More

    ಮನೋಲ್ಲಾಸ: ದೊರೆತಿರುವುದನ್ನು ಗುರುತಿಸೋಣ

    | ರೇಖಾ ಗಜಾನನ ಭಟ್

    ಕಟ್ಟಿಗೆ ಮಾರಿ ಜೀವನ ನಡೆಸುತ್ತಿರುವ ಒಬ್ಬ ವ್ಯಕ್ತಿ ಎಂದಿನಂತೆ ಹೆಂಡತಿಯೊಡನೆ ಕಟ್ಟಿಗೆ ತರಲೆಂದು ಕಾಡಿಗೆ ಹೋದ. ಸತಿಪತಿಗಳಿಬ್ಬರೂ ಕಟ್ಟಿಗೆ ಸಂಗ್ರಹಿಸಿ, ಹೊರೆ ಹೊತ್ತು ವಾಪಾಸು ಬರುವಾಗ ಪತಿಯ ಕಾಲಿಗೆ ಏನೋ ತಾಕಿದಂತಾಯಿತು. ಕಲ್ಲಿರಬೇಕೆಂದು ಮುಂದೆ ಸಾಗಿದ. ಹಿಂದೆ ಬರುತ್ತಿದ್ದ ಅವನ ಸತಿಯ ಕಾಲು ಎಡವಿ ಅದೇ ಜಾಗದಲ್ಲಿ ಮುಗ್ಗರಿಸಿದಳು. ಆಗ ಗಂಡ ಅವಳನ್ನು ಎತ್ತಿ, ಸಮಾಧಾನಿಸಿ ಅಲ್ಲೇನಿದೆ..!? ಎಂದು ನೋಡಿದಾಗ ಲೋಹದ ಮುಚ್ಚಳಕ್ಕೆ ಹೊಂದಿಕೊಂಡಿದ್ದ ಬಳೆಯೊಂದು ಕಾಣಿಸಿತು. ಆಶ್ಚರ್ಯಚಕಿತನಾದ ಪತಿ ಲೋಹದ ಮುಚ್ಚಳದ ಸುತ್ತಲೂ ಅಗೆದಾಗ ಅಲ್ಲೊಂದು ಪುರಾತನ ಕಾಲದ ಪೆಟ್ಟಿಗೆ ಇರುವುದು ಗೋಚರವಾಯಿತು. ದಂಪತಿಗೆ ಅನಿರೀಕ್ಷಿತ ಆಶ್ಚರ್ಯದೊಂದಿಗೆ ಸಂತಸವೂ ಆಯಿತು. ‘ದೇವರು ನಮ್ಮ ಕಷ್ಟವನ್ನು ನೋಡಿ… ಇನ್ನಾದರೂ ಸುಖದಿಂದ ಜೀವಿಸಲಿ ಎಂದು ನಮಗೆ ಈ ಪೆಟ್ಟಿಗೆ ನೀಡಿದ್ದಾನೆ…’ ಎಂದು ಹರ್ಷಿಸಿದರು.

    ಕಟ್ಟಿಗೆ ಹೊರೆಯನ್ನು ಅಲ್ಲಿಯೇ ಬಿಟ್ಟು, ಪೆಟ್ಟಿಗೆಯೊಂದಿಗೆ ಮನೆಯತ್ತ ಬರಲಾರಂಭಿಸಿದರು. ಮಾರ್ಗಮಧ್ಯದಲ್ಲಿ ಪತಿ ‘ಈ ಪೆಟ್ಟಿಗೆ ತುಂಬ ಚಿನ್ನದ ನಾಣ್ಯಗಳಿರಬಹುದು ಎಂದೆನಿಸುತ್ತಿದೆ’ ಎಂದ. ಪತ್ನಿ, ‘ಇಲ್ಲ, ಈ ಪೆಟ್ಟಿಗೆ ವಜ್ರ, ಮುತ್ತು, ಆಭರಣಗಳಿಂದ ತುಂಬಿದೆ. ನಾನು ಅವುಗಳೆಲ್ಲವನ್ನು ತೊಟ್ಟು ಮೆರೆಯುತ್ತೇನೆ’ ಎಂದು ಬೀಗಿದಳು. ಮನೆ ತಲುಪಿ ಪೆಟ್ಟಿಗೆ ಮುಚ್ಚಳವನ್ನು ತೆಗೆದಾಗ ಅದರ ತುಂಬ ತಾಳೆಗರಿಯ ಕಟ್ಟುಗಳು ಇದ್ದದ್ದು ಕಂಡು ದಂಪತಿಗೆ ನಿರಾಸೆಯಾಯಿತು. ‘ಸುಮ್ಮನೆ ಮೋಸಹೋದೆವು’ ಎಂದು ಪೆಟ್ಟಿಗೆ ಸಮೇತ ಆ ತಾಳೆಗರಿಗಳನ್ನು ಮನೆ ಪಕ್ಕದ ಹೊಂಡದಲ್ಲಿ ಎಸೆದರು. ಮರುದಿನ ಪಕ್ಕದ ಮನೆಯ ಯುವಕ, ‘ಆ ಹೊಂಡದಲ್ಲಿ ತಾಳೆಗರಿಯ ಕಟ್ಟುಗಳು ಕಾಣುತ್ತಿವೆ. ದಯಮಾಡಿ ಅವುಗಳನ್ನು ತೆಗೆಯಲು ಸಹಾಯ ಮಾಡು’ ಎಂದು ಕೇಳಿಕೊಂಡ.

    ಆಗ ಕಟ್ಟಿಗೆ ಮಾರುವವ ನಡೆದ ಘಟನೆ ವಿವರಿಸುತ್ತಲೇ ಪೆಟ್ಟಿಗೆಯನ್ನು ಹೊಂಡದಿಂದ ಎತ್ತಿಕೊಟ್ಟು, ‘ನಾವೇ ನಿನ್ನೆ ಇವುಗಳನ್ನು ನಿರುಪಯುಕ್ತವೆಂದು ಇಲ್ಲಿ ಎಸೆದಿದ್ದೇವೆ. ಇವುಗಳಲ್ಲಿ ಅಂಥದ್ದೇನಿದೆ?’ ಎಂದು ಪ್ರಶ್ನಿಸಿದ. ಆಗ ಯುವಕ, ‘ಇವುಗಳಲ್ಲಿ ಏನಿದೆ ಎಂದು ನನಗೂ ತಿಳಿಯುತ್ತಿಲ್ಲ. ಇವು ನಿರುಪಯುಕ್ತವಾಗಿದ್ದರೆ ಲೋಹದ ಪೆಟ್ಟಿಗೆಯಲ್ಲಿ ಇಟ್ಟು ಭದ್ರಪಡಿಸುತ್ತಿರಲಿಲ್ಲ ಅಲ್ಲವೇ..’ ಎಂದು ಕೇಳಿದ. ಕಟ್ಟಿಗೆ ಮಾರುವವನಿಗೂ ಈ ಮಾತು ಹೌದೆನಿಸಿತು. ಇಬ್ಬರೂ ಸೇರಿ ಆ ತಾಳೆಗರಿಗಳನ್ನು ಸಂಗ್ರಹಿಸಿ ಊರಿನ ಮುಖಂಡರಿಗೆ ತಲುಪಿಸಿದರು. ಮುಂದೆ ಅವುಗಳ ಅಧ್ಯಯನ ಊರಿನ ಹಳೆಯ ದೇವಾಲಯದ ದೊಡ್ಡ ನಿಧಿಯನ್ನು ಹುಡುಕುವಲ್ಲಿ ಸಹಾಯವಾಯಿತು. ಕಟ್ಟಿಗೆ ಮಾರುವವನಿಗೆ ಒಳ್ಳೆಯ ಇನಾಮು ದೊರೆಯಿತು. ಊರು ಕೂಡ ಶ್ರೀಮಂತವಾಯಿತು. ಬಹಳಷ್ಟು ಸಲ ದೇವರು ನಮಗೆ ನೀಡಿದ ಕೊಡುಗೆ ನಮ್ಮ ಬೇಡಿಕೆಯ ಮಿತಿಗಿಂತಲೂ ಹೆಚ್ಚಿನದೇ ಇರಬಹುದು. ನಮ್ಮ ಪ್ರಾರ್ಥನೆಗಿಂತಲೂ ಮಿಗಿಲಾದುದೇ ನಮಗೆ ದೊರೆಯಬಹುದು. ಆದರೆ ನಾವು ಅದನ್ನು ಗುರುತಿಸುವಲ್ಲಿ ಎಡವಬಾರದಷ್ಟೇ.

    ದಾರಿಯು ಕಾಣುವುದು ಸ್ವಲ್ಪ ಯೋಚಿಸು/ ದೇವರ ಕೊಡುಗೆ ಹಿರಿದು ಕೊಂಚ ರ್ತಸು/ ಅವಸರವ ತೋರಿ ಎಡವದಿರು ಮನವೆ/ ಅರಿತು ನಡೆಯುತಿರಲು ನೀನೇ ಗೆಲುವೆ.

    (ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts