More

    ಸ್ವದೇಶಕ್ಕೆ ಕರೆಸಿಕೊಳ್ಳಿ ಪ್ಲೀಸ್, ಮಲೇಷ್ಯಾದಲ್ಲಿ ಸಿಲುಕಿರುವ ಮಂಗಳೂರು ವೈದ್ಯಕೀಯ ವಿದ್ಯಾರ್ಥಿಗಳ ಮನವಿ

    ಮಂಗಳೂರು: ಎರಡು ತಿಂಗಳಿನಿಂದ ಮಲೇಷ್ಯಾದಲ್ಲಿ ದಿಗ್ಬಂಧನಕ್ಕೆ ಒಳಗಾಗಿದ್ದೇವೆ. ದೇಶಕ್ಕೆ ಬಂದು ನಿಗದಿತ ದಿನ ಕ್ವಾರಂಟೈನ್ ಆಗಲು ಸಿದ್ಧರಿದ್ದೇವೆ. ಸ್ವದೇಶಕ್ಕೆ ಕರೆಸಿಕೊಳ್ಳಿ.

    -ಇದು ಮಲೇಷ್ಯಾದ ಇಂಟರ್‌ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಸರ್ಜಿಕಲ್ ಇಂಟರ್ನ್‌ಷಿಪ್ ನಡೆಸಲು ತೆರಳಿ ಲಾಕ್‌ಡೌನ್‌ನಿಂದ ಅಲ್ಲಿಯೇ ಬಾಕಿಯಾಗಿರುವ ಮಂಗಳೂರು ಕೆಎಂಸಿ ವಿದ್ಯಾರ್ಥಿಗಳಾದ ನವೀನ್ ಮಲ್ಯ ಮತ್ತು ಮಹಿಮಾ ಗುಪ್ತಾ ಅವರು ಭಾರತದ ಪ್ರಧಾನಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಮಾಡಿಕೊಳ್ಳುತ್ತಿರುವ ಮನವಿ.

    ಇಬ್ಬರೂ ಕನ್ನಡಿಗರು. ಮಂಗಳೂರು ರಥಬೀದಿಯ ನಿತ್ಯಾನಂದ ಮಲ್ಯ – ನಯನಾ ಮಲ್ಯ ದಂಪತಿ ಪುತ್ರ ನವೀನ್ ಮಲ್ಯ. ಜೈಲ್ ರೋಡ್ ನಿವಾಸಿ ಚಿತ್ರಲೇಖಾ ಗುಪ್ತಾ -ರಾಜೀವ್ ಗುಪ್ತಾ ಪುತ್ರಿ ಮಹಿಮಾ ಗುಪ್ತಾ. ನವೀನ್ ಮಲ್ಯ ಮಲೇಷ್ಯಾದ ತಮ್ಮ ಅನುಭವ, ಅನಿಸಿಕೆಗಳನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.

    ಪೂರ್ವ ನಿಗದಿಯಂತೆ ನಾವು ಏ.9ರ ತನಕ ಮಲೇಷ್ಯಾದಲ್ಲಿ ಇರಬೇಕಿತ್ತು. ಆದರೆ ಮಾ.17ರಂದು ಲಾಕ್‌ಡೌನ್ ಘೋಷಣೆಯಾಯಿತು. ಪರಸ್ಥಿತಿ ಅರಿತು ಅದೇ ದಿನ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿದರೂ ಪ್ರಯೋಜನವಾಗಲಿಲ್ಲ.

    ಮಾನಸಿಕವಾಗಿ ನಾವು ತುಂಬಾ ಕುಗ್ಗಿ ಹೋಗಿದ್ದೇವೆ. ನಮ್ಮ ಮನೆಯವರ ಪರಿಸ್ಥಿತಿಯೂ ಇದೇ ಆಗಿದೆ. ಲಾಕ್‌ಡೌನ್‌ನಿಂದ ಉದ್ದೇಶಿತ ಅಧ್ಯಯನ ಕೆಲಸಗಳು ನಡೆಯುತ್ತಿಲ್ಲ. ಅವಧಿ ಮೀರಿದ ಕಾರಣ ಆರ್ಥಿಕವಾಗಿಯೂ ಹೆಚ್ಚಿನ ಹೊರೆಯಾಗಿದೆ. ಸಂಕಷ್ಟ ಪರಿಸ್ಥಿತಿ ಎದುರಾದ ಪ್ರಥಮ ದಿನದಿಂದ ಇಲ್ಲಿನ ತನಕ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸುತ್ತಿದ್ದೇವೆ.

    ಸದ್ಯಕ್ಕೆ ಸುರಕ್ಷಿತವಾಗಿ ಇಲ್ಲೇ ಇರಿ- ಎನ್ನುವುದು ಅಲ್ಲಿಂದ ಪ್ರತಿಬಾರಿ ದೊರೆಯುತ್ತಿರುವ ಉತ್ತರ. ಸಾಮಾಜಿಕ ಜಾಲತಾಣಗಳ ಮೂಲಕ ಭಾರತ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದ್ದೇವೆ. ನಾವು ವಿದ್ಯಾಭ್ಯಾಸ ನಡೆಸುತ್ತಿರುವ ಕೆಎಂಸಿ ಸಂಸ್ಥೆಯೂ ನಮ್ಮಲ್ಲಿ ಮಾನಸಿಕ ಸ್ಥೈರ್ಯ ತುಂಬುತ್ತಿದೆ ಎಂದು ವಿವರಿಸಿದ್ದಾರೆ.

    ಇತರ ಭಾರತೀಯರು: ಪ್ರವಾಸ, ಅಧ್ಯಯನ, ಉದ್ಯೋಗ, ಉದ್ಯಮ, ವ್ಯವಹಾರ ಮತ್ತಿತರ ಕಾರಣಗಳಿಂದ ಮಲೇಷ್ಯಾದಲ್ಲಿ ಬಾಕಿಯಾಗಿರುವ ಸುಮಾರು 300 ಭಾರತೀಯರು ಹತ್ತಿರದ ಗುರುದ್ವಾರ, ದೇವಸ್ಥಾನಗಳಲ್ಲಿ ಉಳಿದುಕೊಳ್ಳಲು ಭಾರತೀಯ ರಾಯಭಾರಿ ಕಚೇರಿ ವ್ಯವಸ್ಥೆ ಮಾಡಿದೆ. ಎನ್‌ಜಿಒ ಕೂಡ ನೆರವಾಗಿದ್ದು, ಆಹಾರ ಮತ್ತು ವಾಸದ ವ್ಯವಸ್ಥೆಗಳು ಆಗಿವೆ. ಅವರಲ್ಲಿ ಗರ್ಭಿಣಿಯರು, ಚಿಕ್ಕ ಮಕ್ಕಳು, ವೃದ್ಧರು ಇದ್ದಾರೆ. ಎಂಬಿಎ ಇಂಟರ್ನ್‌ಷಿಪ್ ನಡೆಸಲು ಬಂದವರು ಇದ್ದಾರೆ ಎಂದು ನವೀನ್ ಮಲ್ಯ ವಿವರಿಸಿದ್ದಾರೆ.

    ಸೋಂಕು ನಿಯಂತ್ರಣ: ಕೋವಿಡ್ 19 ಸೋಂಕು ನಿಯಂತ್ರಣದಲ್ಲಿ ಮಲೇಷ್ಯಾ ಅನೇಕ ರಾಷ್ಟ್ರಗಳಿಗೆ ಮಾದರಿ. ಇಲ್ಲಿನ ಆಡಳಿತ ವ್ಯವಸ್ಥೆ ಬಹುಬೇಗನೆ ಎಚ್ಚೆತ್ತುಕೊಂಡ ಕಾರಣ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದಿನಂಪ್ರತಿ ಇಡೀ ದೇಶದಲ್ಲಿ 100ರಷ್ಟು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಆರಂಭದಲ್ಲಿ ರಾಜಧಾನಿ ಕೌಲಲಾಂಪುರದಿಂದಲೇ ಸೋಂಕು ಇತರ ಕಡೆ ಹರಡಿತ್ತು. ರಸ್ತೆಯಲ್ಲಿ ಸೈನ್ಯ ಇದೆ. ನಿಯಮ ಉಲ್ಲಂಘಿಸಿದ ವ್ಯಕ್ತಿಗಳು ಜೈಲುಪಾಲಾಗುತ್ತಾರೆ. ನಿಯಮ ಮೀರಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಒಂದು ವಾಹನದಲ್ಲಿ ಚಾಲಕನಲ್ಲದೆ ಓರ್ವ ವ್ಯಕ್ತಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ ಎಂದು ನವೀನ್ ಮಲ್ಯ ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts