More

    ಕಾವೂರಿಗೆ ಬರಲಿದೆ ನೆಮ್ಮದಿ ಕೇಂದ್ರ, ಕರ್ನಾಟಕ ಒನ್

    ಹರೀಶ್ ಮೋಟುಕಾನ ಮಂಗಳೂರು
    ಜನರ ಬೇಡಿಕೆಗೆ ಪೂರಕವಾಗಿ ಕಾವೂರು ಪೇಟೆಯಲ್ಲಿ ನೆಮ್ಮದಿ ಕೇಂದ್ರ, ಕರ್ನಾಟಕ ನ್ ಹಾಗೂ ಶೌಚಗೃಹ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ಶೀಘ್ರದಲ್ಲೇ ಗುದ್ದಲಿ ಪೂಜೆಗೆ ಸಿದ್ಧತೆ ನಡೆದಿದೆ.

    ಕಾವೂರು ವೃತ್ತ ಸಮೀಪದ ಫುಟ್‌ಪಾತ್ ಬದಿ ತರಕಾರಿ ಹಾಗೂ ಮೀನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಕಟ್ಟಡಗಳು ನಿರ್ಮಾಣವಾಗಲಿದೆ. ತರಕಾರಿ, ಮೀನು ವ್ಯಾಪಾರ ಮಾಡುತ್ತಿದ್ದವರನ್ನು ಸುಸಜ್ಜಿತವಾಗಿ ನಿರ್ಮಿಸಿರುವ ಮಾರುಕಟ್ಟೆಗೆ ತೆರಳಲು ಸೂಚಿಸಲಾಗಿದೆ. ಎರಡು ಬಾರಿ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದರೂ ಮಾರುಕಟ್ಟೆ ಪರವಾನಗಿ ಇರುವ ವ್ಯಾಪಾರಿಗಳು ಕೂಡ ಅಲ್ಲೇ ವ್ಯಾಪಾರ ಮಾಡುತ್ತಿದ್ದಾರೆ.
    ಶೌಚಗೃಹಕ್ಕೆ ಐದು ಲಕ್ಷ ರೂ. ಮೊತ್ತದ ಪ್ರಸ್ತಾವನೆ ಸಿದ್ಧಗೊಂಡಿದ್ದು, ಇತರ ಕಟ್ಟಡಗಳ ಯೋಜನಾ ವೆಚ್ಚ ತಯಾರಿಸಲಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕಾರ್ಪೊರೇಟರ್ ಲೋಹಿತ್ ಅಮೀನ್ ತಿಳಿಸಿದ್ದಾರೆ.

    ಜನರ ಬೇಡಿಕೆಗೆ ಸ್ಪಂದನೆ: ಇಲ್ಲಿ ನೆಮ್ಮದಿ ಕೇಂದ್ರ, ಕರ್ನಾಟಕ ಒನ್ ಆರಂಭಗೊಂಡರೆ ಕಾವೂರು, ಪಂಜಿಮೊಗರು, ಕುಂಜತ್‌ಬೈಲ್, ಬೋಂದೆಲ್ ಪರಿಸರದ ಜನರಿಗೆ ಉಪಯೋಗವಾಗಲಿದೆ. ನೆಮ್ಮದಿ ಕೇಂದ್ರ ಆರಂಭಿಸಲು ಜನ ಈ ಹಿಂದಿನ ಶಾಸಕರು, ಮೇಯರ್‌ಗಳಿಗೂ ಮನವಿ ಸಲ್ಲಿಸಿದ್ದರು. ಕಾವೂರು ಪೇಟೆಯಲ್ಲಿ ಸಾರ್ವಜನಿಕ ಶೌಚಗೃಹದ ಕೊರತೆ ಇತ್ತು. ಸಾವಿರಾರು ಜನ ಓಡಾಡುವ ಈ ಪ್ರದೇಶದಲ್ಲಿ ಶೌಚಗೃಹ ಅವಶ್ಯವಿತ್ತು. ಎಲ್ಲ ಕಾಮಗಾರಿಗಳು ಒಟ್ಟಿಗೆ ನಡೆಯಲಿದ್ದು, ಶೀಘ್ರದಲ್ಲಿ ಜನರ ಸೇವೆಗೆ ಲಭ್ಯವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ವ್ಯಾಪಾರಿಗಳ ವಿರೋಧ: ಸುಸಜ್ಜಿತ ಮಾರ್ಕೆಟ್ ನಿರ್ಮಾಣವಾಗಿ ವರ್ಷ ಕಳೆದರೂ ಬೆರಳೆಣಿಕೆಯ ಅಂಗಡಿಗಳಷ್ಟೇ ತೆರೆದಿವೆ. ಪರವಾನಗಿ ಇರುವ ವ್ಯಾಪಾರಿಗಳು ಅಲ್ಲಿಗೆ ಹೋಗದೆ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲಿಗೆ ಗ್ರಾಹಕರು ಬರುವುದಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ. ಮಾರುಕಟ್ಟೆಗೆ ಹೋಗುವಂತೆ ಎರಡು ಬಾರಿ ಕಾರ್ಯಾಚರಣೆ ನಡೆದಿದ್ದು, ಮೇಯರ್ ದಿವಾಕರ ಪಾಂಡೇಶ್ವರ ಸ್ಥಳಕ್ಕೆ ಆಗಮಿಸಿ, ಅಹವಾಲು ಸ್ವೀಕರಿಸಿ ಅಲ್ಲಿಂದ ತೆರಳುವಂತೆ ಎಚ್ಚರಿಕೆ ನೀಡಿದ್ದರು. ಆ ಜಾಗದಲ್ಲಿ ಬೇಲಿ ನಿರ್ಮಾಣ ಮಾಡಿ, ಅಗೆದು ಹಾಕಿದ್ದರೂ, ಕೆಲವು ವ್ಯಾಪಾರಿಗಳು ಮತ್ತೆ ಅಲ್ಲೇ ಕುಳಿತಿದ್ದಾರೆ.

    ಕಾವೂರಿನಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ನೆಮ್ಮದಿ ಕೇಂದ್ರ, ಕರ್ನಾಟಕ ಒನ್, ಶೌಚಗೃಹ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅಲ್ಲಿರುವ ಪರವಾನಗಿ ಹೊಂದಿರುವ ವ್ಯಾಪಾರಿಗಳು ಮಾರುಕಟ್ಟೆಗೆ ತೆರಳಬೇಕು.
    ಡಾ.ವೈ.ಭರತ್ ಶೆಟ್ಟಿ ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts