ಫಲಪುಷ್ಪ ಪ್ರದರ್ಶನ ಬಹುತೇಕ ರದ್ದು

1 Min Read
ಫಲಪುಷ್ಪ ಪ್ರದರ್ಶನ ಬಹುತೇಕ ರದ್ದು

ಮಂಗಳೂರು: ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಳ್ಳುತ್ತಿದ್ದ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಕರೊನಾ ಕಾರಣದಿಂದ ಈ ಬಾರಿ ಬಹುತೇಕ ರದ್ದುಗೊಳ್ಳುವ ಸಾಧ್ಯತೆಯಿದೆ. ಕಾರ್ಯಕ್ರಮ ಆಯೋಜನೆಗೆ ಸರ್ಕಾರದ ಅನುಮತಿ, ಅನುದಾನ ಸಿಗುವುದು ಕಷ್ಟ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಬೆಳಗ್ಗೆ ಮತ್ತು ಸಾಯಂಕಾಲದ ಅವಧಿಯಲ್ಲಿ ಮಾತ್ರ ಕದ್ರಿ ಪಾರ್ಕ್ ವೀಕ್ಷಣೆಗೆ ಅವಕಾಶವಿದ್ದು, ಉಳಿದ ಅವಧಿಯಲ್ಲಿ ವೀಕ್ಷಣೆಗೆ ಅವಕಾಶವಿಲ್ಲ. ಫಲಪುಷ್ಪ ಪ್ರದರ್ಶನ ಹಿನ್ನೆಲೆಯಿಂದ ನಾಲು ತಿಂಗಳ ಮೊದಲೇ ವಿವಿಧ ಪೂರ್ವ ತಯಾರಿ ಕೆಲಸಗಳು ಆರಂಭವಾಗುತ್ತದೆ. ಆದರೆ ಈ ಬಾರಿ ಇನ್ನೂ ಯಾವುದೇ ಚಟುವಟಿಕೆಗಳು ಆರಂಭವಾಗಿಲ್ಲ. ಕದ್ರಿ ಉದ್ಯಾನವನ ಸೇರಿದಂತೆ ಜಿಲ್ಲೆಯ ವಿವಿಧ ತೋಟಗಾರಿಕಾ ಕ್ಷೇತ್ರದಲ್ಲಿ ಬಗೆ ಬಗೆಯ ತರಕಾರಿ ಗಿಡಗಳನ್ನು ಬೆಳೆಸಿ, ಬೀಜಗಳನ್ನು ಸಿದ್ದಪಡಿಸಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗುತ್ತದೆ.

ಕಳೆದೆರಡು ವರ್ಷದಿಂದ ಒಂದು ರೂಪಾಯಿಗೆ ಒಂದು ತರಕಾರಿ ಸಸಿ ಕಾರ್ಯಕ್ರಮ ಹೆಚ್ಚಿನವರ ಆಕರ್ಷಣೆಯ ಕೇಂದ್ರವಾಗಿತ್ತು. ಈ ಬಾರಿಯೂ ಸಸಿಗಳನ್ನು ಕೊಳ್ಳಬೇಕು ಅಂದುಕೊಂಡವರಿಗೆ ನಿರಾಸೆ ಖಚಿತ. ಈ ಬಾರಿಯೂ ಕದ್ರಿ ಪಾರ್ಕ್‌ನಲ್ಲಿ ತರಕಾರಿ ಬೆಳೆಸಲಾಗುವುದು. ಆದರೆ ಪ್ರದರ್ಶನ ಉದ್ದೇಶಕ್ಕಾಗಿ ಅಲ್ಲ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಜಾನಕಿ ವಿ. ವಿಜಯವಾಣಿಗೆ ತಿಳಿಸಿದ್ದಾರೆ.

ಸರ್ಕಾರದ ಅನುಮತಿ ಇಲ್ಲದೆ ನಾವು ಕಾರ್ಯಕ್ರಮ ಆಯೋಜಿಸಲು ಆಗುವುದಿಲ್ಲ. ಆದ್ದರಿಂದ ಬಹುತೇಕ ಈ ಬಾರಿಯ ಫಲಪುಷ್ಪ ಪ್ರದರ್ಶನ ರದ್ದುಗೊಳ್ಳುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಮಾತ್ರವಲ್ಲದೆ ಬೇರೆ ಜಿಲ್ಲೆಗಳಲ್ಲೂ ಆಯೋಜನೆಗೆ ಅವಕಾಶ ದೊರೆಯದು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಕೆಲವೊಂದು ಸಿದ್ಧತೆ ನಡೆಯಬೇಕಿದ್ದು, ಅದ್ಯಾವುದೂ ಇನ್ನೂ ಆರಂಭವಾಗಿಲ್ಲ.
– ಎಚ್.ಆರ್.ನಾಯಕ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

See also  ಕಾಟಿಪಳ್ಳದಲ್ಲಿ ಕೊಲೆ ಯತ್ನ
Share This Article