More

    ಅಸೂಯೆ ಒಂದು ಭಾವನೆ ಎಂಬುದನ್ನು ಬೀರಬಲ್​ ನಿರೂಪಿಸಿದ್ದು ಹೀಗೆ..

    ಮೊಗಲ್ ಬಾದಶಹ ಅಕ್ಬರಿನ ದರ್ಬಾರಿನಲ್ಲಿ ಬುದ್ಧಿವಂತಿಕೆಗೆ ಇನ್ನೊಂದು ಹೆಸರೇ ಬೀರಬಲ್. ಅವನ ಮಾತುಗಾರಿಕೆಗೆ ಬಾದಶಹ ತಲೆದೂಗುತ್ತಿದ್ದದ್ದನ್ನು ಕಂಡು ಕೆಲವರು ಅಸೂಯೆ ಪಡುತ್ತಿದ್ದರು. ಹಾಗಾಗಿ, ಇಬ್ಬರ ಸಂಬಂಧದಲ್ಲಿ ಹುಳಿ ಹಿಂಡಲು ಯತ್ನಿಸಿ, ಸಲ್ಲದ ಆರೋಪಗಳನ್ನು ಮಾಡುತ್ತಿದ್ದರು. ಅದೊಮ್ಮೆ, ಬೀರಬಲ್​ನು ‘ಬಾದಶಹ ವಿವೇಕಹೀನ, ಹೆಚ್ಚು ವಿವೇಕಿ ನಾನೇ’ ಎಂದು ಹೇಳಿಕೊಂಡಿರುವುದಾಗಿ ಅಕ್ಬರ್​ನಿಗೆ ತಿಳಿಸಿದರು. ರಾಜನೂ ಹಿತ್ತಾಳೆಕಿವಿ ಆಗಿ ಹೋದ. ಅತೀ ಸಲಿಗೆಯ ಪ್ರಭಾವವೇ ತಾತ್ಸಾರಕ್ಕೆ ಕಾರಣ ಎಂದು ಕೆಂಡಾಮಂಡಲಗೊಂಡ. ಮಾರನೆಯ ದಿನ ಬೀರಬಲ್ ದರ್ಬಾರಿಗೆ ಬರುತ್ತಿದ್ದಂತೆ, ವಕ್ರದೃಷ್ಟಿ ಬೀರಿ, ‘ನಿನಗೆ ಅದೃಷ್ಟಪರೀಕ್ಷೆ ಅಣಕಿಸುತ್ತಿದೆ. ನಾಲ್ಕು ಪ್ರಶ್ನೆಗಳನ್ನು ನಿನ್ನ ಮುಂದಿಡಲಿದ್ದೇನೆ. ಒಂದೇ ವಾಕ್ಯದಲ್ಲಿ ಸಮರ್ಪಕ ಉತ್ತರ ನೀಡಬೇಕು’ ಎಂದ. ಏನು ನಡೆದಿರಬಹುದು ಎಂಬುದನ್ನು ಬೀರಬಲ್ ಮನಸ್ಸಿನಲ್ಲಿ ಊಹಿಸಿ, ‘ಖಾವಂದರೇ, ನಾನು ಪಳಗಿರುವುದೇ ನಿಮ್ಮ ಗರಡಿಯಲಿ. ನನಗೆ ಯಾವ ಪಟ್ಟೂ ಕಷ್ಟ ಎನಿಸುವುದಿಲ್ಲ, ಕೇಳುವ ಪ್ರಶ್ನೆಗಳಿಗೆ ವಾಕ್ಯವಲ್ಲ ಒಂದೇ ಪದದಲ್ಲಿ ಉತ್ತರ ನೀಡುವ ಸಾಮರ್ಥ್ಯವನ್ನು ತಮ್ಮ ಕೃಪಾಶೀರ್ವಾದದಿಂದಲೇ ಪಡೆದಿದ್ದೇನೆ’ ಎಂದ.

    ಬೀರಬಲ್​ಗೆ ಕೇಳಲಾದ ಪ್ರಶ್ನೆ,

    • ಎಲೆಗಳು ಏಕೆ ಉದುರುತ್ತವೆ?
    • ಕುದುರೆ ಒಂದೊಂದು ಬಾರಿ ಸರಿಯಾಗಿ ನಡೆಯುವುದಿಲ್ಲವಲ್ಲ ಅದೇಕೆ?
    • ಒಳ್ಳೆಯ ಬೀಜ ಬಿತ್ತಿದರೂ ಕೆಲವೊಮ್ಮೆ ಬೆಳೆ ಚೆನ್ನಾಗಿ ಆಗದಿರಲು ಕಾರಣ ಏನು?
    • ಕಲಿತ ವಿದ್ಯೆಯೂ ಹಲವಾರು ಬಾರಿ ಮರೆತು ಹೋಗಲು ಕಾರಣವೇನು?

    ಬೀರಬಲ್ ನಸುನಗುತ್ತ ಬೆಣ್ಣೆಯಲ್ಲಿ ಕೂದಲನ್ನು ತೆಗೆದ ಹಾಗೆ ಸಲೀಸಾಗಿ ಒಂದೇ ಶಬ್ದದಲ್ಲಿ ಉತ್ತರಿಸಿದ- ‘ತಿರುಗುವಿಕೆ’. ಅದನ್ನು ವಿಶ್ಲೇಷಿಸಿ ಸ್ಪಷ್ಟಪಡಿಸು ಎಂದ ಬಾದಶಹ. ‘ದೊರೆಗಳೇ ಪ್ರತಿದಿನ ಎಲೆಗಳನ್ನು ತಿರುಗಿಸದೆ ಹಾಗೆಯೇ ಇಟ್ಟರೆ ಗಾಳಿಸಂಚಾರದ ಕೊರತೆ ಕಾರಣ, ಎಲೆಗಳು ಕೊಳೆತು ಹೋಗುವವು, ಕುದುರೆಯ ಲಗಾಮನ್ನು ಸಮಯಾನುಸಾರ ಸೂಕ್ತ ರೀತಿಯಲ್ಲಿ ತಿರುಗಿಸದಿದ್ದರೆ ಕುದುರೆಯ ನಡಿಗೆ ಅಡ್ಡಾದಿಡ್ಡಿ ಆಗುವುದು ಸ್ವಾಭಾವಿಕ. ಅದೇ ರೀತಿ ಬಿತ್ತಿದ ಬೀಜ ಭೂಮಿಯಲ್ಲಿ ಮಣ್ಣನ್ನು ಆಗಾಗ ತಿರುವುತ್ತಿರುವುದರಿಂದ ಬೆಳೆ ಹುಲುಸಾಗುವುದು. ಕಲಿತಿದ್ದರೂ ಕಲಿತ ವಿದ್ಯೆಯನ್ನು ಆಗಾಗ ತಿರುವಿ ಹಾಕುತ್ತಿರಬೇಕು; ಇಲ್ಲವಾದರೆ ಕಲಿತಿದ್ದು ಕ್ರಮೇಣ ಮರೆತು ಹೋಗುವುದೂ ಸಹಜ’ ಎಂದ. ಬಾದಶಹ ಬೆಸ್ತು ಬಿದ್ದಂತಾದ. ತನ್ನ ಅವಿವೇಕತನಕ್ಕೆ ಪಶ್ಚಾತ್ತಾಪ ಪಟ್ಟು ಬೀರಬಲ್​ನನ್ನು ಬಿಗಿದಪ್ಪಿಕೊಂಡ.

    ಅಸೂಯೆ ಒಂದು ಭಾವನೆ, ಅಸೂಯೆಗಿಂತ ದೊಡ್ಡ ಕಿಚ್ಚು ಬೇರಿಲ್ಲ, ಹೃದಯವನ್ನು ಕಲುಷಿತಗೊಳಿಸಿ, ಸದಾಕಾಲ ಧಗಧಗಿಸಿ, ಉರಿಯುವಂತೆ ಮಾಡುತ್ತದೆ. ಅಪರಿಪೂರ್ಣರಾದ ಮಾನವರಿಗೆ ಅಸೂಯೆಪಡುವ ಪ್ರವೃತ್ತಿ ಇರುತ್ತದೆ. ಅಭದ್ರತೆಯ ಕಾಳಜಿ ಮತ್ತು ಆತಂಕ, ಅಸಮಾಧಾನ, ಅಸಹಾಯಕತೆ ಕ್ರಮೇಣ ಅಸೂಯೆಯ ರೂಪ ತಳೆಯುತ್ತವೆ. ಹಾಗಾಗಿ, ಅಸೂಯೆಯನ್ನು ತ್ಯಜಿಸಿ, ನಾಲ್ಕು ದಿನಗಳ ಬದುಕಿನಲ್ಲಿ ನಿಜವಾದ ಸ್ನೇಹ, ಪ್ರೀತಿ, ಮಮತೆಯನ್ನು ರೂಢಿಸಿಕೊಂಡು ಸಾರ್ಥಕತೆಯ ದಾರಿಯಲ್ಲಿ ಸಾಗೋಣ.

    | ವಿದ್ಯಾ ಉಪೇಂದ್ರ ಜೋಶಿ (ಲೇಖಕಿ ಹವ್ಯಾಸಿ ಬರಹಗಾರ್ತಿ, ಸಂಗೀತಗಾರ್ತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts