More

    ಅರಿವಿನ ಪ್ರಜ್ಞೆ; ಯಥಾರ್ಥವನ್ನು ಅರ್ಥೈಸಿಕೊಳ್ಳಿ…

    ಅರಿವಿನ ಪ್ರಜ್ಞೆ; ಯಥಾರ್ಥವನ್ನು ಅರ್ಥೈಸಿಕೊಳ್ಳಿ...| ರವಿ ಮಡೋಡಿ
    ನಮ್ಮ ಮನಸ್ಸೇ ಹಾಗೆ. ಯಾವುದೇ ಒಂದು ಸ್ಥಿತಿಗೆ ಅಂಟಿಕೊಂಡರೆ ಸಾಕು ಯಥಾರ್ಥವನ್ನು ಅರ್ಥವಿಸಿಕೊಳ್ಳಲು ಸಿದ್ಧವಿರದೇ ತಾನು ನಂಬಿರುವುದೇ ಸತ್ಯವೆನ್ನುವುದನ್ನು ಸಾರಲು ಪ್ರಯತ್ನಿಸುತ್ತಿರುತ್ತದೆ. ಈ ಸ್ಥಿತಿಯಲ್ಲಿ ಪೂರ್ವಗ್ರಹ ರಹಿತವಾಗಿ ಯೋಚಿಸುವುದಕ್ಕೆ ಸಾಧ್ಯವಾಗುವುದಿಲ್ಲ.

    ಒಂದೂರಿನಲ್ಲಿ ಒಬ್ಬ ಅರಸನಿದ್ದ. ಅವನಿಗೆ ಬಹಳ ಆಪ್ತನಾದ ಒಬ್ಬ ಮಂತ್ರಿಯಿದ್ದ. ಅವನು ಹೇಳುವ ಮಾತುಗಳೇ ರಾಜನಿಗೆ ಅಂತಿಮ. ಎಂದೂ ಮಂತ್ರಿಯ ಸಲಹೆ, ಸೂಚನೆಗಳನ್ನು ವಿವೇಚಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಇದನ್ನು ಚೆನ್ನಾಗಿಯೇ ಅರಿತಿದ್ದ ಮಂತ್ರಿ ತನ್ನ ಲಾಭದ ಸಲುವಾಗಿ ಮತ್ತು ತನಗೆ ವಿರೋಧಿಗಳೆನಿಸಿದವರನ್ನು ಹತ್ತಿಕ್ಕಲು ಅಸ್ತ್ರವಾಗಿಸಿಕೊಂಡಿದ್ದ. ಒಂದು ದಿನ ಮಂತ್ರಿ ಆಸ್ಥಾನಕ್ಕೆ ಬರುತ್ತಿರುವಾಗ ಕಾವಲುಗಾರ ಅವನನ್ನು ಗಮನಿಸಲಿಲ್ಲ. ತನಗೆ ಗೌರವ ಕೊಡಲಿಲ್ಲ ಎಂದು ಕುಪಿತನಾದ ಮಂತ್ರಿ ಇವನಿಗೆ ಸರಿಯಾದ ಪಾಠ ಕಲಿಸುತ್ತೇನೆ ಎಂದು ನಿರ್ಧರಿಸಿಕೊಂಡು ರಾಜನ ಬಳಿಗೆ ಬಂದು ಕಾವಲುಗಾರನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ. ಇದರಿಂದ ಕೋಪಗೊಂಡ ರಾಜ, ಕಾವಲುಗಾರನನ್ನು ಎಳೆದು ತರುವಂತೆ ಭಟರಿಗೆ ಆದೇಶಿಸಿದ. ಕಾವಲುಗಾರ ತನ್ನ ಕೆಲಸದ ನಿಷ್ಠೆಯನ್ನು ರಾಜನಲ್ಲಿ ಪರಿಪರಿಯಾಗಿ ಬಿನ್ನವಿಸಿ ಕೊಂಡು, ನಡೆದ ವಿಚಾರವನ್ನು ತಿಳಿಸುವ ಪ್ರಯತ್ನ ಮಾಡಿದ. ರಾಜನಿಗೆ ಮಂತ್ರಿಯ ನುಡಿಯೇ ಪರಮೋಚ್ಚ ವಾಗಿದ್ದರಿಂದ, ಕಾವಲುಗಾರನ ಯಾವ ಮಾತುಗಳೂ ಹಿತವೆನಿಸಲಿಲ್ಲ. ಪಕ್ಷಪಾತವಿಲ್ಲದೇ ವಿಚಾರಣೆ ನಡೆಸದೆ ಅವನಿಗೆ ಶಿಕ್ಷೆ ವಿಧಿಸಿದ. ಆದರೆ ನ್ಯಾಯಸಮ್ಮತವಲ್ಲದ ರಾಜನ ಈ ನಿರ್ಣಯದಿಂದ ತಪು್ಪಸಂದೇಶವೊಂದು ಅವನ ಆಡಳಿತ ವರ್ಗಕ್ಕೆ ಬಿತ್ತರಗೊಂಡಿತು. ಅವರು ತಮ್ಮ ಕರ್ತವ್ಯ ನಿಷ್ಠೆಯ ಬಗ್ಗೆ ಮನಸ್ಸನ್ನು ಸ್ಥಿರವಾಗಿಸದೇ, ಮಂತ್ರಿಯ ಓಲೈಕೆಯ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಿ, ತಮ್ಮ ಸ್ಥಾನವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದರು. ಇದರಿಂದ ರಾಜನ ಆಡಳಿತವೇ ತಪು್ಪದಾರಿಯಲ್ಲಿ ಕ್ರಮಿಸಿತು. ಕೆಲವೇ ದಿನಗಳಲ್ಲಿ ರಾಜ್ಯ ಅಧಃಪತನ ಹೊಂದಿತು.

    ಗೌರವಸ್ಥಾನವನ್ನು ಅಲಂಕರಿಸಿದ ವ್ಯಕ್ತಿಗಳ ಸಣ್ಣ ನಡವಳಿಕೆಗಳು ಕೂಡ ಎಂತಹ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ನಮ್ಮ ಜೀವನದಲ್ಲಿಯೂ ಕೆಲವು ಬಾರಿ ಮತ್ತೊಬ್ಬರ ಮಾತುಗಳ ಪ್ರಭಾವಕ್ಕೆ ಒಳಗಾಗಿ, ಪೂರ್ವಗ್ರಹಪೀಡಿತರಾಗಿ ಯಾವುದೋ ಕಾರಣಗಳನ್ನು ಮಾತ್ರ ಅನುಲಕ್ಷಿಸಿಕೊಂಡು, ಇದು ಹೀಗೆಯೇ ಇರಬಹುದು ಎಂದು ಅಂದುಕೊಂಡು ಬಿಡುತ್ತೇವೆ. ಯಾವುದೇ ಪ್ರಚೋದನೆಗೆ ಒಳಪಟ್ಟಂತೆ ಮನಸ್ಸು ಮತ್ತು ಬುದ್ಧಿಯನ್ನು ಹರಿಸಿ ನಮಗರಿವಿಲ್ಲದ ಹಾಗೆ ಸಂದೇಹದ ಪೊರೆಯನ್ನು ಸುತ್ತಿಕೊಂಡು ಅಗ್ರಾಹ್ಯವಾದ ಸ್ಥಿತಿಯನ್ನು ನಿರ್ವಿುಸಿಕೊಂಡು ಅರಿವಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ. ಅರೆಕ್ಷಣ, ಮಂಥರೆ ಎಂಬ ವಿಷಬೀಜದ ವಿಸ್ಮೃತಿಯನ್ನು ನಂಬಿ, ತಾನೇ ಬೆಳೆಸಿದ ರಾಮನ ಬಗ್ಗೆ ಪ್ರಜ್ಞಾರಹಿತವಾಗಿ ಕೈಕೆಯೆ ಯೋಚಿಸಿದ್ದು ಅವಳ ಬದುಕಿಗೆ ಮಾರಕವಾಯಿತು. ಸುಭಾಷಿತವೊಂದು ಸ್ವಯಂಪ್ರಜ್ಞೆ ಬಗ್ಗೆ ಬಹಳ ಚೆನ್ನಾಗಿ ವಿವರಣೆ ನೀಡುತ್ತದೆ-

    ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ |

    ಲೋಚನಾಭ್ಯಾಂ ವಿಹೀನಸ್ಯ ದರ್ಪಣಃ ಕಿಂ ಕರಿಷ್ಯತಿ

    ‘ಅರಿವಿನ ಪ್ರಜ್ಞೆ ಎನ್ನುವುದು ಇಲ್ಲವಾದರೆ ಅಂತಹವರಿಗೆ ಶಾಸ್ತ್ರಗಳು ಏನನ್ನು ಮಾಡುತ್ತವೆ. ಎರಡೂ ಕಣ್ಣುಗಳಿಲ್ಲದವನಿಗೆ ಕನ್ನಡಿಯನ್ನು ಹಿಡಿದರೆ ಕನ್ನಡಿ ಏನು ಮಾಡಬಲ್ಲದು.’ ಹಾಗಾಗಿಯೇ ನಮ್ಮ ಮನಸ್ಸನ್ನು ಅಂಧಕಾರ ಮಾಡಿಕೊಳ್ಳದೇ, ವಿಚಾರ, ವಿಷಯಗಳನ್ನು ಒಳಗಣ್ಣಿನಿಂದ ನೋಡುವ ಅಗತ್ಯವಿದೆ.

    (ಲೇಖಕರು ಸಾಫ್ಟ್​ವೇರ್ ಉದ್ಯೋಗಿ, ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts