More

    ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಸಂಚು?

    ಮಂಗಳೂರು: ಉಗ್ರ ಸಂಘಟನೆ ಪರ ಗೋಡೆ ಬರಹಕ್ಕೆ ಮಂಗಳೂರು ಜನರಿಂದ ಯಾವ ರೀತಿಯ ಸ್ಪಂದನೆ ಸಿಗುತ್ತದೆ ಎಂಬುದನ್ನು ನೋಡಿಕೊಂಡು ನಗರದಲ್ಲಿ ಮುಂದಿನ ದುಷ್ಕೃತ್ಯ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ಬಹಿರಂಗಗೊಂಡಿದೆ.
    ಆರಂಭದಲ್ಲಿ ಗೋಡೆ ಬರಹದ ಮೂಲಕ ಪ್ರತಿಕ್ರಿಯೆ ಗಮನಿಸಿ, ಈ ಪ್ರಯತ್ನದಲ್ಲಿ ಸಿಕ್ಕಿಬೀಳದಿದ್ದರೆ ಬೇರೆ ಸ್ವರೂಪದಲ್ಲಿ ಕೃತ್ಯಗಳನ್ನು ಎಸಗುವ ಸಂಚು ಹೆಣೆಯಲಾಗಿತ್ತು. ಆರೋಪಿಗಳ ಬಂಧನವಾಗದೆ ಇದ್ದರೆ ಮಂಗಳೂರು ನಗರದಲ್ಲಿ ದೊಡ್ಡ ಮಟ್ಟದ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಪ್ರಕರಣದಲ್ಲಿ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ ಪ್ರಮುಖ ಆರೋಪಿಯಾಗಿದ್ದು, ಈತನಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಮಂದಿ ಅಜ್ಞಾತರಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಕೆಲವರು ವಿದೇಶದಿಂದ ದುಷ್ಕೃತ್ಯಕ್ಕೆ ಪ್ರೇರಣೆ ನೀಡುತ್ತಿದ್ದರು. ಇಬ್ಬರ ಬಂಧನವಾಗುತ್ತಿದ್ದಂತೆ ವಾಟ್ಸಾೃಪ್ ಗ್ರೂಪ್‌ನಲ್ಲಿರುವವರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿವೆ ಎಂದು ತಿಳಿದು ಬಂದಿದೆ.

    ಮುಂದುವರಿದ ವಿಚಾರಣೆ: ಬಂಧಿತರನ್ನು ವಿಚಾರಣೆ ನಡೆಸಿದಾಗ ಕೃತ್ಯದಲ್ಲಿ ಇನ್ನೋರ್ವ ತೀರ್ಥಹಳ್ಳಿಯ ಸಾದತ್ ಎಂಬಾತ ಇರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಆತನನ್ನೂ ವಶಕ್ಕೆ ಪಡೆಯಲಾಗಿದ್ದು, ಮಂಗಳೂರಿನಲ್ಲಿ ವಿಚಾರಣೆ ಮುಂದುವರಿದಿದೆ. ಕೇಂದ್ರ ಉಪವಿಭಾಗದ ಎಸಿಪಿ ಎಂ.ಜಗದೀಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

    ಬಂಧಿತರಿಗೆ ಪೊಲೀಸ್ ಕಸ್ಟಡಿ: ಬಂಧಿತ ಇಬ್ಬರು ಆರೋಪಿಗಳಾದ ಮಹಮ್ಮದ್ ಶಾರೀಕ್(22) ಹಾಗೂ ಮಾಝ್ ಮುನೀರ್ ಅಹಮ್ಮದ್(21) ಅವರನ್ನು ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರನ್ನು ಎರಡು ದಿನಗಳ ಕಾಲ ಕೋವಿಡ್ ಪರೀಕ್ಷೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ವರದಿ ನೆಗೆಟಿವ್ ಬಂದ ಕಾರಣ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಮೊಬೈಲ್ ಕರೆಗಳ ಪರಿಶೀಲನೆ: ಆರೋಪಿಗಳಿಗೆ ವಿದೇಶದಿಂದ ಕರೆ ಬಂದಿರುವುದನ್ನು ತನಿಖಾ ತಂಡ ಪರಿಶೀಲಿಸುತ್ತಿದೆ. ವಿದೇಶದಿಂದ ಬೇರೆ ಕರೆಗಳು ಬಂದಿದೆಯಾ? ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಮಾಹಿತಿಯನ್ನು ತನಿಖಾ ತಂಡ ಕಲೆಹಾಕುತ್ತಿದೆ. ವಿದೇಶಿ ಕರೆ ಮಾತ್ರವಲ್ಲದೆ, ದೇಶೀಯವಾಗಿಯೂ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಸಾಧ್ಯತೆಗಳ ಬಗ್ಗೆ ಆರೋಪಿಗಳ ಮೊಬೈಲ್ ಕರೆಗಳ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts