More

    ಸ್ವಚ್ಛತೆಯೇ ಮಂಗಳೂರಿಗೆ ಸವಾಲು, ಸರ್ವೇಕ್ಷಣೆಯಲ್ಲೂ ಸ್ಥಾನ ಪಡೆಯುವಲ್ಲಿ ವಿಫಲ

    ಭರತ್ ಶೆಟ್ಟಿಗಾರ್ ಮಂಗಳೂರು

    ಸ್ವಚ್ಛ, ಸುಂದರ, ವಾಸ ಯೋಗ್ಯ ಎಂದು ಹೆಸರು ಪಡೆದಿರುವ ಮಂಗಳೂರು ಸ್ವಚ್ಛ ಸರ್ವೇಕ್ಷಣೆಯ ರಾಷ್ಟ್ರಮಟ್ಟದ ರ‌್ಯಾಂಕಿಂಗ್‌ನ ವಿಷಯದಲ್ಲಿ ಮಾತ್ರ ಹೆಸರು ಮುನ್ನೆಲೆಗೆ ಬರುವುದೇ ಇಲ್ಲ. 2019ರಲ್ಲಿ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ದುರಂತದ ಬಳಿಕವಂತೂ ಸರ್ವೇಕ್ಷಣೆಯಲ್ಲಿ ರ‌್ಯಾಂಕ್ ಪಡೆಯಲು ಸಾಧ್ಯವೇ ಆಗಿಲ್ಲ. ಮಂಗಳೂರು ನಗರ ಅಭಿವೃದ್ಧಿಯಾಗುತ್ತಿದಂತೆ ಸ್ವಚ್ಛತೆ ವಿಚಾರವೇ ಪ್ರಮುಖ ಸವಾಲಾಗಿ ಪರಿಣಮಿಸುತ್ತಿದೆ.

    2018-19ನೇ ರಲ್ಲಿ ನಡೆಸಲಾದ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ 3ರಿಂದ 10 ಲಕ್ಷವರೆಗಿನ ಜನಸಂಖ್ಯೆಯ ವಿಭಾಗದಲ್ಲಿ ಮಂಗಳೂರು ನಗರ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಮಧ್ಯಮ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಐದನೇ ಸ್ಥಾನ ಪಡೆದಿತ್ತು. ದೇಶದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಘನತ್ಯಾಜ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ಸರ್ವೇಕ್ಷಣಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಶೇ.80ರಷ್ಟು ಕಸವನ್ನು ಮನೆಯಲ್ಲೇ ವಿಂಗಡಣೆ, ಹಸಿ ಕಸ-ಒಣ ಕಸಕ್ಕೆ ಪ್ರತ್ಯೇಕ ಬುಟ್ಟಿ, ಶೇ.85ರಷ್ಟು ರಸ್ತೆಗಳು ಸ್ವಚ್ಛವಾಗಿವೆ ಎಂಬ ಅಂಶಗಳು ವರದಿಯಲ್ಲಿ ಒಳಗೊಂಡಿತ್ತು. ಇದು ಸ್ವಚ್ಛತಾ ಕಾರ್ಯಕ್ರಮಗಳಿಗೆ ಒಂದು ರೀತಿಯ ಬೂಸ್ಟ್ ನೀಡಿದಂತಾಗಿತ್ತು. ಆದರೆ ರ‌್ಯಾಂಕ್ ಬಂದ ಮರುವರ್ಷವೇ ಪಚ್ಚನಾಡಿಯಲ್ಲಿ ಸಂಭವಿಸಿದ ಭೀಕರ ತ್ಯಾಜ್ಯ ದುರಂತ ಮಂಗಳೂರಿನ ಸ್ವಚ್ಛತೆಯ ಗುಟ್ಟನ್ನು ಜಗಜ್ಜಾಹೀರು ಮಾಡಿತ್ತು.

    ಘಟನೆಯಿಂದ ನಂತರದ ಒಂದು ವರ್ಷ ಪಾಲಿಕೆ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲೇ ಪಾಲ್ಗೊಂಡಿಲ್ಲ. 2020-21ರಲ್ಲಿ ಪಾಲ್ಗೊಂಡರೂ ರ‌್ಯಾಂಕ್ ಪಡೆಯುವ ಮಟ್ಟಕ್ಕೆ ತಲುಪಿರಲಿಲ್ಲ. ಹೊರಗಿನಿಂದ ಬರುವವರಿಗೆ ನಗರ ತಕ್ಕಮಟ್ಟಿಗೆ ಸ್ವಚ್ಛವಾಗಿಯೇ ಕಾಣುತ್ತಿದೆ. ಆದರೆ ಘನತ್ಯಾಜ್ಯವೂ ಪ್ರತಿನಿತ್ಯ ವಿಲೇವಾರಿ ಆಗುತ್ತಿದೆ. ಅದರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದು ಇದಕ್ಕೆ ಕಾರಣ. 2021-22ನೇ ಸಾಲಿನ ಸರ್ವೇಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಭಾಗವಹಿಸಲಿದ್ದು, ಸಾರ್ವಜನಿಕರ ಸಹಕಾರವಿದ್ದರೆ ಮತ್ತೆ ತನ್ನ ಹೆಸರನ್ನು ಸ್ವಚ್ಛನಗರಗಳ ಸಾಲಿನಲ್ಲಿ ಗುರುತಿಸಲು ಸಾಧ್ಯವಾಗಬಹುದು.

    ಬ್ಲಾೃಕ್ ಸ್ಪಾಟ್‌ಗಳಿಗಿಲ್ಲ ಮುಕ್ತಿ: ಇದರ ಜತೆಗೆ ನಗರದಲ್ಲಿ ಕೆಲವೊಂದು ಸ್ಥಳಗಳನ್ನ್ನು ‘ಬ್ಲಾೃಕ್ ಸ್ಪಾಟ್’ ಗಳಾಗಿ ಗುರುತಿಸಲಾಗಿದ್ದು, ಕ್ಯಾಮರಾ ಅಳವಡಿಸಿದರೂ, ಸಾರ್ವಜನಿಕರು ಅಲ್ಲೇ ಕಸವನ್ನು ತಂದು ಸುರಿಯುತ್ತಿದ್ದಾರೆ. ಇನ್ನೊಂದೆಡೆ ಏನೇ ಮಾಡಿದರೂ ಹೆದ್ದಾರಿ ಬದಿಯಲ್ಲಿ ಕಸ ಎಸೆದು ಹೋಗುವವರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇವು ಕೂಡಾ ಜನರು ನಗರವನ್ನು ಸ್ವಚ್ಛ ನಗರ ಎನ್ನುವ ಹೆಸರನ್ನು ಪಡೆಯುವಲ್ಲಿ ತಡೆಯಾಗುತ್ತಿದೆ.

    ಪಚ್ಚನಾಡಿಯಲ್ಲಿ ತ್ಯಾಜ್ಯ ದುರಂತ ನಡೆದ ಬಳಿಕ ಒಂದು ವರ್ಷ ಮಹಾನಗರ ಪಾಲಿಕೆ ಸಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿಲ್ಲ. ಆದರೆ ನಂತರದ ವರ್ಷಗಳಲ್ಲಿ ಭಾಗವಹಿಸಿದ್ದೇವೆ. ಆದರೆ ರ‌್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿಲ್ಲ. ಮುಂದಿನ ವರ್ಷಗಳಲ್ಲಿ ಮತೆ ಸ್ಥಾನವನ್ನು ಉತ್ತಮ ಪಡಿಸಿಕೊಳ್ಳುವ ನಿರೀಕ್ಷೆಯಿದೆ.

    ಅಕ್ಷಿ ಶ್ರೀಧರ್
    ಮನಪಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts