More

    ಜನರ ಸಮಸ್ಯೆಗೆ ಸಕಾರಾತ್ಮಕ ಸ್ಪಂದನೆ ಅವಶ್ಯಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಡಾ.ಚಂದ್ರಗುಪ್ತ

    ಮಂಗಳೂರು: ಜನರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆಗ ಸಮಾಜದಿಂದಲೂ ಉತ್ತಮ ಸ್ಪಂದನೆ ಸಿಗುತ್ತದೆ ಎಂದು ಪಶ್ಚಿಮ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಚಂದ್ರಗುಪ್ತ ಹೇಳಿದರು.

    ಮಂಗಳೂರು ಪೊಲೀಸ್ ಕಮಿಷನರೇಟ್, ದ.ಕ. ಜಿಲ್ಲಾ ಪೊಲೀಸ್ ಮತ್ತು ಕೆಎಸ್‌ಆರ್‌ಪಿ 7ನೇ ಪಡೆ ಘಟಕಗಳ ಆಶ್ರಯದಲ್ಲಿ ಭಾನುವಾರ ಡಿ.ಎ.ಆರ್. ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾದ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


    ಸಮಾಜದಲ್ಲಿ ಅವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಮಹತ್ತರ ಜವಾಬ್ಧಾರಿಯ ಭಾರ ಪೊಲೀಸರ ಹೆಗಲ ಮೇಲಿರುತ್ತದೆ. ಆ ಭಾರವನ್ನು ಸಮರ್ಥವಾಗಿ ನಿಭಾಯಿಸಿದಾಗ ಸಮಾಜದಲ್ಲಿ ಪೊಲೀಸರ ಬಗ್ಗೆ ಇರುವ ಕೆಟ್ಟ ಭಾವನೆಗಳು ದೂರವಾಗಲು ಸಾಧ್ಯವಾಗುತ್ತದೆ.


    ಠಾಣೆಗಳಿಗೆ ಪ್ರಸಕ್ತ ದಿನಗಳಲ್ಲಿ ಬರುವ ದೂರುಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ದೂರು, ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ಧಾರಿಯನ್ನು ನಿರ್ವಹಿಸಿ ವ್ಯವಸ್ಥೆ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.


    ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ನಿರೀಕ್ಷಕ ರಾಘವ ಎಸ್. ಪಡೀಲ್ ಮಾತನಾಡಿ, ಪೊಲೀಸರು ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆ, ಕೌಶಲ್ಯ, ಜ್ಞಾನವನ್ನು ಹೊರತರುವಲ್ಲಿ ಪ್ರಯತ್ನಿಸಬೇಕು. ಪ್ರಾಮಾಣಿಕ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಾಗ ಒಂದು ದಿನ ಗೌರವಕ್ಕೆ ಪಾತ್ರರಾಗುತ್ತೇವೆ ಎಂದರು.


    ಕಾರ್ಯಕ್ರಮದಲ್ಲಿ 2022-23ನೆ ಸಾಲಿನಲ್ಲಿ ನಿವೃತ್ತರಾದ 61 ಮಂದಿ ಪೊಲೀಸ್ ಅಧಿಕಾರಿ, ಸಿಬಂದಿಯನ್ನು ಗೌರವಿಸಿ ಅಭಿನಂದಿಸಲಾಯಿತು. ಆರಂಭದಲ್ಲಿ ವಿವಿಧ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ, ಗೌರವ ವಂದನೆ ನಡೆಯಿತು.


    ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಸ್ವಾಗತಿಸಿದರು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ವರದಿ ವಾಚಿಸಿದರು. ಡಿಸಿಪಿ ದಿನೇಶ್ ಕುಮಾರ್ ವಂದಿಸಿದರು.


    ಮಂಗಳೂರು ನಗರ ಡಿಸಿಪಿ ಅಂಶುಕುಮಾರ್, ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ ಎನ್.ಎಂ. ಉಪಸ್ಥಿತರಿದ್ದರು. ಗಜೇಂದ್ರ ಜಿ.ಬಿ. ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts