More

    ಮನೋಲ್ಲಾಸ | ವೇದದಿಂದ ಜೀವನದರ್ಶನ

    | ಮೈಥಿಲೀ ರಾಘವನ್
    ಮನೋಲ್ಲಾಸ | ವೇದದಿಂದ ಜೀವನದರ್ಶನಪಾಂಡವರು ಜೂಜಾಟದಲ್ಲಿ ಸೋತು ವನವಾಸ ಮಾಡುತ್ತಿದ್ದಾಗ, ದುರ್ಯೂೕಧನನು ಪಾಂಡವರ ದುಃಸ್ಥಿತಿಯನ್ನು ಕಣ್ಣಾರೆ ಕಂಡು ಆನಂದಿಸುವ ದುರುದ್ದೇಶದಿಂದ ಅಲ್ಲಿಗೆ ಬಂದ. ದುರಹಂಕಾರದಿಂದ ವರ್ತಿಸಿ ಅಲ್ಲಿದ್ದ ಗಂಧರ್ವರೊಡನೆ ಯುದ್ಧ ಮಾಡಿ ಪರಾಜಯಗೊಂಡು ಪರಿವಾರಸಮೇತನಾಗಿ ಬಂಧಿಸಲ್ಪಟ್ಟ. ಕೌರವಸೇನೆಯಲ್ಲಿದ್ದ ಕೆಲವರು ಹೇಗೋ ತಪ್ಪಿಸಿಕೊಂಡು ಓಡಿಬಂದು ದುರ್ಯೂೕಧನನನ್ನು ಕಾಪಾಡೆಂದು ಯುಧಿಷ್ಠಿರನಲ್ಲಿ ಮೊರೆಯಿಟ್ಟರು. ಯುಧಿಷ್ಠಿರನ ಆಜ್ಞೆಯಂತೆ ಅರ್ಜುನಾದಿಗಳು ಗಂಧರ್ವರೊಂದಿಗೆ ಯುದ್ಧಮಾಡ ತೊಡಗಿದರು. ಕೊನೆಗೆ ಗಂಧರ್ವಮುಖಂಡನಾದ ಚಿತ್ರಸೇನನು ಗೆಳೆಯನಾದ ಅರ್ಜುನನೊಂದಿಗೆ ಸಮಾಧಾನಗೊಂಡು ಧರ್ವಿುಷ್ಠನಾದ ಯುಧಿಷ್ಠಿರನ ಆಶಯದಂತೆ ಕೌರವರೆಲ್ಲರನ್ನೂ ಬಿಡುಗಡೆ ಮಾಡಿ ಹಸ್ತಿನಾವತಿಗೆ ಕಳಿಸಿದ.

    ಯುದ್ಧದಲ್ಲಿ ಪಲಾಯನ ಮಾಡಿ ಓಡಿಹೋಗಿದ್ದ ಕರ್ಣನು ಹಿಂದಿರುಗುತ್ತಿದ್ದ ದುರ್ಯೂೕಧನನನ್ನು ಪ್ರಶಂಸೆ ಮಾಡಿದ- ‘ಎಂಥ ಪರಾಕ್ರಮಿ ನೀನು! ಗಂಧರ್ವರನ್ನೇ ಸೋಲಿಸಿಬಂದಿದ್ದೀಯೆ!’ ಇದನ್ನು ಕೇಳಿ ಅವಮಾನದಿಂದ ಕುಗ್ಗಿದ ದುರ್ಯೂೕಧನ ನಡೆದ ವೃತ್ತಾಂತವನ್ನು ತಿಳಿಸಿ, ‘ಅವಮಾನಿತನಾಗಿ ಬದುಕುವುದಕ್ಕಿಂತಲೂ ಪ್ರಾಯೋಪವೇಶಮಾಡಿ ಪ್ರಾಣತ್ಯಾಗ ಮಾಡುತ್ತೇನೆ’ ಎಂದು ಹಠಹಿಡಿದು ಅನ್ನ-ಆಹಾರಗಳನ್ನು ತೊರೆದ. ಆಗ ಪಾತಾಳದಿಂದ ದೈತ್ಯ-ದಾನವರು ದುರ್ಯೂೕಧನನನ್ನು ತಮ್ಮಲ್ಲಿಗೆ ಕರೆಸಿಕೊಂಡು, ‘ದುರ್ಯೂೕಧನ, ನೀನು ನಮ್ಮ ಅಂಶದಿಂದ ದೇವತೆಗಳನ್ನು ಪರಾಜಯಗೊಳಿಸಲು ಹುಟ್ಟಿ ಬಂದಿದ್ದೀಯೆ. ಬರಲಿರುವ ಯುದ್ಧದಲ್ಲಿ ಕರ್ಣ ಮುಂತಾದವರು ದೈತ್ಯ-ದಾನವರ ಅಂಶದಿಂದ ಕೂಡಿ ನಿನಗೆ ಸಹಾಯ ಮಾಡುವರು’ ಎಂಬುದಾಗಿ ಹುರಿದುಂಬಿಸಿ ಆಲಿಂಗನ ಮಾಡಿಕೊಂಡು ಕಳುಹಿಸಿಕೊಟ್ಟರು.

    ಭಗವಂತನ ಆಲಿಂಗನೆಯಿಂದ ಭಕ್ತರಲ್ಲಿ ಭಗವದ್ಭಾವವು ತುಂಬುವಂತೆಯೇ ದೈತ್ಯ ಆಲಿಂಗನದಿಂದ ಆತನ ಆಸುರೀಭಾವವು ವೃದ್ಧಿಹೊಂದಿ ಉತ್ಸಾಹದಿಂದ ಮರಳಿಬಂದ! ಪಾಂಡವರು ದೈವಾಂಶಸಂಭೂತರೆಂಬುದು ಪ್ರಸಿದ್ಧವೇ ಆಗಿದೆ. ಆದ್ದರಿಂದ ಮಹಾಭಾರತದ ಮುಖ್ಯಕಥಾಭಾಗವೆಂಬುದು ದೇವಾಸುರರ (ಧರ್ವಧರ್ಮಗಳ) ಮಧ್ಯೆ ನಡೆದ ಘರ್ಷಣೆ-ಯುದ್ಧವೇ ಆಗಿದೆ. ವೇದ ಹೇಳುವುದೂ ದೇವಾಸುರರ ಸಂಘರ್ಷವನ್ನೇ. ಅಂತೆಯೇ ಮಹಾಭಾರತವು ಪುರುಷಾರ್ಥಮಯವಾದ ಜೀವನದ ಅವಶ್ಯಕತೆಯನ್ನೂ, ಅಂತಹ ಜೀವನದಿಂದ ಪಡೆಯಬಹುದಾದ ಮಹಾಫಲವನ್ನೂ ಸ್ಪಷ್ಟಪಡಿಸುತ್ತದೆ. ಒಟ್ಟಾರೆ, ವೇದಗಳ ಸಾರವನ್ನೇ ಈ ಮಹಾಕಾವ್ಯ ತಿಳಿಸುವುದರಿಂದ ಪಂಚಮವೇದವೆಂದು ವಿಖ್ಯಾತವಾಗಿದೆ. ಸೃಷ್ಟಿಮೂಲವಾದ ಪರಂಜ್ಯೋತಿಯೇ ಪರಮಾರ್ಥದಲ್ಲಿ ‘ವೇದ’ ಎನಿಸಿಕೊಳ್ಳುತ್ತದೆ. ‘ವೇದ’ವೆಂಬುದು(‘ವಿದಜ್ಞಾನೇ’)- ಜ್ಞಾನ(ಪರಂಜ್ಯೋತಿ)ವೆಂಬ ಅರ್ಥವನ್ನೇ ಕೊಡುತ್ತದೆ. ‘ಪರಾತ್ಮಾ ವಿಂದತೇ ಏನ ಸ ವೇದೋ ವೇದ ಉಚ್ಯತೇ’(ಪರಮಾತ್ಮ ಯಾವುದರಿಂದ ತಿಳಿಯಲ್ಪಡುತ್ತಾನೆಯೋ ಅದೇ ವೇದ) ಎಂಬ ಆರ್ಷವಾಣಿಯೂ ಇದನ್ನೇ ಪುಷ್ಟೀಕರಿಸುತ್ತದೆ. ಜ್ಯೋತಿಸ್ವರೂಪವಾದ ‘ವೇದದ’ ಅನುಭವಸ್ಥಾನದಿಂದ ಹೊರಟು, ಆ ಪರಂಜ್ಯೋತಿಯ ಕಡೆಗೇ ದಿಗ್ದರ್ಶನ ಮಾಡುವ ಮಂತ್ರಸಾಹಿತ್ಯರಾಶಿ ರೂಪದ ವೇದವು ಮುಂದಿನ ಹಂತದಲ್ಲಿ ವೇದವೆಂಬುದಾಗಿ ಕರೆಯಲ್ಪಡುತ್ತದೆ. ಅಂತೆಯೇ ವೇದಮಂತ್ರಗಳ ರೂಪವಿಲ್ಲದಿದ್ದರೂ ಅದರ ಸಾರವನ್ನೇ ಹೇಳುತ್ತ ಪರಂಜ್ಯೋತಿಯ ಕಡೆಗೆ ಸಾಗುವ ಕ್ರಮವನ್ನು ನಾನಾ ರೂಪಗಳಲ್ಲಿ ಬಿತ್ತರಿಸುವ ಕಾವ್ಯಗಳನ್ನೂ, ಸಾಹಿತ್ಯಗಳನ್ನೂ ವೇದವೆಂಬುದಾಗಿಯೇ ಕರೆದಿದ್ದಾರೆ ಜ್ಞಾನಿಗಳು.

    (ಲೇಖಕರು ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts