More

    ಸರ್ಕಾರದ ಲಾಭ ಪಡೆಯಲಷ್ಟೇ ಲಿಂಗಾಯತ ಜಾತಿ ಬಳಕೆ ಸಲ್ಲ- ಶ್ರೀಶೈಲ ಪೀಠದ ಜಗದ್ಗುರು ವಿಷಾಧ

    ಮಾನ್ವಿ: ವೀರಶೈವ ಧರ್ಮದ ಕುರುಹು ಆಗಿರುವ ಇಷ್ಟಲಿಂಗವನ್ನು ಇಂದಿನ ಯುವಕರು ಅಂಗದ ಮೇಲೆ ಧರಿಸುತ್ತಿಲ್ಲ. ಧರ್ಮದ ಕುರುಹನ್ನು ಪ್ರತಿಯೊಬ್ಬರೂ ಧರಿಸಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಯುವಕರಿಗೆ ಸಲಹೆ ನೀಡಿದರು.

    ಪಟ್ಟಣದ ಕಲ್ಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ, ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜನ ಜಾಗೃತಿ ಪಾದಯಾತ್ರಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪಾದಯಾತ್ರೆಯಲ್ಲಿ ಧರ್ಮ ಜಾಗೃತಿ ಮೂಡಿಸುವ ಜತೆಗೆ 10 ಸಾವಿರ ಅಧಿಕ ಜನರಿಗೆ ಲಿಂಗಧಾರಣೆಯನ್ನು ಮಾಡಲಾಗುವುದು ಎಂದರು.

    ವೀರಶೈವ ಲಿಂಗಾಯತ ಪರಂಪರೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ. ಧರ್ಮದಿಂದ ಕೇವಲ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೆ ಮಾತ್ರ ಲಿಂಗಾಯತ ಜಾತಿಬೇಕು ಎಂಬುದು ಸರಿಯಲ್ಲ. ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ನಾವು ಪಾಲಿಸಬೇಕು ಎಂದು ಹೇಳಿದರು.

    ಶ್ರೀಕ್ಷೇತ್ರ ಯಡೂರದಿಂದ ಶ್ರೀಶೈಲ ಕ್ಷೇತ್ರದವರೆಗೆ ಅ.29 ರಿಂದ ಜ.14ರವರೆಗೆ ನಡೆಯುವ ಪಾದಯಾತ್ರೆಯಲ್ಲಿ ಎದುರುಗೊಳ್ಳುವ ಗ್ರಾಮ ಹಾಗೂ ಪಟ್ಟಣಗಳಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ಹಾಗೂ ಲಿಂಗದೀಕ್ಷೆ, ದುಶ್ಚಟಗಳ ಭಿಕ್ಷೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾ ಅಧಿವೇಶನ, ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಮತ್ತು ತೆಲುಗು, ಕನ್ನಡ ಹಾಗೂ ಮರಾಠಿ ವೀರಶೈವ ಸಾಹಿತ್ಯ ಗೋಷ್ಠಿ, ಉಚಿತ ಸಾಮೂಹಿಕ ವಿವಾಹ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.

    ಪಾದಯಾತ್ರೆ ಮೂಲಕ ಜ್ಯೋರ್ತಿಲಿಂಗ ಕ್ಷೇತ್ರವಾದ ಶ್ರೀ ಮಲ್ಲಿಕಾರ್ಜುನ ದರ್ಶನ ಹಾಗೂ ಶ್ರೀಶೈಲ ಪೀಠವನ್ನು ಸಂದರ್ಶಿಸುವ ಭಕ್ತರ ಅಭಿಲಾಷೆಯಂತೆ ಪಾದಯಾತ್ರೆ ನಡೆಸಲಾಗುತ್ತಿದೆ. ಪಾದಯಾತ್ರೆಯು ರಾಯಚೂರು ಜಿಲ್ಲೆಯ ಹವು ತಾಲೂಕು, ಪಟ್ಟಣ ಗ್ರಾಮಗಳಲ್ಲಿ ಸಂಚರಿಸಲಿದೆ. ಈ ವರ್ಷ ಯುಗಾದಿ ಹಬ್ಬದ ಅಂಗವಾಗಿ ಮಲ್ಲಯ್ಯನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದರಿಂದ ಸ್ವಲ್ಪ ತೊಂದರೆಯಾಗಿದ್ದು, ಅಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್‌ರೆಡ್ಡಿ ಶ್ರೀಪೀಠಕ್ಕೆ 10 ಎಕರೆ ಭೂಮಿ ನೀಡಿದ್ದಾರೆ. ಈ ಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ಯಾತ್ರಾ ನಿವಾಸ, ಆಸ್ಪತ್ರೆ, ಸಮುದಾಯ ಭವನ ಇತರೆ ಅಗತ್ಯವಾದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

    ಕಲ್ಮಠದ ಡಾ.ಶಿವಮೂರ್ತಿ ಸ್ವಾಮೀಜಿ, ಪಂಡಿತ ವಿರೂಪಾಕ್ಷ ಸ್ವಾಮೀಜಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್, ಎ.ಬಿ.ಉಪ್ಪಳಪ್ಪ ಮಠ, ರಾಜಾ ರಾಮಚಂದ್ರನಾಯಕ, ವೀರಭದ್ರಪ್ಪಗೌಡ ಅಲ್ದಾಳ, ಅರುಣ ಚಂದಾ, ತಿಮ್ಮರಡ್ಡಪ್ಪ ಭೋಗಾವತಿ, ಮಲ್ಲಿಕಾರ್ಜುನಗೌಡ ಪೋತ್ನಾಳ, ಶಂಕರಯ್ಯಸ್ವಾಮಿ ಸುವರ್ಣಗಿರಿಮಠ, ವೀರನಗೌಡ ಪೋತ್ನಾಳ, ಅನಿತಾ ಬಸವರಾಜ, ಶ್ರೀಕಾಂತ ಗೂಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts