More

    ಗ್ರಾಹಕರ ಮನೆಗೆ ಅಂಚೆ ಮೂಲಕ ಮಾವು

    ವಿಜಯವಾಣಿ ಸುದ್ದಿಜಾಲ ಕೋಲಾರ
    ಬೆಂಗಳೂರಿನ ಮಾವು ಪ್ರಿಯರಿಗೊಂದು ಶುಭ ಸುದ್ದಿ. ಕರೊನಾ ಆತಂಕದ ನಡುವೆ ಹಣ್ಣು ಖರೀದಿಗೆ ನೀವು ಮಾರುಕಟ್ಟೆಗೆ ಬರಬೇಕಿಲ್ಲ. ರೈತರಿಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಸಾಕು, ತಾವು ಬಯಸಿದ ಹಣ್ಣನ್ನು ಅಂಚೆಯಣ್ಣ ಮನೆಬಾಗಿಲಿಗೆ ತರಲಿದ್ದಾನೆ!
    ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಭಾರತೀಯ ಅಂಚೆ ಸೇವೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಇಂಥದೊಂದು ಉಪಕ್ರಮಕ್ಕೆ ಮುಂದಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ತಾಜಾ ಮಾವಿನ ಹಣ್ಣು ತಲುಪಿಸುವ ಈ ವ್ಯವಸ್ಥೆಯಡಿ ಈಗಾಗಲೇ 60 ಲಕ್ಷ ರೂ. ಗಳ ಆರ್ಡರ್ ಬಂದಿದೆ.
    ಆನ್‌ಲೈನ್ ಟ್ರೇಡ್ ಪೋರ್ಟಲ್: ನಿಗಮದ ಆನ್‌ಲೈನ್ ಟ್ರೇಡ್ ಪೋರ್ಟಲ್‌ನಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 58 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರೈತರಲ್ಲಿ ಲಭ್ಯವಿರುವ ಮಾವು, ಅವುಗಳ ಬೆಲೆ ಇನ್ನಿತರ ಅಂಶಗಳು ದಾಖಲಾಗಿರುತ್ತವೆ. ಗ್ರಾಹಕರು ಮಾವಿನ ತಳಿ, ಎಷ್ಟು ಕೆಜಿಯ ಬಾಕ್ಸ್ ಬೇಕೆಂದು http://karsirimangoes.karnataka.gov.in ಪೋರ್ಟಲ್‌ನಲ್ಲಿ ಇಂಡೆಂಟ್ ಬುಕ್ ಮಾಡಿದರೆ ನಿಗಮಕ್ಕೆ ಹಾಗೂ ಸಂಬಂಧಪಟ್ಟ ರೈತನಿಗೆ ಸಂದೇಶ ರವಾನೆಯಾಗುತ್ತದೆ.
    ಮಾವು ಸರಬರಾಜು: ರೈತರು ತಮಗೆ ಬರುವ ಆರ್ಡರ್‌ಗಳನ್ನು ಕ್ರೋಡೀಕರಿಸಿ ಬಾಕ್ಸ್‌ನಲ್ಲಿ (1.50 ಕೆಜಿ, 2 ಕೆಜಿ, 3 ಕೆಜಿ) ಪ್ಯಾಕ್ ಮಾಡಿ ಗ್ರಾಹಕರ ವಿಳಾಸ ಸಹಿತ ಬೆಂಗಳೂರಿನಲ್ಲಿರುವ ಕೇಂದ್ರ ಅಂಚೆ ಕಚೇರಿಗೆ ತಲುಪಿಸಿದರೆ ಬಟವಾಡೆ ಕೆಲಸವನ್ನು ಅಂಚೆ ಇಲಾಖೆ ಮಾಡುತ್ತದೆ. ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ ಈ ಸೇವೆ ಒದಗಿಸಲಿದ್ದು, ಸರಬರಾಜಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿಕೊಂಡಿದೆ.
    ಹಣ ಪಾವತಿ: ಆರ್ಡರ್ ಮಾಡಿದ ಗ್ರಾಹಕರು ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ ಹಣ ಪಾವತಿಸಬೇಕು. ಮಾವು ಮನೆ ಬಾಗಿಲಿಗೆ ತಲುಪಿದ ತಕ್ಷಣ ನಿಗಮವು ರೈತರ ಖಾತೆಗೆ ಹಣ ಜಮಾ ಮಾಡುತ್ತದೆ. ಪ್ರಸ್ತುತ ಪ್ರತಿ ಕೆಜಿ ಮಾವು 120 ರಿಂದ 130 ರೂ.ಗೆ ಮಾರಾಟವಾಗುತ್ತಿದೆ. ನಿಗಮವು ವಿವಿಧ ತಳಿಗಳಿಗೆ ಕನಿಷ್ಠ ದರ 90ರಿಂದ 170 ರೂ. ನಿಗದಿಪಡಿಸಿದೆ.
    ಅಂಚೆ ಇಲಾಖೆ ಕೆಜಿಗೆ 27 ರೂ. ಸೇವಾ ಶುಲ್ಕ ನಿಗದಿಪಡಿಸಿದೆ. ಗ್ರಾಹಕ ರೈತನಿಗೆ ಪಾವತಿಸಬೇಕಿರುವ ಹಣವನ್ನು ನಿಗಮಕ್ಕೆ ಪಾವತಿಸಿಸುವ ಸಂದರ್ಭದಲ್ಲಿ ಅಂಚೆ ಇಲಾಖೆಯ ಸೇವಾ ಶುಲ್ಕವನ್ನು ಭರಿಸಿ ನೀಡಬೇಕು. ಪ್ರಸ್ತುತ ಮಾವು ಆರ್ಡರ್ ಕಡಿಮೆ, ಹೆಚ್ಚಾದಂತೆ ಸೇವಾ ಶುಲ್ಕ ಪರಿಷ್ಕರಣೆಯಾಗಲಿದೆ ಎನ್ನುತ್ತಾರೆ ಮಾವು ಅಭಿವೃದ್ಧಿ ಕೇಂದ್ರದ ಉಪನಿರ್ದೆಶಕ ಬಾಲಕೃಷ್ಣ.
    ಕೆಂಪು ವಲಯದಲ್ಲಿರುವ ಬೆಂಗಳೂರಿನ ನಿವಾಸಿಗಳಿಗೆ ಈ ಸೇವೆ ಅನುಕೂಲವಾದರೆ, ಇನ್ನೊಂದೆಡೆ ಮಾವು ಮಾರಾಟದ ಚಿಂತೆಯಲ್ಲಿರುವ ರೈತರ ದುಗುಡವನ್ನು ಸ್ವಲ್ಪ ಮಟ್ಟಿಗೆ ನಿವಾರಿಸಲಿದೆ.

    ಗ್ರಾಹಕರಿಂದ 3 ಕೆಜಿ ಬಾಕ್ಸ್‌ಗೆ ಬೇಡಿಕೆ ವ್ಯಕ್ತವಾಗುತ್ತದೆ. ಈಗಾಗಲೇ 60 ಲಕ್ಷ ರೂ.ಗಳ ಆರ್ಡರ್ ಬಂದಿದ್ದು, ಶೇ.70 ಸರಬರಾಜು ಮಾಡಲಾಗಿದೆ. ಆಸಕ್ತ ರೈತರು ನಿಗಮದಲ್ಲಿ ನೋಂದಣಿ ಮಾಡಿಕೊಂಡು ಸೌಲಭ್ಯದ ಪ್ರಯೋಜನ ಪಡೆಯಬಹುದು.
    ಎಚ್.ಟಿ.ಬಾಲಕೃಷ್ಣ, ಉಪನಿರ್ದೇಶಕ, ಮಾವು ಅಭಿವೃದ್ಧಿ ಕೇಂದ್ರ, ಹೊಗಳಗೆರೆ, ಶ್ರೀನಿವಾಸಪುರ

    ಶ್ರೀನಿವಾಸಪುರದ ಮಾವಿಗೆ ಬೆಂಗಳೂರಿನಲ್ಲಿ ಬಹಳಷ್ಟು ಬೇಡಿಕೆ ಇದೆ. ಈ ವರ್ಷ ಇಳುವರಿಯೂ ಕಡಿಮೆ. ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಕಲ್ಪಿಸಿರುವ ಆನ್‌ಲೈನ್ ಮಾರಾಟ ವ್ಯವಸ್ಥೆಯಿಂದ ಉತ್ತಮ ಬೆಲೆ ಸಿಗುತ್ತಿದೆ.
    ಚಂದ್ರಾರೆಡ್ಡಿ, ಶ್ರೀನಿವಾಸಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts