More

    ವಿನಾಶದತ್ತ ವಿಶಾಲ ವನ, ಶೇ.20ರಷ್ಟು ಮರ ಸಾವು

    ಕುಂದಾಪುರ: ಹೆಮ್ಮಾಡಿ -ತಲ್ಲೂರು ನಡುವಿನ ರಾಷ್ಟ್ರೀಯ ಹೆದ್ದಾರಿ-66 ಪಕ್ಕದಲ್ಲಿರುವ ಕಾಂಡ್ಲಾ ವನ ಮತ್ತೆ ಸಾವಿನತ್ತ ಮುಖ ಮಾಡಿದೆ. ಕಾಂಡ್ಲಾ ವನಕ್ಕೆ ಸಣ್ಣ ನೀರಾವರಿ ಇಲಾಖೆ ನೀರು ಬಿಡುವ ನಾಟಕ ಮಾಡಿ, ಬಿಸಿಲ ಝಳಕ್ಕೆ ನೀರೊಣಗಿ ಮರಗಳು ಒಣಗುತ್ತಿವೆ.

    ಐದು ದಶಕದ ಹಿಂದೆ ಅರಣ್ಯ ಇಲಾಖೆ ಪರಿಶ್ರಮಕ್ಕೆ ರಾಜಾಡಿ ವಿಶಾಲ ಪ್ರದೇಶದಲ್ಲಿ ಕಾಂಡ್ಲಾ ವನ ಬೆಳೆದಿತ್ತು. ಇದು ಹಕ್ಕಿಗಳಿಗೆ ಆಶ್ರಯ ನೀಡಿ ಸಲಹಿದರೆ, ಸೂಕ್ಷ್ಮಜೀವಿಗಳು ಕಾಂಡ್ಲಾ ಬೇರಿನಡಿ ನಿರ್ಭಯವಾಗಿದ್ದವು. ಮರಗಳ ಸಾವು ಈ ಜೀವಿಗಳ ಅಂತ್ಯಕ್ಕೂ ಮುನ್ನುಡಿ ಬರೆಯುತ್ತಿದೆ. ನೀರಿಲ್ಲದೆ ಒಣಗುತ್ತಿರುವ ಕಾಂಡ್ಲಾ ವನದ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿದ ನಂತರ ಸಣ್ಣ ನೀರಾವರಿ ಇಲಾಖೆ ನೀರು ಬಿಡುವ ನಾಟಕ ಮಾಡಿ ಮತ್ತೆ ನಿದ್ದೆಗೆ ಜಾರಿದೆ.
    ಉಪು ್ಪನೀರನ್ನೇ ನೆಚ್ಚಿಕೊಂಡು ಬೆಳೆಯುವ ಕಾಂಡ್ಲಾ ಗಿಡಗಳು ಹಿನ್ನೀರು ಯಾವ ಮಟ್ಟದಲ್ಲಿ ನಿಲ್ಲುತ್ತದೋ ಆ ಮಟ್ಟಕ್ಕೆ ಅನುಗುಣವಾಗಿ ಬೇರು ಎದ್ದು ನಿಲ್ಲುತ್ತದೆ. ಅದರ ಮೇಲೆ ರೆಂಬೆ ಕೊಂಬೆಯೊಡೆದು ಎಲೆ ಅರಳಿಸುತ್ತದೆ. ಇವುಗಳ ಬೇರಲ್ಲಿ ಅತ್ಯಂತ ಸೂಕ್ಷ್ಮಾತಿಸೂಕ್ಮ ರಂಧ್ರಗಳಿದ್ದು, ಅದರಿಂದ ಕಾಂಡ್ಲಾಕ್ಕೆ ಬೇಕಾದ ಪೂರಕ ಅಂಶ ರವಾನೆಯಾಗುತ್ತದೆ. ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಯಬೇಕಿದ್ದರೆ ಬೇರಿನ ಮಟ್ಟ ನೀರು ಬೇಕೇಬೇಕು. ರಾಜಾಡಿ ಕಾಂಡ್ಲಾ ವನಕ್ಕೆ ನೀರು ಬಿಟ್ಟರೂ ನೀರಿನ ಮಟ್ಟ ಬೇರಿನ ಸಮಾನಾಂತರಕ್ಕೆ ಏರಲೇ ಇಲ್ಲ. ಇದರಿಂದ ಶೇ.20ರಷ್ಟು ಸಸ್ಯಗಳು ಸತ್ತು ಹೋಗಿವೆ. ಬೇರಿನ ಮಟ್ಟಕ್ಕೆ ನೀರು ನಿಲ್ಲಿಸದಿದ್ದರೆ ಕಾಂಡ್ಲಾ ವನ ಸರ್ವನಾಶವಾಗಲಿದೆ.

    ಪರಿಸರ ಸಂರಕ್ಷಣೆಯಲ್ಲಿ ಕಾಂಡ್ಲಾ ವನಗಳ ಮಹತ್ವದ ಬಗ್ಗೆ ಅರಣ್ಯ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಯದಿರುವುದು ದೊಡ್ಡ ದುರಂತ. ನದಿ ಪಾತ್ರ, ಕಡಲ್ಕೊರೆತ ಮುಂತಾದ ಪ್ರಾಕೃತಿಕ ವಿಕೋಪಗಳನ್ನು ಕಾಂಡ್ಲಾ ವನಗಳು ತಡೆಯುತ್ತವೆ. ಸರ್ಕಾರದ ಒಂದು ಭಾಗವಾದ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದ ರಾಜಾಡಿ ಕಾಂಡ್ಲಾ ಸಾಯುತ್ತಿರುವುದು ಕಳವಳಕಾರಿ.
    ರಾಘವೇಂದ್ರ ಭಟ್, ಕೃಷಿಕ, ಭಟ್ರತೋಟ ಪಡುಕೋಣೆ

    ಸಿಆರ್‌ಝಡ್, ಅರಣ್ಯ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಂದ ಕಾಂಡ್ಲಾ ನೀರಿನ ಸಮಸ್ಯೆಗೆ ಏನು ಕಾರಣ ಎಂಬ ವರದಿ ತರಿಸಿ ಪರಿಶೀಲಿಸಿ, ಕಾಂಡ್ಲಾ ವನಕ್ಕೆ ನೀರು ಪೂರೈಕೆ ಬಗ್ಗೆ ಕ್ರಮ ತೆಗೆದುಕೊಳ್ಳುವುದು. ನಿರಂತರ ಹಿನ್ನೀರು ಬರುವಂತೆ ಮಾಡಲು ಏನು ಮಾಡಲು ಸಾಧ್ಯವೋ ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ.
    ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ರಾಜಾಡಿ ಕಾಂಡ್ಲಾ ವನಕ್ಕೆ ನೀರು ಭರತ ಸಮಯದಲ್ಲಿ ಬರುತ್ತಿದ್ದು, ಇಳಿತಕ್ಕೆ ಇಳಿಯುತ್ತದೆ. ಭರತ ಇಳಿತ ಅವಲಂಬಿಸಿ ನೀರು ಕಾಂಡ್ಲಾ ವನಕ್ಕೆ ಪೂರೈಕೆ ಆಗುತ್ತದೆ. ಸಣ್ಣ ನೀರಾವರಿ ಇಲಾಖೆ ಮೂಲಕ ನೀರು ಹಾಯಿಸಲು ಸೂಚಿಸಲಾಗುತ್ತದೆ.
    ಪ್ರಭಾಕರ ಕುಲಾಲ್, ವಲಯ ಅರಣ್ಯಾಧಿಕಾರಿ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts