More

    ಮಳೆಗೆ ಕರಾವಳಿ ತತ್ತರ

    ಮಂಗಳೂರು/ಉಡುಪಿ: ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾನುವಾರ ದಿನವಿಡೀ ಭಾರಿ ಮಳೆ ಸುರಿದಿದೆ. ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿರುವ ಬೆನ್ನಲ್ಲೇ, ಇನ್ನಷ್ಟು ಪ್ರವಾಹ ಭೀತಿ ಜನರನ್ನು ಕಂಗೆಡಿಸಿದೆ.
    ಈ ಮಧ್ಯೆ, ನೆರೆಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು, ಅಗತ್ಯವಿದ್ದರೆ ಹೆಲಿಕಾಪ್ಟರ್ ನೆರವು ಪಡೆಯುವಂತೆ ಸೂಚನೆ ನೀಡಿದ್ದಾಗಿ ರಾಜ್ಯ ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    33 ಗ್ರಾಮಗಳಲ್ಲಿ ಪ್ರವಾಹ: ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದೆ. ವ್ಯಾಪಕ ಮಳೆ ಪರಿಣಾಮ ಉಡುಪಿಯಲ್ಲಿ ಜಲ ಪ್ರವಾಹ ಸೃಷ್ಟಿಯಾಗಿದೆ.
    ಶನಿವಾರ ತಡರಾತ್ರಿಯಿಂದ ಭಾನುವಾರವರೆಗೆ 1107ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, 2,874ಕ್ಕೂ ಅಧಿಕ ಜನರ ಸ್ಥಳಾಂತರ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರ, ಸಭಾ ಭವನ, ಸರ್ಕಾರಿ ಹಾಸ್ಟೆಲ್‌ಗಳಲ್ಲಿ 31 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಡಳಿತ, ಸ್ಥಳೀಯರು ಸಂತ್ರಸ್ತರಿಗೆ ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಿದ್ದಾರೆ.

    ಜಿಲ್ಲೆಯ ಶಾಂಭವಿ, ಸ್ವರ್ಣಾ, ಮಡಿಸಾಲು, ಪಾಪನಾಶಿನಿ, ಸೀತಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿಯೂ ಮಳೆ ಪ್ರಮಾಣ ಹೆಚ್ಚಿದ್ದು ಅಪಾಯ ಸಂಭವಿಸಿಲ್ಲ. ಕೃಷ್ಣ ಮಠದ ದೇವಾಲಯದ ಆವರಣ ಹಾಗೂ ಪಾರ್ಕಿಂಗ್ ಪ್ರದೇಶ ಜಲಾವೃತವಾಗಿದ್ದು, ಅಲ್ಲಿದ್ದ ವಾಹನಗಳಿಗೆ ಹಾನಿಯಾಗಿದೆ. ಹಲವು ಮನೆಗಳ ಮುಂದೆ ನಿಲ್ಲಿಸಲಾಗಿದ್ದ ವಾಹನಗಳೂ ಹಾನಿಯಾಗಿವೆ. ಪುತ್ತಿಗೆ ಮೂಲ ಮಠದ ಗೋ ಶಾಲೆ ಜಲಾವೃತವಾಗಿದೆ. ಉಡುಪಿಯ ಬಜೆಯಲ್ಲಿ ಪವರ್‌ಹೌಸ್ ಜಲಾವೃತಗೊಂಡು, ಅಲ್ಲಿಯೇ ಬಾಕಿಯಾಗಿದ್ದ ಇಬ್ಬರನ್ನು ಸ್ಥಳಾಂತರಿಸಲಾಗಿದೆ.

    ಅಪಾಯಂಚಿನಲ್ಲಿ ಹಲವು ಮನೆಗಳು: ಘಟ್ಟ ಹಾಗೂ ತಪ್ಪಲು ಪ್ರದೇಶದಲ್ಲಿ ಭಾರಿ ಮಳೆ ಪರಿಣಾಮ ಪ್ರಮುಖ ನದಿಗಳಲ್ಲಿ ಜಲಮಟ್ಟ ಏರಿದೆ.
    ಅಲ್ಲಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದು, ಹಲವರು ಗಾಯಗೊಂಡಿದ್ದಾರೆ. ವಿಟ್ಲದ ಮಂಗಲಪದವು-ಕೋಡಪದವು ಬಾಬಟ್ಟ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರದೇಶದ ಹಲವು ಮನೆಗಳು ಅಪಾಯ ಹಂತದಲ್ಲಿವೆ. ಮಂಗಳೂರಿನ ಸರಿಪಳ್ಳ-ಕನ್ನಗುಡ್ಡೆಯಲ್ಲಿ ಧರೆ ಕುಸಿದು, ಮನೆಗೆ ಸಂಪೂರ್ಣ ಹಾನಿಯಾಗಿದೆ. ಅದ್ಯಪಾಡಿಯಲ್ಲಿ ಬಂಡೆ ಸಹಿತ ಗುಡ್ಡ ಜರಿದು ರಸ್ತೆಗೆ ಬಿದ್ದ ಕಾರಣ, ಸಂಪರ್ಕ ಕಡಿತಗೊಂಡಿದೆ. ಕರಾವಳಿಯಲ್ಲಿ ಸೋಮವಾರವೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ.

    ಮೈ ತುಂಬಿ ಹರಿದ ಜೀವನದಿಗಳು: ದ.ಕ.ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ, ಗುಂಡ್ಯ ಹೊಳೆ, ಪಯಸ್ವಿನಿ, ಫಲ್ಗುಣಿ, ಶಾಂಭವಿ, ನಂದಿನಿ ನದಿಗಳು ತುಂಬಿ ಹರಿಯುತ್ತಿದೆ. ನದಿ ತಟದ ಕ್ಷೇತ್ರಗಳಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳ, ಕಾಸರಗೋಡಿಮ ಮಧೂರು ಶ್ರೀ ಮಹಾಗಣಪತಿ ದೇವಸ್ಥಾನಗಳು ಜಲಾವೃತಗೊಂಡಿವೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ. ಕಟೀಲು, ಮೂಲ್ಕಿ, ಸುರತ್ಕಲ್ ಮೊದಲಾದೆಡೆ ನೆರೆ ನೀರು ಕೃಷಿ ಭೂಮಿ, ಭತ್ತದ ಗದ್ದೆಗೆ ನುಗ್ಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.

    ವಿಪತ್ತು ನಿರ್ವಹಣ ಪಡೆ ಕಾರ್ಯಚರಣೆ: ಭಾನುವಾರ ಬೆಳಗ್ಗೆ 10ಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ ಕಾರ್ಯಚರಣೆಗೆ ಉಡುಪಿಗೆ ಆಗಮಿಸಿತ್ತು. ಉಡುಪಿ ನಗರದಲ್ಲಿ ತಡರಾತ್ರಿ 50 ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು. ಕಲ್ಸಂಕ ಇಂದ್ರಾಣಿ ತೀರ್ಥ ತುಂಬಿ ಹರಿದ ಪರಿಣಾಮ ಉಡುಪಿ ಗುಂಡಿಬೈಲು, ಅಂಬಲಪಾಡಿ, ಮಠದ ಬೆಟ್ಟು, ಬೈಲಕೆರೆ ನಿಟ್ಟೂರು ಕೊಡಂಕೂರು ಚಿಟ್ಪಾಡಿ. ಉಡುಪಿ ಕೃಷ್ಣ ಮಠ ಪಾರ್ಕಿಂಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿತ್ತು. ನಗರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಲ್ಸಂಕದಲ್ಲಿ ಸಂಪೂರ್ಣ ನೀರು ನಿಂತು ಕೆಲಕಾಲ ರಸ್ತೆ ಸಂಪರ್ಕ ಕಡಿತವಾಗಿತ್ತು.

    ಬ್ರಹ್ಮಾವರದಲ್ಲಿ ಗರಿಷ್ಠ ಮಳೆ: ಭಾನುವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 150.4, ಬೆಳ್ತಂಗಡಿ 150.7, ಮಂಗಳೂರು 190.2, ಪುತ್ತೂರು 143.2, ಸುಳ್ಯ 110.7 ಮಿ.ಮೀ.ಸಹಿತ ದ.ಕ.ಜಿಲ್ಲೆಯಲ್ಲಿ ಸರಾಸರಿ 149 ಮಿ.ಮೀ. ಮಳೆ ಸುರಿದಿದೆ. ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ರಾಜ್ಯದಲ್ಲೇ ಅತ್ಯಧಿಕ 390 ಮಿ.ಮೀ.(39 ಸೆಂ.ಮೀ) ಮಳೆ ಸುರಿದಿದೆ. ಕಾರ್ಕಳದಲ್ಲಿ 280, ಮೂಲ್ಕಿ, ಉಡುಪಿ 270, ಮಂಗಳೂರು ವಿಮಾನ ನಿಲ್ದಾಣ. ಆಗುಂಬೆಯಲ್ಲಿ 220 ಮಿ.ಮೀ. ಮಳೆ ಸುರಿದಿದೆ. ಕೆಎಸ್‌ಎನ್‌ಡಿಎಂಸಿ ಮಾಹಿತಿಯಂತೆ ಭಾನುವಾರ ಬೆಳಗ್ಗಿನಿಂದ ಸಾಯಂಕಾಲದ ವರೆಗೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು 100.5, ನಾವೂರು 97.5, ನಾರಾವಿ 86, ಕಡಿರುದ್ಯಾವರ 83, ಮೂಡುಬಿದಿರೆ ಧರೆಗುಡ್ಡೆಯಲ್ಲಿ 66ಮಿ.ಮೀ ಮಳೆ ಸುರಿದಿದೆ.

    ಮೀನುಗಾರರಿಗೆ ಸೂಚನೆ: ಮಳೆಯೊಂದಿಗೆ ಬಲವಾದ ಗಾಳಿ ಬೀಸುತ್ತಿದ್ದು, ಸಮುದ್ರಲ್ಲಿಯೂ ಗಾಳಿಯಬ್ಬರ ಹೆಚ್ಚಾಗಿದೆ. ಕರ್ನಾಟಕ ಕರಾವಳಿಯಲ್ಲಿ 45-55 ಕಿ.ಮೀ. ವೇಗದಲ್ಲಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರಿನಿಂದ ಕಾರವಾರದ ವರೆಗೆ 3-3.5 ಮೀ. ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ದಡ್ಡಕ್ಕೆ ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು, ತಣ್ಣೀರು ಬಾವಿ ಮೊದಲಾದೆಡೆ ಕಡಲು ಕೊರೆತ ಮುಂದುವರಿದಿದೆ.

    ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಕೆಲ ಗ್ರಾಮಗಳು ಜಲಾವೃತಗೊಂಡಿವೆ. ರಸ್ತೆ ಸಂಪರ್ಕ ಕಡಿತ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಬಂದ ತಕ್ಷಣ ಎಸ್‌ಡಿಆರ್‌ಎಫ್ ತಂಡದ 250 ಸದಸ್ಯರನ್ನು ಶನಿವಾರ ತಡರಾತ್ರಿಯೇ ಸ್ಥಳಕ್ಕೆ ಕಳುಹಿಸಲಾಗಿತ್ತು. 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ತಲುಪಿದೆ. ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಜತೆ ಮಾತನಾಡಿ, ರಕ್ಷಣಾ ಇಲಾಖೆಯ ಒಂದು ಹೆಲಿಕಾಪ್ಟರ್ ನೀಡಲು ಕೇಳಿಕೊಂಡಿದ್ದೇನೆ.
    – ಬಸವರಾಜ ಬೊಮ್ಮಾಯಿ, ಗೃಹ ಸಚಿವ

    ಜಿಲ್ಲೆಯಾದ್ಯಂತ ಹಲವಾರು ತಗ್ಗು ಪ್ರದೇಶಗಳಲ್ಲಿ ಮನೆಗಳು, ಸೊತ್ತುಗಳು ಮುಳುಗಿವೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗಿದೆ. ಹೆಚ್ಚಿನ ವಿಪತ್ತು ಪರಿಹಾರ ಕಾರ್ಯಪಡೆ ಕಳಿಸಿಕೊಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಕೋರಲಾಗಿದೆ. ಮಂಗಳೂರಿನಿಂದ ಒಂದು ಎನ್‌ಡಿಅರ್‌ಎಫ್ ತಂಡ ಬಂದಿದೆ. 20 ಜನರನ್ನು ಒಳಗೊಂಡ ಇನ್ನೊಂದು ತಂಡ ಮೈಸೂರಿನಿಂದ ಬರಲಿದೆ. ಬೆಂಗಳೂರು ಹಾಗೂ ಕಾರವಾರ ಕೇಂದ್ರದಿಂದ ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಕ್ಕಾಗಿ ಕಳುಹಿಸುವುದಾಗಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
    – ಶೋಭಾ ಕರಂದ್ಲಾಜೆ, ಸಂಸದೆ, ಉಡುಪಿ-ಚಿಕ್ಕಮಗಳೂರು

    ಎನ್‌ಡಿಆರ್‌ಎಫ್, ಕೋಸ್ಟ್‌ಗಾರ್ಡ್, ನೌಕಾ ದಳ, ಅಗ್ನಿಶಾಮಕ ದಳ ಸಹಿತ ಹಲವು ಸಂಘಟನೆಗಳ ನೆರವಿನಿಂದ ನೆರೆಯಲ್ಲಿ ಸಿಲುಕಿದ್ದ ಸಾವಿರಾರು ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 77 ಗ್ರಾಮಗಳು ಜಲಾವೃತಗೊಂಡಿದ್ದು, ಸ್ಥಳಾಂತರಿಸಲಾದ ನಾಗರಿಕರನ್ನು 31 ತಾತ್ಕಲಿಕ ಪುನರ್ವಸತಿ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಎರಡು ದಿನ ರೆಡ್ ಅಲರ್ಟ್ ಇರುವುದರಿಂದ ನದಿ ತೀರ ಹಾಗೂ ಕುದ್ರುಗಳಲ್ಲಿರುವ ಮನೆಯವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.
    -ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts