More

    Web Exclusive | ಮಾರುಕಟ್ಟೆಯಲ್ಲಿ ಶುರು ಮಾವಿನ ಘಮ: ಬಾಕ್ಸ್​ಗೆ 1,800 ರೂ.; ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಆಗದ್ದರಿಂದ ಬೆಲೆ ಏರಿಕೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಕಳೆದ ವರ್ಷ ಕರೊನಾ, ಲಾಕ್​ಡೌನ್ ಹಿನ್ನೆಲೆಯಲ್ಲಿ ಗ್ರಾಹಕರ ಜೇಬಿಗೆ ಭಾರವಾಗಿದ್ದ ಹಣ್ಣುಗಳ ರಾಜ ಮಾವು, ಈ ಬಾರಿ ನೆತ್ತಿ ಸುಡುವ ಬೇಸಿಗೆಯ ಆರಂಭದ ದಿನಗಳಲ್ಲೇ ನಿಧಾನವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ, ಈ ಬಾರಿಯೂ ಬೆಲೆ ಅತ್ಯಂತ ದುಬಾರಿ ಆಗಿರುವುದರಿಂದ ಸಾಮಾನ್ಯ ಜನರಿಗೆ ಮಾವು ಸದ್ಯ ಕೈಗೆಟುಕದ ಹುಳಿ ದ್ರಾಕ್ಷಿಯಂತಾಗಿದೆ.

    ಸೀಜನ್​ಗಿಂತ ಮೊದಲೇ ಆಗಮನ: ಎರಡು ಡಜನ್ ಹಣ್ಣುಗಳಿರುವ ಒಂದು ಬಾಕ್ಸ್ ಅಲ್ಪಾನ್ಸೋ ಮಾವಿಗೆ 1500 ರಿಂದ 1800 ರೂ.ವರೆಗೆ ದರವಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಾವಿನ ಹಣ್ಣು ಪೂರೈಕೆಯಾಗದಿರುವ ಹಿನ್ನೆಲೆಯಲ್ಲಿ ದರ ಏರಿಕೆ ಕಂಡಿದೆ. ಅದಲ್ಲದೆ ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಶುರುವಾಗುತಿದ್ದ ಮಾವಿನ ಸೀಸನ್ ಈ ಬಾರಿ ಮಾರ್ಚ್ ಆರಂಭಕ್ಕೆ ದಾಂಗುಡಿ ಇಟ್ಟಿದೆ. ಮಾವಿನ ಋತು ಆರಂಭಕ್ಕೂ ಮುನ್ನವೇ ಮಾರುಕಟ್ಟೆಗೆ ಹಣ್ಣು ಬಂದಿರುವುದರಿಂದ ಹಣ್ಣು ಮಾಗದೇ ಕೊಂಚ ಹುಳಿ ರುಚಿ ಹೊಂದಿದೆ.

    ಬಾರದ ಸ್ಥಳೀಯ ಹಣ್ಣು: ನೆರೆಯ ಮಹಾರಾಷ್ಟ್ರದ ದೇವಘಡದಿಂದ ಮಾರುಕಟ್ಟೆಗೆ ಆಗಮಿಸುತ್ತಿರುವ ಅಲ್ಪಾನ್ಸೋ ಹಣ್ಣಿನ ಬಾಕ್ಸ್ (24 ಹಣ್ಣು) 1200 ರಿಂದ 1350 ರೂ., ರತ್ನಾಗಿರಿ ಅಲ್ಪಾನ್ಸೋ 1500 ರಿಂದ 1800 ರೂ. ಮತ್ತು ಗೋವಾ ಮಾಣಾಪುರ ಹಣ್ಣು 650 ರಿಂದ 700 ರೂ. ಹಾಗೂ ಧಾರವಾಡ, ಅಳ್ನಾವರದ ರತ್ನಾಗಿರಿ ತಳಿ ಎರಡು ಡಜನ್​ಗೆ 450 ರಿಂದ 600 ರೂ. ದರದಲ್ಲಿ ಮಾರಾಟವಾಗುತ್ತಿದೆ. ಆದರೆ, ಧಾರವಾಡ, ಅಳ್ನಾವರ, ಬೆಳಗಾವಿ ಜಿಲ್ಲೆಯ ಹಣ್ಣು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಇದರಿಂದ ನಗರದ ವಿವಿಧ ಮಾರ್ಕೆಟ್​ಗೆ ಅಧಿಕ ಪ್ರಮಾಣದಲ್ಲಿ ಮಹಾರಾಷ್ಟ್ರದ ದೇವಘಡ, ರತ್ನಾಗಿರಿ ಅಲ್ಪಾನ್ಸೋ ಮಾವಿನ ಹಣ್ಣು ಬರುತ್ತಿದೆ. ಹಣ್ಣಿನ ದರವೂ ಹೆಚ್ಚಾಗಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

    ಪ್ರತಿ ವರ್ಷ ನೆರೆಯ ಮಹಾರಾಷ್ಟ್ರ ಸೇರಿ ವಿವಿಧೆಡೆಯಿಂದ ವಾರಕ್ಕೆ 15 ರಿಂದ 20 ಲಾರಿಗಳು ನಗರಕ್ಕೆ ಮಾವಿನ ಹಣ್ಣು ಪೂರೈಸುತ್ತಿದ್ದವು. ಆದರೆ, ಕಳೆದ ವರ್ಷದ ಲಾಕ್​ಡೌನ್ ಪರಿಣಾಮ ವ್ಯಾಪಾರ ಸಂಪೂರ್ಣ ಬಂದ್ ಆಗಿತ್ತು. ಆದರೆ, ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಹಣ್ಣು ಪೂರೈಕೆಯಾಗಿಲ್ಲ. ಮಾರ್ಚ್ ಕೊನೆಯ ವಾರದ ಒಳಗಾಗಿ ಮಾರುಕಟ್ಟೆಗೆ ಹಣ್ಣು ಅಧಿಕ ಪ್ರಮಾಣದಲ್ಲಿ ಆಗಮಿಸುವ ಸಾಧ್ಯತೆ ಇದೆ ಎಂದು ಹಣ್ಣಿನ ವ್ಯಾಪಾರಿಗಳಾದ ರಾಹುಸಾಬ್ ಎಂ.ಮರಗೂಡಿ, ಯಮನವ್ವ ಮಲ್ಲಾಪುರ ಅಭಿಪ್ರಾಯಪಟ್ಟಿದ್ದಾರೆ.

    ಹೆಚ್ಚಿನ ಲಾಭದ ನಿರೀಕ್ಷೆ: 2020-21ನೇ ಸಾಲಿನಲ್ಲಿ ಮಾವು ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ಸರ್ಕಾರವು ಕೋವಿಡ್-19 ಕಾರಣಕ್ಕಾಗಿ ಲಾಕ್​ಡೌನ್ ಘೊಷಣೆ ಮಾಡಿತ್ತು. ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಹಣ್ಣು ಮಾರಾಟವಾಗಲಿಲ್ಲ. ಈ ವರ್ಷ ಉತ್ತಮ ಇಳುವರಿ ಬಂದಿದ್ದು, ಮಾರುಕಟ್ಟೆಯಲ್ಲಿ ಒಳ್ಳೆಯ ದರ ದೊರಕಿದರೆ ಹೆಚ್ಚಿನ ಲಾಭ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ದರ ಸ್ಥಿರವಾಗಿದ್ದರೆ ಬೆಳೆಗಾರರಿಗೆ ಲಾಭವಾಗಲಿದೆ. ಡಜನ್​ಗೆ 150 ರಿಂದ 200 ರೂ. ಇಳಿಕೆಯಾದರೆ ನಷ್ಟವಾಗಲಿದೆ ಎನ್ನುವುದು ಬೆಳೆಗಾರರಾದ ತುಕಾರಾಮ ಎಂ.ನಾವೇಕರ್, ನಿಂಗಪ್ಪ ತೊಕರಟ್ಟಿ ಅಭಿಪ್ರಾಯ.

    ಜಿಲ್ಲೆಯ ಮಾವು ಪ್ರದೇಶ ವಿವರ

    ತಾಲೂಕು- ಹೆಕ್ಟೇರ್

    • ಅಥಣಿ- 76.59
    • ಬೈಲಹೊಂಗಲ- 968.60
    • ಬೆಳಗಾವಿ- 1636.00
    • ಚಿಕ್ಕೋಡಿ- 109.00
    • ಗೋಕಾಕ- 108.00
    • ಹುಕ್ಕೇರಿ- 145.00
    • ಖಾನಾಪುರ- 1720.00
    • ರಾಯಬಾಗ- 135.00
    • ರಾಮದುರ್ಗ- 97.06
    • ಸವದತ್ತಿ- 136.00

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts