More

    ಮಂಕಡಿಂಗ್ ಸಕ್ರಮ, ಹೊಸ ನಿಯಮ; ಇನ್ಮುಂದೆ ರನೌಟ್ ಲೆಕ್ಕಾ

    ಲಂಡನ್: ಮುಂಬರುವ ದಿನಗಳಲ್ಲಿ ರವಿಚಂದ್ರನ್ ಅಶ್ವಿನ್ ಯಾವುದೇ ಬ್ಯಾಟ್ಸ್‌ಮನ್‌ಗಳನ್ನು ಮಂಕಡಿಂಗ್ ಮಾಡಿದರೆ ವಿವಾದವಾಗುವುದಿಲ್ಲ. ಕ್ರೀಡಾಸ್ಪೂರ್ತಿಗೆ ವಿರುದ್ಧವೆನಿಸುವುದೂ ಇಲ್ಲ. ಕಾರಣ, ಕ್ರಿಕೆಟ್‌ನ ನೀತಿನಿರೂಪಣೆಗಳ ಸಂರಕ್ಷಕನೆನಿಸಿರುವ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ ನಾನ್‌ಸ್ಟ್ರೈಕರ್ ತುದಿಯಲ್ಲಿ ಬೌಲರ್‌ಗಳು ಮಾಡುವ ರನೌಟ್‌ಗಳನ್ನು ‘ಅನುಚಿತ ಆಟದ’ ಪಟ್ಟಿಯಿಂದ ಮುಕ್ತಗೊಳಿಸಿದೆ. ಅರ್ಥಾತ್ ಮಂಕಡಿಂಗ್ ಅನ್ನೂ ರನೌಟ್ ಎಂದು ಸಕ್ರಮಗೊಳಿಸಲು ನಿರ್ಧರಿಸಿದೆ. ಹೊಸ ನಿಯಮ ಬರುವ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ.

    ಇಷ್ಟೇ ಅಲ್ಲದೆ, ಕ್ರಿಕೆಟ್‌ನ ಇನ್ನೂ ಕೆಲವು ಕಠಿಣ ನಿಯಮಗಳಿಗೆ ಎಂಸಿಸಿ ಅನುಮೋದನೆ ನೀಡಿದ್ದು, ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಲಾಗಿದೆ. ಬ್ಯಾಟ್ಸ್‌ಮನ್ ಕ್ಯಾಚ್ ಔಟ್ ಆಗುವ ಮುನ್ನ ರನ್‌ಗಾಗಿ ಅರ್ಧ ಪಿಚ್ ದಾಟಿ ಓಡಿದ್ದರೂ, ಹೊಸ ಬ್ಯಾಟ್ಸ್‌ಮನ್ ಸ್ಟ್ರೈಕ್ ಎದುರಿಸಬಹುದು. ಇಂಥ ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಇವುಗಳನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ದಿ ಹಂಡ್ರೆಡ್ ಲೀಗ್‌ನಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಿದೆ.

    * ಐಪಿಎಲ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಮಂಕಡಿಂಗ್
    ಬೌಲರ್ ಬೌಲಿಂಗ್ ಮಾಡುವುದಕ್ಕೂ ಮುಂಚೆ ನಾನ್-ಸ್ಟ್ರೈಕರ್ ಬ್ಯಾಟರ್ ಕ್ರೀಸ್ ಬಿಟ್ಟಿರುವುದನ್ನು ಗಮನಿಸಿ ರನೌಟ್ ಮಾಡಿದರೆ ಇದಕ್ಕೆ ಮಂಕಡಿಂಗ್ ಎಂದು ಕರೆಯಲಾಗುತ್ತಿತ್ತು. 2019ರ ಐಪಿಎಲ್ ಪಂದ್ಯದಲ್ಲಿ ಅಂದಿನ ಪಂಜಾಬ್ ತಂಡದ ಆಟಗಾರ ಆರ್.ಅಶ್ವಿನ್, ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿದ್ದರು. ಇದು ಕ್ರೀಡಾಸ್ಫೂರ್ತಿ ವಿವಾದಕ್ಕೆ ಕಾರಣವಾಗಿತ್ತು.

    * ಮಂಕಡಿಂಗ್ ಹೆಸರು ಬಂದಿದ್ದು ಹೀಗೆ..!
    1948ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಈ ಮಂಕಡಿಂಗ್ ಹುಟ್ಟಿಕೊಂಡಿತು. ಭಾರತದ ವಿನೂ ಮಂಕಡ್ ಬೌಲಿಂಗ್ ಮಾಡುತ್ತಿದ್ದ ವೇಳೆ ನಾನ್-ಸ್ಟ್ರೈಕರ್‌ನಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬಿಲ್ ಬ್ರೌನ್ ಅವರನ್ನು ಎಸೆತ ಎಸೆಯುವ ಮೊದಲೇ ರನೌಟ್ ಮಾಡಿದ್ದರು. ಇದನ್ನು ಆಸ್ಟ್ರೇಲಿಯಾ ಮಾಧ್ಯಮಗಳು ಮಂಕಡಿಂಗ್ ಎಂದು ಭಾರತೀಯ ಕ್ರಿಕೆಟಿಗನ ನಡೆಯನ್ನು ಟೀಕಿಸಿದ್ದವು.

    * ಎಂಸಿಸಿ ಶಿಫಾರಸು ಮಾಡಿರುವ ಪರಿಷ್ಕೃತ ನಿಯಮಗಳು
    – ನಿಯಮ 27.4 ಮತ್ತು 28.6: ಕ್ರೀಡಾಸ್ಫೂರ್ತಿ ವಿರುದ್ಧಕ್ಕೆ ತಡೆ
    ಫೀಲ್ಡಿಂಗ್ ತಂಡದ ಆಟಗಾರರು ಎಸೆತ ಎಸೆಯುವಾಗ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದರೆ ಅದನ್ನು ಡೆಡ್ ಬಾಲ್ ಎಂದು ಕರೆಯಲಾಗುತ್ತಿತ್ತು. ಆದರೆ ಈ ಎಸೆತದಲ್ಲಿ ಬ್ಯಾಟರ್ ರನ್ ಗಳಿಸಿದರೂ ಕೂಡ ಅದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಇದನ್ನು ತಪ್ಪಿಸುವ ಸಲುವಾಗಿ ಫೀಲ್ಡಿಂಗ್ ತಂಡದ ಆಟಗಾರರು ಎಸೆತ ಎಸೆಯುವಾಗ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದರೆ ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರೂಪದಲ್ಲಿ ನೀಡಲಾಗುತ್ತದೆ.

    – ನಿಯಮ 38.3 : ನಾನ್ ಸ್ಟ್ರೈಕರ್ ರನೌಟ್ (ಮಂಕಡಿಂಗ್)
    ನಾನ್ ಸ್ಟ್ರೈಕರ್‌ನಲ್ಲಿದ್ದ ಆಟಗಾರ ಎಸೆತ ಎಸೆಯುವ ಮುನ್ನ ಕ್ರೀಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಇದನ್ನು ರನೌಟ್ ಎಂದೇ ಪರಿಗಣಿಸಲಾಗುತ್ತದೆ.

    – ನಿಯಮ 41.3; ಸಲೈವಾ ನಿಷೇಧ
    ಕೋವಿಡ್ ನಂತರ ಚೆಂಡಿಗೆ ಸಲೈವಾ ಹಚ್ಚುವುದನ್ನು ಬ್ಯಾನ್ ಮಾಡಲಾಗಿತ್ತು. ಇದೀಗ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎಂಜಲು ಹಚ್ಚುವುದನ್ನು ಚೆಂಡು ವಿರೂಪಗೊಳಿಸುವ ಯತ್ನ ಎಂದೇ ಪರಿಗಣಿಸಲಾಗುತ್ತದೆ.

    – ನಿಯಮ 18: ಕ್ಯಾಚ್ ಔಟ್ ಆದರೆ, ಹೊಸ ಬ್ಯಾಟರ್‌ಗೆ ಸ್ಟ್ರೈಕ್
    ಬ್ಯಾಟರ್ ಕ್ಯಾಚ್ ನೀಡಿ ಔಟ್ ಆದರೆ, ನಂತರ ಬರುವ ಬ್ಯಾಟರ್ ಸ್ಟ್ರೈಕರ್ ಎಂಡರ್ ಪಡೆಯುತ್ತಾನೆ. (ಓವರ್‌ನ ಕೊನೆಯ ಎಸೆತದಲ್ಲಿ ಔಟಾಗಿದ್ದರೆ ಮಾತ್ರ ನಾನ್‌ಸ್ಟ್ರೈಕರ್ ತುದಿಗೆ ತೆರಳಬೇಕು). ಈ ಮೊದಲು ಬ್ಯಾಟರ್ ಕ್ಯಾಚ್ ಔಟ್ ಆಗುವ ಮುನ್ನ ರನ್‌ಗಾಗಿ ಅರ್ಧ ಪಿಚ್ ದಾಟಿದ್ದರೆ, ಸ್ಟ್ರೈಕ್ ಬದಲಾಗುತ್ತಿತ್ತು.

    – ನಿಯಮ 20.4.2.12; ಡೆಡ್ ಬಾಲ್
    ಪಂದ್ಯಗಳು ನಡೆಯುವ ವೇಳೆ ಮೂರನೇ ವ್ಯಕ್ತಿ ಅಥವಾ ಪ್ರಾಣಿ ಪಕ್ಷಿಗಳು, ಇತರ ವಸ್ತುಗಳಿಂದ ಅಡಚಣೆಯಾದರೆ ಅದನ್ನು ಡೆಡ್ ಬಾಲ್ ಎಂದು ಕರೆಯಲಾಗುತ್ತದೆ. ಬೌಲಿಂಗ್ ಮಾಡುವ ವೇಳೆ ಏಕಾಏಕಿ ನಾಯಿ, ಬೆಕ್ಕು ಮೈದಾನಕ್ಕೆ ನುಗ್ಗುವುದು ಸಾಮಾನ್ಯ. ಇಂಥ ವೇಳೆ ಮೈದಾನದ ಅಂಪೈರ್ಸ್‌ ಡೆಡ್ ಬಾಲ್ ೋಷಿಸಬಹುದು.

    – ನಿಯಮ 1: ಬದಲಿ ಆಟಗಾರರು
    ಆಟದ ವೇಳೆ ಆಟಗಾರ ವಿಶ್ರಾಂತಿ ಪಡೆದಾಗ ಬದಲಿಗೆ ಕಣಕ್ಕಿಳಿಯುವ ಆಟಗಾರನನ್ನು ‘ಬದಲಿ’ ಎಂದು ಪರಿಗಣಿಸದೆ ಮೂಲ ಆಟಗಾರನ ಹೆಸರಲ್ಲೇ ಪರಿಗಣಿಸಲಾಗುವುದು. ಬದಲಿ ಆಟಗಾರ ಯಾವುದೇ ತಪ್ಪು ಮಾಡಿದರೆ ಅಥವಾ ಬ್ಯಾಟರ್‌ಗಳನ್ನು ಔಟ್ ಮಾಡಿದರೆ, ಅದರ ಶ್ರೇಯ ಮೂಲ ಆಟಗಾರನ ಹೆಸರಲ್ಲೇ ದಾಖಲಾಗಲಿದೆ.

    – ನಿಯಮ 21.4: ಬೌಲರ್ ಡೆಲಿವರಿ ಕ್ರೀಸಿಗೆ ಬರುವ ಮುನ್ನವೇ ಬ್ಯಾಟರ್‌ನನ್ನು ರನೌಟ್ ಮಾಡಲು ಚೆಂಡನ್ನು ಎಸೆದರೆ, ಅದು ಡೆಡ್ ಬಾಲ್ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts