More

    ಮಾರುಕಟ್ಟೆಗೆ ಬಂದ ಹಣ್ಣುಗಳ ರಾಜ, ಸ್ಥಳೀಯ ಮಾವುಗಳಷ್ಟೇ ಲಭ್ಯ, ದರ ಅಧಿಕ, ಬೇಡಿಕೆ ಕಡಿಮೆ

    ಮಂಗಳೂರು: ಹಣ್ಣುಗಳ ರಾಜ ಮಾವು ಘಮ ಘಮ ಸುವಾಸನೆ ಬೀರುತ್ತಾ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬೇಡಿಕೆ ಕಡಿಮೆ ಇರುವುದರಿಂದ ಅನ್ಯ ರಾಜ್ಯಗಳಿಂದ ಪೂರೈಕೆಯಾಗುವ ಮಾವು ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸಬೇಕಾಗಿದೆ. ಇದೀಗ ಸ್ಥಳೀಯ ಮಾವುಗಳಷ್ಟೇ ಲಭ್ಯವಿದೆ.

    ಸ್ಥಳೀಯವಾಗಿ ಬೆಳೆಯುವ ಬಾದಾಮಿ, ಕದ್ರಿ ಮಾವು ಸದ್ಯ ಮಾರುಕಟ್ಟೆಯಲ್ಲಿದೆ. ಎರಡು ದಿನಗಳಿಂದ ಆಪೂಸ್, ಮುಂಡಪ್ಪ ಜಾತಿಯ ಮಾವು ಮಾರುಕಟ್ಟೆಗೆ ಬರಲಾರಂಭಿಸಿದೆ. ದರ ಹೆಚ್ಚಾಗಿರುವುದರಿಂದ ಬೇಡಿಕೆ ಇಲ್ಲ ಎಂದು ವ್ಯಾಪಾರಿ ಮೊಹಮ್ಮದ್ ಆಸಿಫ್ ವಿಜಯವಾಣಿಗೆ ತಿಳಿಸಿದ್ದಾರೆ.

    ಪ್ರತಿ ವರ್ಷ ನೀಲಂ, ಮಲ್ಲಿಕಾ, ಚಿತ್ತೂರ್ ಜಾತಿಯ ಮಾವಿನ ಹಣ್ಣುಗಳು ಬೆಂಗಳೂರು, ತಮಿಳುನಾಡುಗಳಿಂದ ಮಂಗಳೂರು ಮಾರುಕಟ್ಟೆಗೆ ಬರುತ್ತದೆ. ಇಲ್ಲಿ ಎಲ್ಲ ಜಾತಿಯ ಮಾವುಗಳಿಗೆ ಬೇಡಿಕೆ ಇದೆ. ಸೀಸನ್ ಆರಂಭಗೊಂಡರೂ ಮಾವಿನ ಹಣ್ಣುಗಳ ಬೆಲೆ ಕೆ.ಜಿಗೆ 140 ರೂ.ಗಿಂತ ಅಧಿಕವಾಗಿದೆ. ಮಾರುಕಟ್ಟೆಯಲ್ಲಿರುವ ಬಾದಾಮ್, ಕದ್ರಿ ಮಾವಿನ ಹಣ್ಣಿಗೆ 140 ರೂ. ಹಾಗೂ ಮುಂಡಪ್ಪ ಮಾವಿಗೆ 160 ರೂ. ದರವಿದೆ.

    ಕರಾವಳಿಯಲ್ಲಿ ಮಾರ್ಚ್‌ನಿಂದ ಮೇ ತಿಂಗಳ ತನಕ ವಿಪರೀತ ಸೆಖೆ. ಇಲ್ಲಿನ ಜನತೆ ಒಂದಷ್ಟು ತಣ್ಣನೆಯ ವಾತಾವರಣಕ್ಕೆ ಹಂಬಲಿಸುವುದು ಸಹಜ. ಈ ಕಾಲದಲ್ಲಿ ಇಲ್ಲಿನ ತಂಪು ಪಾನೀಯದ ಅಂಗಡಿಗಳೆಲ್ಲವೂ ಗ್ರಾಹಕರಿಂದ ತುಂಬಿರುವುದು ಸಾಮಾನ್ಯ. ಗರಿಷ್ಠ ಸಂಖ್ಯೆಯ ಮಾವಿನ ಹಣ್ಣುಗಳು ಜ್ಯೂಸ್ ತಯಾರಿಕೆಗೆ ಬಳಕೆಯಾಗುತ್ತವೆ. ಮಾವಿನ ದರ ಹೆಚ್ಚಿರುವುದರಿಂದ ಸಹಜವಾಗಿ ಜ್ಯೂಸ್ ದರವೂ ಹೆಚ್ಚಿದೆ.

    ಕಳೆದ ವರ್ಷ ಕರೊನಾ ಲಾಕ್‌ಡೌನ್‌ನಿಂದಾಗಿ ಸ್ಥಳೀಯ ಮಾವು ಬಿಟ್ಟು ಹೊರಗಿನ ಮಾವು ಮಾರುಕಟ್ಟೆಗೆ ಬಂದಿರಲಿಲ್ಲ. ಎಲ್ಲಿಯೂ ಮಾವು ಮೇಳಗಳು ಕೂಡಾ ಇಲ್ಲದ ಕಾರಣ ಮಾವು ಬೆಳೆಗಾರರು ತಾವು ಬೆಳೆದ ಫಸಲನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ್ದರು. ಈ ವರ್ಷ ಒಳ್ಳೆಯ ವ್ಯಾಪಾರದ ನಿರೀಕ್ಷೆ ಹೊಂದಿದ್ದಾರೆ.

    ಮಾವಿನ ಜಾತಿ ಕಳೆದ ವರ್ಷದ ದರ ಪ್ರಸ್ತುತ ದರ
    ಪೈರಿ          140         ಬಂದಿಲ್ಲ
    ಮುಂಡಪ್ಪ     130          160
    ಬಡ ಪೈರಿ     120         ಬಂದಿಲ್ಲ
    ಬಾದಾಮ್     100         140
    ಬಂಗನ್‌ಪಳ್ಳಿ   100         ಬಂದಿಲ್ಲ
    ಕಲ್ಕನಿ          80          ಬಂದಿಲ್ಲ
    ತೋತಾಪುರಿ   70           ಬಂದಿಲ್ಲ
    ಆಪೂಸ್        100         140

    ಮಂಗಳೂರಿಗೆ ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ತಮಿಳುನಾಡು ಕಡೆಗಳಿಂದ ಮಾವು ಪೂರೈಕೆಯಾಗುತ್ತದೆ. ಈಗಷ್ಟೇ ಮಾವು ಮಾರುಕಟ್ಟೆಗೆ ಬರಲಾರಂಭಿಸಿದೆ. ಬೇಡಿಕೆ ಇಲ್ಲದೆ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಉತ್ಸಾಹ ತೋರಿಲ್ಲ. ಈಗ ಸೀಸನ್ ಆರಂಭವಾದ ಕಾರಣ ದರ ಹೆಚ್ಚಿದ್ದು, 15-20 ದಿನಗಳ ಬಳಿಕ ಹೇರಳವಾಗಿ ಪೂರೈಕೆಯಾಗುವಾಗ ದರ ಇಳಿಕೆಯಾಗುತ್ತದೆ. ಆಗ ಬೇಡಿಕೆಯೂ ಹೆಚ್ಚಾಗುತ್ತದೆ.

    ದಿನೇಶ್ ನಾಯಕ್, ಹಣ್ಣು ಮಾರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts