯ-ವ್ಯಯ ಮಾಹಿತಿ ಸಭೆಗೆ ನೀಡಿಲ್ಲ. ಮಾಹಿತಿ ನೀಡುವವರೆಗೂ ಬಜೆಟ್ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

    ಮುಖ್ಯಾಧಿಕಾರಿ ಜಗದೀಶ ಭಂಡಾರಿ ಪ್ರತಿಕ್ರಿಯಿಸಿ, ಬಜೆಟ್ ಸಭೆಯ ನಂತರ ಕಳೆದ ವರ್ಷ ಆಯ-ವ್ಯಯದ ಮಾಹಿತಿ ನೀಡಲಾಗುವುದು. ಸದಸ್ಯರಿಗೆ ಸರಿಯಾದ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಮಾತು ಮುಂದುರಿಸಿದ ರಾಜಾ ಮಹೇಂದ್ರ ನಾಯಕ, ಕಾಟಾಚಾರಕ್ಕೆ ಬಜೆಟ್ ಮಂಡನೆ ಮಾಡಲಾಗುತ್ತಿದೆ. ನಳಗಳ ಕರ ವಸೂಲಿಯಲ್ಲಿ ಗೊಂದಲವಿದೆ. ಪಟ್ಟಣದಲ್ಲಿ 7 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅನೇಕ ವರ್ಷಗಳಿಂದ ಪುರಸಭೆ ಮಳಿಗೆಗಳಿಗೆ ಟೆೆಂಟರ್ ಕರೆಯುತ್ತಿಲ್ಲ. ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತನ್ವೀರ್ ಉಲ್‌ಹಸನ್ ಮಾತನಾಡಿ, ಅಧಿಕಾರಿಗಳು ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು. ಲಕ್ಷ್ಮೀದೆವಿ ನಾಯಕ ಮಾತನಾಡಿ, ಪೂರ್ವಭಾವಿ ಸಭೆ ಕರೆಯದೆಯೆ ಬಜೆಟ್ ಮಂಡನೆ ಮಾಡುವುದು ಸಭೆಗೆ ಅಗೌರವ ತೋರಿದಂತೆ ಎಂದರು. ಜಗದೀಶ ಭಂಡಾರಿ ಪ್ರತಿಕ್ರಿಯಿಸಿ, ಇನ್ನು ಮುಂದೆ ಈರೀತಿಯಾಗದಂತೆ ಎಚ್ಚರ ವಹಿಸಲಾಗುವುದು. ಅಗತ್ಯ ವಿಷಯಗಳನ್ನು ಸದಸ್ಯರ ಗಮನಕ್ಕೆ ತರಲಾಗುವುದು. ಕಚೇರಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

    ನಂತರ 6.47 ಲಕ್ಷ ರೂ. ಉಳಿತಾಯ ಬಜೆಟನ್ನು ಉಪಾಧ್ಯಕ್ಷ ಸುಖಮುನಿ ಮಂಡನೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಸೂಫಿಯಾಬೇಗಂ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಫರೀದ್ ಉಮರಿ, ಸದಸ್ಯರಾದ ಶರಣಪ್ಪ ಮೇದಾ, ಇಬ್ರಾಹಿಂ ಖುರೇಷಿ, ಅನಿತಾ ಶಿವರಾಜ ನಾಯಕ, ಬಸಮ್ಮ ಹನುಮಂತ ಭೋವಿ, ಶರಣಪ್ಪಗೌಡ, ರೇವಣಸಿದ್ದಯ್ಯ, ಬಾಷಾಸಾಬ್, ಅಕ್ಜದ್‌ಖಾನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts