More

    ಮನೋಲ್ಲಾಸ: ಎಲ್ಲರ ಸರದಿ ಬರುತ್ತದೆ…

    | ಸುಮಾವೀಣಾ
    ಮನೋಲ್ಲಾಸ: ಎಲ್ಲರ ಸರದಿ ಬರುತ್ತದೆ...ಪಂಪನ ವಿಕ್ರಮಾರ್ಜುನವಿಜಯದ ದಶಮಾಶ್ವಾಸದಲ್ಲಿ ಭೀಷ್ಮಪಟ್ಟಾಭಿಷೇಕ ಸಂದರ್ಭದಲ್ಲಿ ಕರ್ಣ ಮತ್ತು ಭೀಷ್ಮರ ನಡುವೆ ನಡೆದ ಸಂಘರ್ಷದ ಸಂವಾದ ಅರ್ಥಗರ್ಭಿತವಾಗಿದೆ. ಕರ್ಣ ದುರ್ಯೋಧನನನ್ನು ಕುರಿತು, ‘ಪಗೆವರನಿಟ್ಟೆಲ್ವಂ ಮುರಿವೊಡೆನಗೆ ಪಟ್ಟಂಗಟ್ಟಾ’ ಅಂದರೆ ‘ಹಣ್ಣುಹಣ್ಣು ಮುದುಕರಾಗಿರುವ ಭೀಷ್ಮರಿಗೆ ಯುದ್ಧಪಟ್ಟವನ್ನು ಕಟ್ಟುವ ಬದಲು ನನಗೆ ಪಟ್ಟ ಕಟ್ಟು. ಹಗೆಯವರಾದ ಪಾಂಡವರಿಗೆ ಸೋಲಿನ ರುಚಿ ತೋರಿಸುವುದಾದರೆ ಇದು ಅಗತ್ಯ’ ಎನ್ನುತ್ತಾನೆ. ಆ ಸಂದರ್ಭದಲ್ಲಿ ವಯೋವೃದ್ಧರೂ, ಜ್ಞಾನವೃದ್ಧರೂ ಆದ ಭೀಷ್ಮರು ಕರ್ಣನ ಮಾತಿಗೆ ಮುನಿಸಿಕೊಳ್ಳದೆ ‘ಸೂಳ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್’! ಎಂದು ಮಾರ್ವಿುಕವಾಗಿ ವ್ಯಂಗ್ಯವಾಡುತ್ತಾರೆ. ಕಾವ್ಯಮೀಮಾಂಸೆಯ ಅರ್ಥಧ್ವನಿಗೆ ಇದೊಂದು ಒಳ್ಳೆಯ ಉದಾಹರಣೆ. ಅಂದರೆ, ‘ಯುದ್ಧಭೂಮಿಯಲ್ಲಿ ಹೋರಾಡುವ ಸರದಿ ನಿನಗೂ ಬರುತ್ತದೆ. ಅದಕ್ಕೆ ವ್ಯವಧಾನ ಬೇಕು, ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ. ನಮ್ಮದೇನಿದ್ದರೂ ಒಬ್ಬರಾದ ಮೇಲೆ ಒಬ್ಬರು ಪತನ ಹೊಂದುವ ಕೆಲಸ’ ಎನ್ನುತ್ತಾರೆ.

    ಇಲ್ಲಿ ಯುದ್ಧವೆಂದರೆ ಬದುಕು ಎಂತಲೂ ತೆಗೆದುಕೊಳ್ಳಬಹುದು. ಹಾಗಾಗಿ ಇಲ್ಲಿ ‘ಸರದಿ’ ಎಂಬ ಪದ ಇಡೀ ಜೀವನಕ್ಕೆ ಅನ್ವಯಿಸುವಂಥದ್ದು. ಬಾಲ್ಯ, ಕಿಶೋರಾವಸ್ಥೆ, ಯೌವ್ವನ, ಮುಪ್ಪುಗಳು ಬಂದೇ ಬರುತ್ತವೆ. ಇದರ ಜೊತೆಗೆ ಹಗಲು-ಇರುಳು, ಸುಖ-ದುಃಖ, ಸೋಲು-ಗೆಲುವುಗಳು ಆವರ್ತವಾಗಿ ಬರುತ್ತವೆ. ಅದಕ್ಕೆ ನಾವು ಸಿದ್ಧರಿರಬೇಕು. ದೇವಾಲಯದ ಘಂಟಾನಾದ ಮತ್ತೆ ಮತ್ತೆ ಹೇಗೆ ರಿಂಗಣಿಸುತ್ತಿರುತ್ತದೆಯೋ ಅಂತೆಯೇ ಇಲ್ಲಿ ಸರದಿ ಎಂಬ ಪದದ ಅರ್ಥ ಮತ್ತೆ ಮತ್ತೆ ನಮಗೆ ಹೊಳೆಯುತ್ತದೆ. ಭೀಷ್ಮರ ಮಾತಿನನ್ವಯ ಮೊದಲನೆಯದಾಗಿ ಯುದ್ಧದಲ್ಲಿ ಹೋರಾಡುವ ಸರದಿ, ಎರಡನೆಯದಾಗಿ ಯೌವ್ವನದಿಂದ ಮುಪ್ಪಿಗೆ ಸರಿಯುವ ಸರದಿ, ಮೂರನೆಯದಾಗಿ ಸಾವಿನ ಸರದಿ ಬಂದೇ ಬರುತ್ತದೆ ಎಂದು ತಿಳಿಯಬೇಕು. ‘ಜಾತಸ್ಯ ಮರಣಂ ಧ್ರುವಂ’ ಎಂಬಂತೆ ಹುಟ್ಟಿದವರು ಸಾಯಲೇಬೇಕೆಂಬ ನಿಯಮವಿದೆ. ಈ ಸತ್ಯವನ್ನು ತಿಳಿದ ಮೇಲೆ, ಶಾಶ್ವತವಲ್ಲದ ತಾರುಣ್ಯದಲ್ಲಿ ಅನ್ಯವಿಷಯಕ್ಕೆ ಮಾರು ಹೋಗಬಾರದು, ಹೋರಾಟದ ಸಂಕಲ್ಪವನ್ನು ಕಡೆಗಣಿಸಬಾರದು, ಬದುಕಿರುವಾಗ ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ಮರೆತು ಮೆರೆಯಬಾರದು. ಬದುಕಿನ ಎಲ್ಲ ಮಜಲುಗಳನ್ನು ಅನುಭವಿಸಲು ಅವಕಾಶಇದ್ದೇ ಇದೆ ಎಂಬುದನ್ನೂ ‘ಸರದಿ’ ಹೇಳುತ್ತದೆ.

    ಜೀವನಪಾಠವೇ ಹಾಗೆ! ಆಕಾಶವನ್ನು ನೋಡಲು ಮುಗಿಬೀಳಬೇಕಿಲ್ಲ. ಎಲ್ಲಿ ನಿಂತರೂ ನೀಲಾಕಾಶ ಗೋಚರಿಸುತ್ತದೆ. ಹಾಗೆ ಮನುಷ್ಯನಿಗೂ ಅವಕಾಶಗಳ ಸರದಿ ಇರುತ್ತದೆ, ಅದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕಷ್ಟೆ. ದುಡುಕಿನಿಂದ ಜೀವನ ನಿಯಮಗಳನ್ನು ಮುರಿಯುವುದು ಉದ್ಧಟತನ. ಮನುಷ್ಯ ಚಿರಂಜೀವಿಯಂತೂ ಅಲ್ಲ! ಮೃತ್ಯು ಎಂಬ ಛಾಯೆ ನಮ್ಮ ನಡುವೆ ಸುತ್ತುತ್ತಲೇ ಇರುತ್ತದೆ. ಲೌಕಿಕ ಸುಖಭೋಗಗಳಿಗೆ ಸಮಯವನ್ನು ವ್ಯರ್ಥ ಮಾಡಬಾರದು. ಸತ್ತ ಮೇಲೆಯೂ ಬದುಕುವಂಥ ಜೀವನಮಾರ್ಗ ನಮ್ಮದಾಗಿರಬೇಕು. ತಾನಾಗಿ ಒದಗಿಬರುವ ಕಾರ್ಯಗಳನ್ನು ನಿಷ್ಠೆಯಿಂದ ಮಾಡಬೇಕಷ್ಟೆ. ಆಗ ನಮಗೆ ಯಥಾವತ್ ಪ್ರತಿಫಲ ಎಂಬ ಸರದಿ ಅರಸಿ ಬರುತ್ತದೆ.

    (ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts