More

    ಪಠ್ಯ ಪೂರ್ಣಗೊಳಿಸಿ ಪದವಿ ಪರೀಕ್ಷೆ

    ಮಂಗಳೂರು: ಕರೊನಾ ಲಾಕ್‌ಡೌನ್ ಮುಗಿದ ಬಳಿಕ ಬಾಕಿ ಉಳಿದಿರುವ ಪಠ್ಯವನ್ನು ಪೂರ್ಣಗೊಳಿಸಿಯೇ ಪದವಿ ಪರೀಕ್ಷೆಗಳನ್ನು ನಡೆಸಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.
    ಕರೊನಾ ಹಿನ್ನಲೆಯಲ್ಲಿ ವಿಶ್ವವಿದ್ಯಾನಿಲಯದ ಸಂಯೋಜಿತ ಎಲ್ಲ ಕಾಲೇಜುಗಳು ಮುಚ್ಚಿರುವ ಕಾರಣ ಸುಮಾರು ಒಂದು ತಿಂಗಳ ಪಠ್ಯಗಳು ಪೂರ್ಣಗೊಳ್ಳದೆ ಬಾಕಿ ಉಳಿದಿವೆ. ಶೈಕ್ಷಣಿಕ ವರ್ಷಾಂತ್ಯದ ವೇಳೆಗೆ ಈ ರೀತಿ ಆಗಿರುವುದು ವಿದ್ಯಾರ್ಥಿಗಳ, ಅದರಲ್ಲೂ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
    ವೇಳಾಪಟ್ಟಿಯಂತೆ ಏ.12ರೊಳಗೆ ಪದವಿ ತರಗತಿಗಳಿಗೆ ಈ ಶೈಕ್ಷಣಿಕ ವರ್ಷದ/ಸೆಮಿಸ್ಟರ್‌ನ ಎಲ್ಲ ಪಠ್ಯಗಳು ಮುಗಿದು ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧಗೊಳ್ಳಬೇಕಿತ್ತು. ಮೇ ತಿಂಗಳೊಳಗೆ ಸ್ನಾತಕೋತ್ತರ ಪದವಿ ಪಠ್ಯಗಳು ಮುಗಿಯಬೇಕಾಗಿದ್ದವು. ಆದರೆ ಮಾರ್ಚ್ 23ರಿಂದಲೇ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಪಾಠ-ಪ್ರವಚನ ಅರ್ಧದಲ್ಲಿದೆ.

    ಏ.15ರಂದು ಕಾಲೇಜುಗಳು ಮತ್ತೆ ಆರಂಭವಾಗುವ ಕುರಿತು ಈಗಲೇ ಹೇಳಲು ಅಸಾಧ್ಯ. ಲಾಕ್‌ಡೌನ್ ಮುಗಿದರೆ, ತರಗತಿಗಳನ್ನು ಪೂರ್ಣಗೊಳಿಸಿಯೇ ಪರೀಕ್ಷೆ ನಡೆಸಲಾಗುವುದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಅಪ್‌ಡೇಟ್ ಆಗಿರಿ: ತರಗತಿ ಅರ್ಧದಲ್ಲೇ ನಿಲ್ಲಿಸಿರುವುದರಿಂದ ಈಗಾಗಲೇ ಪೂರ್ಣಗೊಂಡಿರುವ ಪಠ್ಯಗಳನ್ನು ಚೆನ್ನಾಗಿ ಅಭ್ಯಾಸಿಸಲು ವಿದ್ಯಾರ್ಥಿಗಳಿಗೆ ಕಾಲೇಜುಗಳಿಂದ ಈಗಾಗಲೇ ಸೂಚನೆ ನೀಡಲಾಗಿದೆ. ಜತೆಗೆ ಪ್ರತಿ ವಿಷಯದಲ್ಲಿ ಸುಮಾರು 500 ಪ್ರಶ್ನೆಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡುವಂತೆ ಪ್ರಾಧ್ಯಾಪಕರಿಗೆ ಸಲಹೆ ನೀಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸಲು ವಿಶ್ವವಿದ್ಯಾನಿಲಯ ಕೈಗೊಂಡಿರುವ ಉಪಕ್ರಮವಿದು.

    ವಾಟ್ಸಾಪ್‌ನಲ್ಲಿ ಬೋಧನೆ: ಮಂಗಳೂರು ವಿವಿ ವ್ಯಾಪ್ತಿಗೆ ಬರುವ ಸೋಮವಾರಪೇಟೆಯ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರ ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಕಾಲೇಜಿನಲ್ಲಿ ವಾಟ್ಸಾಪ್ ಗ್ರೂಪ್ ಮೂಲಕ ಆಯಾ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಬೋಧಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ಗ್ರೂಪ್‌ನಲ್ಲೇ ಪ್ರಾಧ್ಯಾಪಕರೊಂದಿಗೆ ಜತೆಗೆ ಚರ್ಚಿಸಬಹುದಾಗಿದೆ. ಇದು ಯಶಸ್ವಿಯಾದರೆ ಇತರ ಕಾಲೇಜುಗಳಲ್ಲೂ ಈ ಮಾದರಿ ಅನುಸರಿಸಲು ಸೂಚಿಸಲಾಗುವುದು ಎನ್ನುತ್ತಾರೆ ಕುಲಪತಿ ಯಡಪಡಿತ್ತಾಯ.

    ಆನ್‌ಲೈನ್ ತರಗತಿಗೆ ಚಿಂತನೆ:
    ಹೆಚ್ಚಿನ ಖಾಸಗಿ ವೃತ್ತಿಪರ ಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ಆನ್‌ಲೈನ್ ಮೂಲಕ ಪಾಠ ಪ್ರವಚನ ಮಾಡುತ್ತಿದ್ದಾರೆ. ಅದೇ ರೀತಿ ಮಂಗಳೂರು ವಿವಿ ಸಂಯೋಜಿತ ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಬೋಧನೆ ನಡೆಸುವ ನಿಟ್ಟಿನಲ್ಲಿ ಚಿಂತನೆಗಳು ನಡೆದಿವೆ. ಪಿಜಿ ವಿದ್ಯಾರ್ಥಿಗಳಲ್ಲಿ ಲ್ಯಾಪ್‌ಟಾಪ್ ಇರುವುದರಿಂದ ಅನುಕೂಲಕರ. ಒಂದು ವೇಳೆ ಲಾಕ್‌ಡೌನ್ ಮುಂದುವರಿದರೆ ಆನ್‌ಲೈನ್ ಮೂಲಕ ಕಲಿಸಲು ವಿಶ್ವವಿದ್ಯಾಲಯ ಉದ್ದೇಶಿಸಿದೆ.

    ನಿರಂತರ ರಜೆ ಇರುವುದರಿಂದ ವಿದ್ಯಾರ್ಥಿಗಳು ಭಯಪಡುವ ಅವಶ್ಯಕತೆಯಿಲ್ಲ. ಶಿಕ್ಷಣ ವಿಚಾರದಲ್ಲಿ ಯಾವ ವಿದ್ಯಾರ್ಥಿಗೂ ಸಮಸ್ಯೆಯಾಗದು. ಬಾಕಿ ಇರುವ ಪಠ್ಯಗಳನ್ನು ಯಾವ ರೀತಿ ಪೂರ್ಣಗೊಳಿಸಿ, ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬೇಕು ಎನ್ನುವ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಲಾಕ್‌ಡೌನ್ ಮುಂದುವರಿದಲ್ಲಿ ಸಾಧ್ಯವಿರುವಲ್ಲಿ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿ ಬೋಧಿಸಲು ವ್ಯವಸ್ಥೆ ಮಾಡಲಾಗುವುದು.
    – ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿವಿ ಕುಲಪತಿ

    ವಿಶ್ವವಿದ್ಯಾಲಯದ ಹಿಂದಿನ ನಿರ್ದೇಶನದ ಪ್ರಕಾರ ಏ.12ರಂದು ಶೈಕ್ಷಣಿಕ ವರ್ಷದ ಕೊನೇ ದಿನ. ಆದ್ದರಿಂದ ಈ ವೇಳೆಗಾಗಲೇ ಪಠ್ಯಗಳು ಮುಗಿಯಬೇಕಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಸುಮಾರು ಒಂದು ತಿಂಗಳ ಪಠ್ಯಗಳು ಬಾಕಿಯಾಗಿವೆ. ವಿಶ್ವವಿದ್ಯಾಲಯದ ನಿರ್ದೇಶನದಂತೆ ತರಗತಿ ಅಥವಾ ಪರೀಕ್ಷೆ ನಡೆಸಲಾಗುವುದು.
    – ಡಾ.ಉದಯ್ ಕುಮಾರ್ ಎಂ.ಎ., ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts