More

    ಗಳಿಕೆ ಹಾಗೂ ಸದ್ಬಳಕೆ; ವ್ಯಕ್ತಿಯ ಮೌಲ್ಯ ಅರಿತಾಗಲೇ ಸಮಾಜವು ಸುಸ್ಥಿರ

    ಗಳಿಕೆ ಹಾಗೂ ಸದ್ಬಳಕೆ; ವ್ಯಕ್ತಿಯ ಮೌಲ್ಯ ಅರಿತಾಗಲೇ ಸಮಾಜವು ಸುಸ್ಥಿರ| ಡಾ. ಗಣಪತಿ ಆರ್. ಭಟ್

    ಮಹಾಭಾರತ ಯುದ್ಧದ ಸಂದರ್ಭ. ಅಶ್ವತ್ಥಾಮ ಆವೇಶಭರಿತನಾಗಿದ್ದ. ತನ್ನ ತಂದೆಯನ್ನು ಹಾಗೂ ದುರ್ಯೂೕಧನಾದಿಗಳನ್ನು ಕೊಂದ ಪಾಂಡವರನ್ನು ನಿರ್ನಾಮ ಮಾಡಲು ಪಾಂಡವರ ಮೇಲೆರಗಿದ. ಆತ ಯಾರ ಮಾತನ್ನೂ ಕೇಳಲಿಲ್ಲ. ಸ್ವತಃ ವಿವೇಚಿಸಲಿಲ್ಲ. ಪಾಂಡವರನ್ನು ನಾಶ ಮಾಡುವ ಹಠಕ್ಕೆ ಬಿದ್ದು ಹುಲ್ಲುಕಡ್ಡಿಯಲ್ಲಿ ತನ್ನ ದಿವ್ಯಾಸ್ತ್ರವನ್ನು ಅಭಿಮಂತ್ರಿಸಿ ಬಿಟ್ಟು ಬಿಟ್ಟ. ಅದರ ಜ್ವಾಲೆಯಲ್ಲಿ ಲೋಕವೇ ಬೆಂದು ಹೋಗುವ ಹಾಗಾಯಿತು. ನಾರದ-ವ್ಯಾಸರು ಬಂದು ಬೇಡಿಕೊಂಡರೂ ಅಶ್ವತ್ಥಾಮ ಅಸ್ತ್ರವನ್ನು ಹಿಂದಕ್ಕೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಕೃಷ್ಣನೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಸರಿ ಮಾಡಿದ. ಅಶ್ವತ್ಥಾಮನ ಬಳಿ ತಂದೆಯ ಕೃಪೆಯಿಂದ ಪಡೆದ ವಿದ್ಯೆಯಿತ್ತು. ದುರ್ಯೂೕಧನನಿಂದ ಪಡೆದ ಅಧಿಕಾರವಿತ್ತು. ಚಿರಂಜೀವಿಯಾಗಿ ಬದುಕಲು ಶಿವನ ವರವಿತ್ತು. ಆದರೆ ದುಷ್ಟನೂ, ಕೋಪಿಷ್ಠನೂ ಆದ ಆತ ಯಾವುದನ್ನೂ ಸರಿಯಾಗಿ ಬಳಸಿಕೊಳ್ಳಲಿಲ್ಲ. ಉತ್ತರೆಯ ಗರ್ಭದಲ್ಲಿದ್ದ ಶಿಶುವಿನ ಮೇಲೆ ಪ್ರಹಾರ ಮಾಡಿದ್ದಕ್ಕಾಗಿ ‘ಸಾವಿರಾರು ವರ್ಷಗಳವರೆಗೆ ಕಾಡಿನಲ್ಲಿ ಏಕಾಂಗಿಯಾಗಿ ಅಲೆದಾಡು’ ಎಂಬ ಶಾಪವನ್ನು ಕೃಷ್ಣ ಆತನಿಗೆ ನೀಡಿದ. ಸುಖವಾಗಿರಲು ಬಯಸುವ ಮನುಷ್ಯ ನಾನಾ ಸಂಗತಿಗಳನ್ನು ಗಳಿಸುತ್ತಾನೆ. ಆದರೆ ಬಳಸುವಲ್ಲಿ ವಿಫಲನಾಗುತ್ತಾನೆ.

    ಸುಭಾಷಿತವೊಂದು ಹೀಗೆ ಹೇಳುತ್ತದೆ:

    ವಿದ್ಯಾ ವಿವಾದಾಯ ಧನಂ ಮದಾಯ ಶಕ್ತಿಃ ಪರೇಷಾಂ ಪರಿಪೀಡನಾಯ|

    ಖಲಸ್ಯ ಸಾಧೋರ್ವಿಪರೀತಮೇತತ್ ಜ್ಞಾನಾಯ ದಾನಾಯ ಚ ರಕ್ಷಣಾಯ||

    ದುಷ್ಟ ಸ್ವಭಾವದ ವ್ಯಕ್ತಿ ತನ್ನ ಬಳಿಯಿರುವ ವಿದ್ಯೆಯನ್ನು ಕಲಹಕ್ಕೆ, ಹಣವನ್ನು ದರ್ಪಕ್ಕೆ, ಶಕ್ತಿಯನ್ನು ಅನ್ಯರನ್ನು ಪೀಡಿಸಲಿಕ್ಕೆ ಬಳಸಿಕೊಳ್ಳುತ್ತಾನೆ. ಆದರೆ ಒಳ್ಳೆಯ ಜನರ ಬಳಿ ಇರುವ ವಿದ್ಯೆ ಜ್ಞಾನಕ್ಕಾಗಿ, ಧನವು ದಾನಕ್ಕಾಗಿ, ಶಕ್ತಿ ಸಂಕಷ್ಟದಲ್ಲಿ ಇರುವವರನ್ನು ರಕ್ಷಿಸಲಿಕ್ಕಾಗಿ ಬಳಕೆಯಾಗುತ್ತದೆ.

    ದುರ್ಯೂೕಧನ ನಾನಾ ವಿದ್ಯಾ ಪಾರಂಗತನಾಗಿದ್ದ. ಆತನ ವಿದ್ಯೆ ಪಾಂಡವರ ಜೊತೆಗೆ ಕಲಹ ಮಾಡಲು ಬಳಕೆಯಾಯಿತು. ವಿದುರನ ಬಳಿಯಿದ್ದ ವಿದ್ಯೆಯಾದರೋ ಉಪದೇಶಿಸಲು ಬಳಕೆಯಾಯಿತು. ಕುಬೇರನಿಂದ ಲಂಕೆಯೆಂಬ ಸಂಪತ್ತನ್ನು ಪಡೆದ ರಾವಣ ಅದನ್ನು ತನ್ನ ಮದ ಪ್ರದರ್ಶನಕ್ಕಾಗಿ ಬಳಸಿಕೊಂಡ. ಇಕ್ಷಾ್ವಕು ವಂಶದ ರಾಜ ರಘು ತನ್ನ ಪರಾಕ್ರಮದಿಂದ ಭೂಮಂಡಲವನ್ನು ಗೆದ್ದು ಆ ಹಣವನ್ನೆಲ್ಲ ದಾನ ಮಾಡಿ ಪುಣ್ಯ ಸಂಪಾದಿಸಿದ. ತನ್ನ ಹಮ್ಮು ಮುರಿಯಿತೆಂದು ಇಂದ್ರ ತನ್ನ ಶಕ್ತಿಯನ್ನೆಲ್ಲ ಬಳಸಿಕೊಂಡು ಸತತ ಮಳೆ ಸುರಿಸಿ ನಂದಗೋಕುಲದ ಜನರನ್ನು ಪೀಡಿಸಿದ. ಕೃಷ್ಣ ತನ್ನ ಶಕ್ತಿಯನ್ನು ಬಳಸಿ ಗೋವರ್ಧನ ಗಿರಿಯನ್ನು ಎತ್ತಿ ನಂದಗೋಕುಲವನ್ನು ಮಳೆಯಿಂದ ಕಾಪಾಡಿದ. ಜೀವನೋಪಾಯಕ್ಕಾಗಿ ಮನುಷ್ಯ ವಿದ್ಯೆ, ಸಂಪತ್ತು, ಬಲ ಇತ್ಯಾದಿ ನಾನಾ ಸಂಗತಿಗಳನ್ನು ಸಂಪಾದಿಸಬೇಕು ನಿಜ. ಆದರೆ ಅದರ ವಿನಿಯೋಗವನ್ನು ಸರಿಯಾದ ಮಾರ್ಗದಲ್ಲಿ ಮಾಡಲಿಲ್ಲವೆಂದರೆ ಅಧಃಪತನವೂ ನಿಶ್ಚಿತ. ಸಮಾಜದ ದೃಷ್ಟಿಯೂ ಎಷ್ಟು ವಿಚಿತ್ರವೆಂದರೆ ವ್ಯಕ್ತಿಯ ಬಳಿ ಏನಿದೆ? ಏನನ್ನು ಗಳಿಸಿದ್ದಾನೆ? ಎನ್ನುವುದರ ಮೇಲೆ ಆತನಿಗೆ ಮಣೆ ಹಾಕುವುದುಂಟು. ಅದು ಅಪಾಯಕಾರಿ ನಡೆ. ಗಳಿಕೆ ಹೇಗೆ ಬಳಕೆಯಾಗುತ್ತಿದೆ ಎನ್ನುವುದರ ಮೇಲೆ ವ್ಯಕ್ತಿಯ ಮೌಲ್ಯ ಅರಿತಾಗಲೇ ಸಮಾಜವು ಸುಸ್ಥಿರವಾಗಿರಲು ಸಾಧ್ಯ.

    (ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts