More

    ಮನೋಲ್ಲಾಸ: ಸೋಲುವ ಕಲ್ಪನೆಯೇ ಸೋಲಿಸುತ್ತದೆ

     

    ಒಂದು ದಿನ ಒಬ್ಬ ವ್ಯಕ್ತಿ ಟ್ಯಾಂಕಿನಲ್ಲಿ ನೀರನ್ನು ತುಂಬಿಸಿ ದೊಡ್ಡ ಮೀನೊಂದನ್ನು ಅದರಲ್ಲಿ ಹಾಕಿದ. ಅದು ಸಂತೋಷದಿಂದ, ಸ್ವತಂತ್ರವಾಗಿ ಸಮಯ ಕಳೆಯಿತು. ನಂತರ ಅದಕ್ಕೆ ಹಸಿವೆಯಾಯಿತು. ಆಗ ಆ ವ್ಯಕ್ತಿ ಕೆಲವು ಚಿಕ್ಕ ಮೀನುಗಳನ್ನು ಟ್ಯಾಂಕಿಗೆ ಹಾಕಿದನು. ದೊಡ್ಡ ಮೀನು ಆ ಚಿಕ್ಕ ಮೀನುಗಳನ್ನು ತಿನ್ನುತ್ತಾ ಕೆಲವು ದಿನಗಳು ಕಳೆಯಿತು. ನಂತರ ಆ ವ್ಯಕ್ತಿ ಫೈಬರ್ ಗಾಜನ್ನು ದೊಡ್ಡ ಮೀನು ಹಾಗೂ ಮೇಲ್ಭಾಗದಲ್ಲಿ ಚಿಕ್ಕ ಮೀನುಗಳನ್ನು ಇಟ್ಟ. ದೊಡ್ಡ ಮೀನಿಗೆ ಸ್ವಲ್ಪ ಸಮಯದ ನಂತರ ಹಸಿವೆಯಾಗಿ ಆಹಾರಕ್ಕಾಗಿ ಚಿಕ್ಕ ಮೀನುಗಳನ್ನು ಹುಡುಕಲು ಪ್ರಾರಂಭಿಸಿತು. ಆದರೆ ಬೇಟೆ ಸುಲಭವಾಗಿರಲಿಲ್ಲ. ಆ ಫೈಬರ್ ಗಾಜಿನ ಮೇಲೆ ದಾಳಿ ಮಾಡತೊಡಗಿತು. ಅದರ ಮೇಲ್ಮೈಗೆ ಬಡಿಯಿತು, ಆ ಗಾಜನ್ನು ಒಡೆಯುವ ಸಾಹಸವನ್ನು ಮಾಡಿತು. ಇನ್ನೇನು ಕೆಲವು ಸೆಕೆಂಡ್ ಕಾಲ ಅದು ದಾಳಿ ಮುಂದುವರಿಸಿದ್ದರೆ ಆ ಗಾಜು ಒಡೆದು, ಆಹಾರ ಸಿಗುವ ಹಂತದಲ್ಲಿದ್ದಾಗ, ಗಾಜನ್ನು ಒಡೆಯುವ ಕೆಲಸ ತನ್ನಿಂದಾಗದು ಎಂದು ಅದು ಕೈಚೆಲ್ಲಿತು. ಇದಾದ ಎರಡು ದಿನಗಳ ನಂತರ ಆ ವ್ಯಕ್ತಿಯು ಆ ಫೈಬರ್ ಗಾಜನ್ನು ತೆಗೆದ. ಆಗ ಒಂದೇ ನೀರಿನ ಟ್ಯಾಂಕಿನಲ್ಲಿಯೇ ಇದ್ದರೂ ಕೂಡ ಆ ದೊಡ್ಡ ಮೀನು ಚಿಕ್ಕ ಮೀನುಗಳನ್ನು ತಿನ್ನುವ ಪ್ರಯತ್ನ ಮಾಡುವ ಗೋಜಿಗೆ ಹೋಗಲಿಲ್ಲ. ಏಕೆಂದರೆ ಗಾಜಿನ ಹೊದಿಕೆ ಇನ್ನೂ ಇದೆ ಎಂಬ ಕಲ್ಪನೆಯನ್ನೇ ಅದು ಹೊಂದಿತ್ತು. ಹೀಗಾಗಿ ಆ ಚಿಕ್ಕ ಮೀನುಗಳು ಯಾವುದೇ ಭಯವಿಲ್ಲದೇ, ಅದೇ ಮೀನಿನ ಜೊತೆಗೆ ಕಾಲ ಕಳೆಯತೊಡಗಿದವು.

    ಆತ್ಮವಿಶ್ವಾಸದ ಬಗ್ಗೆ ಒಂದಿಷ್ಟೂ ಸಂಶಯಪಡದೇ ಇರುವವನು ಯಶಸ್ವಿಯಾಗುತ್ತಾನೆ. ನನ್ನಿಂದ ಸಾಧ್ಯ ಎಂದುಕೊಂಡರೆ ಎಲ್ಲವೂ ಸಾಧ್ಯ. ಅಸಾಧ್ಯ ಎಂದುಕೊಂಡರೆ ಯಾವುದೂ ಸಾಧ್ಯವಿಲ್ಲ. ಯಾವುದೇ ಕೆಲಸ ಪ್ರಾರಂಭಿಸುವ ಮೊದಲೇ ಋಣಾತ್ಮಕ ಕಲ್ಪನೆಗಳನ್ನು ಮಾಡಿಕೊಳ್ಳುತ್ತಾ ಇದು ನನ್ನಿಂದ ಸಾಧ್ಯವೇ? ಎಂದು ಪ್ರಶ್ನಿಸಿಕೊಳ್ಳುತ್ತಾ ನಮ್ಮ ಸಾಮರ್ಥ್ಯದ ಬಗ್ಗೆ ನಾವೇ ಸಂಶಯಪಟ್ಟರೆ ಕೆಲಸ ಕೈಗೂಡದು. ಇನ್ನು ಕೆಲವೊಮ್ಮೆ ಇನ್ನೇನು ಯಶಸ್ಸು ಸಿಗುತ್ತದೆ ಎಂಬ ಹಂತದಲ್ಲಿ ಪ್ರಯತ್ನ ಕೈಬಿಡುತ್ತೇವೆ. ಸಾಮಾಜಿಕ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಹೇಳುವಂತೆ- ‘ಹಾರಲು ಆಗದಿದ್ದರೆ ಓಡು, ಓಡಲು ಆಗದಿದ್ದರೆ ನಡೆ, ನಡೆಯಲೂ ಆಗದಿದ್ದರೆ ತೆವಳು, ಆದರೆ ಮುಂದಕ್ಕೆ ಹೆಜ್ಜೆ ಇಡುವುದನ್ನು ಮಾತ್ರ ಬಿಡಬೇಡ’. ಪದೇಪದೆ ಉಂಟಾಗುವ ಸೋಲುಗಳಿಂದ ಕಂಗೆಟ್ಟು ಹತಾಶ ಭಾವನೆ ಹೊಂದದೇ, ಹತ್ತು ಬಾರಿ ಸೋತರೂ ಪರವಾಗಿಲ್ಲ ಹನ್ನೊಂದನೆ ಬಾರಿಯಾದರೂ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಎಂದಿಗೂ ನಮ್ಮನ್ನು ಸೋಲಲು ಬಿಡುವುದಿಲ್ಲ.
    ಮನೋಲ್ಲಾಸ: ಸೋಲುವ ಕಲ್ಪನೆಯೇ ಸೋಲಿಸುತ್ತದೆರಾಜು ಭೂಶೆಟ್ಟಿ (ಲೇಖಕರು ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts