More

    ಮಾವು ಬೆಳೆಗಾರರಿಗೆ ಬೆಲೆ ಕುಸಿತದ ಹೊಡೆತ ; ನಷ್ಟದ ಸುಳಿಯಲ್ಲಿ ರೈತರು 

    ರಾಮನಗರ : ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಮಾವು ಬೆಳೆಗಾರರು ವಾತಾವರಣದ ವ್ಯತ್ಯಯ ಹಾಗೂ ಕರೊನಾದಿಂದಾಗಿ ಬೆಲೆ ಕುಸಿತವಾಗಿ ನಷ್ಟ ಅನುಭವಿಸುವಂತಾಗಿದೆ.

    ರಾಜ್ಯದ ಮಾರುಕಟ್ಟೆಗೆ ಮೊದಲಿಗೆ ಪ್ರವೇಶ ಪಡೆಯುವ ರಾಮನಗರ ಮಾವು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಹೆಚ್ಚಿದ್ದ ಬಿಸಿಲ ತಾಪದಿಂದಾಗಿ ಗಿಡದಲ್ಲಿ ಕಾಯಿಗಳೂ ಉದುರಿ ಇಳುವರಿ ಕಡಿಮೆ ಆಗಿತ್ತು. ಇಳುವರಿ ಕಡಿಮೆ ಆದರೆ, ಬೆಲೆಯಲ್ಲಿ ಹೆಚ್ಚಳ ಕಾಣುವ ರೈತರ ಕನಸಿಗೆ ಕರೊನಾ ಕೊಳ್ಳಿ ಇಟ್ಟಿದ್ದು, ಲಾಕ್‌ಡೌನ್ ಆರಂಭಗೊಂಡ ನಂತರ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ.

    ಮಾರ್ಚ್ ಅಂತ್ಯಕ್ಕೆ ರಾಮನಗರ ಮಾವು ಮಾರುಕಟ್ಟೆಗೆ ಪ್ರವೇಶಿಸುತ್ತದೆ. ನೀರಾವರಿ ಪ್ರದೇಶದಲ್ಲಿ ಬೆಳೆಯುವ ಸೇಂದೂರ ತಳಿ ಹಾಗೂ ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆಯುವ ಬಾದಾಮಿ ಕಾಯಿಗಳು ಲಗ್ಗೆ ಇಟ್ಟು, ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 160-180 ರೂ. ದರ ದಾಖಲಿಸಿತ್ತು. ಸೆಂದೂರ ತಳಿ ಸಹ ಪ್ರತಿ ಕೆ.ಜಿ.ಗೆ 70-80 ರೂ. ವರೆಗೂ ಮಾರಾಟವಾಗುತ್ತಿತ್ತು.

    ಚನ್ನಪಟ್ಟಣ ಮತ್ತು ರಾಮನಗರ ಎರಡೂ ನಗರಗಳ ಮಾರುಕಟ್ಟೆ ಮಂಡಿಗಳಲ್ಲಿ ಮಾವು ಖರೀದಿ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಈ ಬಾರಿ ಉತ್ಪಾದನೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಮಾವಿಗೆ ಹೆಚ್ಚಿನ ಬೆಲೆ ದೊರೆಯಬಹುದೆಂಬ ನಿರೀಕ್ಷೆ ರೈತರಲ್ಲಿತ್ತು. ಆದರೆ, ಈಗ ಕರೊನಾ ಲಾಕ್‌ಡೌನ್‌ನಿಂದಾಗಿ ಮಾವಿನ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಪ್ರತಿ ಕೆ.ಜಿ. ಬಾದಾಮಿ ಬೆಲೆ 24-30 ರೂ.ಗೆ ಕುಸಿದಿದ್ದರೆ, ಸೇಂದೂರ 8-10 ರೂ., ರಸಪುರಿ 12-15 ರೂ.ಗೆ ಖರೀದಿ ಮಾಡುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ.

    ಹೊರ ರಾಜ್ಯಗಳಿಗೆ ಹೋಗುತ್ತಿಲ್ಲ : ಜಿಲ್ಲೆಯ ಮಾವಿಗೆ ರಾಜ್ಯ ಹೊರತಾಗಿ ಹೊರ ರಾಜ್ಯಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಇದರ ಪ್ರಮಾಣ ಕಡಿಮೆ ಆಗಿದೆ. ಆಂಧ್ರ ಮತ್ತು ತಮಿಳುನಾಡಿನ ಪಲ್ಪ್ ಕಾರ್ಖಾನೆಗಳಿಗೆ ಹಣ್ಣು ಪೂರೈಕೆಯಾಗುತ್ತಿತ್ತು. ಹೆಚ್ಚಿನ ಪ್ರಮಾಣದ ಮಾವು ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು. ಆದರೆ ಈಗ ಮಹಾರಾಷ್ಟ್ರಕ್ಕೆ ಹೋಗುವ ಮಾವಿನ ಪ್ರಮಾಣದಲ್ಲಿ ಶೇ.90 ಕಡಿಮೆ ಆಗಿದ್ದರೆ, ಉಳಿದ ರಾಜ್ಯಗಳಿಗೆ ಹೋಗುವ ಮಾವಿನ ಪ್ರಮಾಣದಲ್ಲೂ ಶೇ.50 ಇಳಿಕೆಯಾಗಿದೆ. ತಮಿಳುನಾಡಿನಲ್ಲಿ ಮಾವು ಉತ್ಪಾದನೆ ಆರಂಭಗೊಳ್ಳುತ್ತಿದ್ದಂತೆ, ರಾಜ್ಯದ ಮಾವಿಗೆ ಬೇಡಿಕೆ ಕುಸಿಯಲಿದೆ.

    ನಷ್ಟದ ಸುಳಿಯಲ್ಲಿ : ರಾಮನಗರ ಜಿಲ್ಲೆ ತೋಟಗಾರಿಕೆ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾರ್ಷಿಕ ಸುಮಾರು 2.5 ಲಕ್ಷ ಟನ್‌ಗಳಷ್ಟು ಇಳುವರಿ ಇದೆ. ವಾರ್ಷಿಕ ಸುಮಾರು 400 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಆದರೆ ಈ ಬಾರಿ ವಾತಾವರಣ ಕೈಕೊಟ್ಟ ಪರಿಣಾಮ ಶೇ.50 ಇಳುವರಿ ಕಡಿಮೆ ಆಗಿ ನಷ್ಟಕ್ಕೆ ಒಳಗಾಗಿದ್ದ ರೈತರಿಗೆ ಕರೊನಾಘಾತದಿಂದ ಇದ್ದ ಮಾವಿಗೂ ಬೆಲೆ ಇಲ್ಲದಂತೆ ಆಗಿದೆ. ಕಳೆದ ಬಾರಿಯೂ ಇದೇ ರೀತಿ ಆಗಿದ್ದರ ಪರಿಣಾಮ ರೈತರು ನಷ್ಟಕ್ಕೆ ಒಳಗಾಗಿದ್ದರು.

    ಬೇಕಿದೆ ಸರ್ಕಾರದ ನೆರವು : ಮಾವು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿರುವ ಈ ಸಂದರ್ಭದಲ್ಲಿ ಸರ್ಕಾರದ ನೆರವು ಅಗತ್ಯವಾಗಿ ಬೇಕಿದೆ. ಒಮ್ಮೆ ಇಳುವರಿ ಹೆಚ್ಚಾಗಿ ನಷ್ಟಕ್ಕೆ ಒಳಗಾಗುವ ರೈತರು ಕಳೆದ ಎರಡು ಬಾರಿಯಿಂದ ಕರೊನಾ ಹೊಡೆತಕ್ಕೆ ನಲುಗಿದ್ದು ಸರ್ಕಾರ ಈ ರೈತರಿಗೆ ನಷ್ಟ ತುಂಬಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.

    ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಮಾರುಕಟ್ಟೆ ವ್ಯವಸ್ಥೆ, ಪ್ರಕೃತಿ ಹೀಗೆ ಎಲ್ಲವೂ ರೈತರಿಗೆ ನಷ್ಟವನ್ನು ಉಂಟು ಮಾಡುತ್ತಿದ್ದು, ಸರ್ಕಾರ ಕೂಡಲೇ ಜಿಲ್ಲೆಯ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕು.
    ಸಿ.ಪುಟ್ಟಸ್ವಾಮಿ, ರೈತ ಮುಖಂಡರು

    ಕಳೆದ ಮಾರ್ಚ್‌ನಲ್ಲಿ ಇದ್ದ ಬೆಲೆ ಈಗ ಇಲ್ಲ. ಮಾರುಕಟ್ಟೆಯಲ್ಲಿ ಬಾದಾಮಿ ತಳಿ ಮಾವಿನ ಬೆಲೆ ಪಾತಾಳಕ್ಕೆ ಕುಸಿದಿದೆ. ಸರ್ಕಾರ ನೆರವಿಗೆ ಬಂದರಷ್ಟೇ ರೈತರಿಗೆ ನಷ್ಟದ ಪ್ರಮಾಣ ಕಡಿಮೆ ಆಗಲಿದೆ.
    ಸಿದ್ದರಾಜು, ಮಾವು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts