More

    ಕಳೆಗಟ್ಟಿದ ಮಂಗಳೂರು ದಸರಾ

    ಮಂಗಳೂರು: ಈ ಬಾರಿ ಕರೊನಾ ಭೀತಿಯ ನಡುವೆಯೂ ಸಹಸ್ರಾರು ಭಕ್ತರ ಜಯಘೋಷದ ನಡುವೆ ‘ಮಂಗಳೂರು ದಸರಾ’ ತನ್ನ ಸಾಂಪ್ರದಾಯಿಕ ವಿಧಿವಿಧಾನಕ್ಕೆ ಒಂದಿನಿತೂ ಧಕ್ಕೆಯಾಗದೆ ಎಂದಿನ ಸಂಭ್ರಮೋತ್ಸಾವದೊಂದಿಗೆ ಪೂರ್ಣಗೊಂಡಿತು.
    ಕೋವಿಡ್- 19 ನಿರ್ಬಂಧ ಕಾರಣದಿಂದ ಸಂಘಟಕರು ನವದುರ್ಗೆಯರ ಟ್ಯಾಬ್ಲೊಗಳನ್ನು ದೇವಳದ ದ್ವಾರದಿಂದ ಹೊರಗೆ ಕೊಂಡೊಯ್ಯದಿರಲು ತೀರ್ಮಾನಿಸಿದ್ದು, ಸೋಮವಾರ ರಾತ್ರಿವರೆಗೂ ಭಕ್ತರಿಗೆ ದೇವಿಯರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

    ಸಂಜೆಯಿಂದಲೇ ಹಲವು ಹುಲಿವೇಷ ತಂಡಗಳಿಗೆ ದೇವಳದ ಹೊರಗೆ ಹುಲಿಕುಣಿತ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಜನರ ಆಕರ್ಷಣೆಯ ಕೇಂದ್ರವಾಗಿತ್ತು. ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯವರ ಚಿತ್ರವನ್ನು ದೇಹದ ಮೇಲೆ ಬಿಡಿಸಿಕೊಂಡ ಹುಲಿವೇಷ ಆಕರ್ಷಣೆಯಾಗಿತ್ತು. ಕುಣಿತ ಭಜನೆ ತಂಡಗಳು ದಸರಾ ಮೆರುಗು ಹೆಚ್ಚಿಸಿದವು.
    ಕೋವಿಡ್ ಭೀತಿಯಿದ್ದರೂ ಸಾವಿರಾರು ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ನವದುರ್ಗೆಯರ ಮೂರ್ತಿಗಳನ್ನು ಕಂಡು ಪುಳಕಿತರಾದರು.

    ಶ್ರೀ ಶಾರದೆಯ ಸನ್ನಿಧಾನದಲ್ಲಿ ಸೇವಾಕರ್ತರನ್ನು ಕ್ಷೇತ್ರಾಡಳಿತ ಮಂಡಳಿ ಪರವಾಗಿ ಗೌರವಿಸಲಾಯಿತು. ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಶೇಖರ್ ಪೂಜಾರಿ, ರವಿಶಂಕರ್ ಮಿಜಾರು, ಅಭಿವೃದ್ಧಿ ಸಮಿತಿಯ ವೇದಕುಮಾರ್, ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ.ಸುವರ್ಣ, ರಮಾನಾಥ ಕಾರಂದೂರು ಮತ್ತಿತರರಿದ್ದರು.

    ನಾರಾಯಣ ಗುರುಗಳ ಟ್ಯಾಬ್ಲೊ: ಈ ಬಾರಿ ಶೋಭಾಯಾತ್ರೆಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆ ಇರಿಸಲಾದ ಟ್ಯಾಬ್ಲೊ ಸಾಯಂಕಾಲ ನಗರ ಪ್ರದಕ್ಷಿಣೆ ಕೈಗೊಂಡಿತು. ಮಣ್ಣಗುಡ್ಡೆ, ಲೇಡಿಹಿಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್, ಕೆ.ಎಸ್.ರಾವ್ ರಸ್ತೆ, ಪಿ.ಎಂ.ರೋಡ್ ಮಾರ್ಗವಾಗಿ ವೆಂಕಟರಮಣ ದೇವಸ್ಥಾನಕ್ಕೆ ಬಂದು ವಿ.ಟಿ.ರೋಡ್ ಮೂಲಕ ನವಭಾರತ ವೃತ್ತ ಸೇರಿ, ನ್ಯೂಚಿತ್ರ ಸರ್ಕಲ್, ಅಳಕೆ ಮೂಲಕ ಕ್ಷೇತ್ರಕ್ಕೆ ಸೇರಿತು.

    ದೇವಸ್ಥಾನಕ್ಕೆ ಪ್ರದಕ್ಷಿಣೆ, ಬಳಿಕ ವಿಸರ್ಜನೆ
    ಸೋಮವಾರ ಬೆಳಗ್ಗೆ ಕ್ಷೇತ್ರದಲ್ಲಿ ವಾಗೀಶ್ವರಿ ದುರ್ಗಾ ಹೋಮ, ಮಧ್ಯಾಹ್ನ ಶಿವಪೂಜೆ, ಬಳಿಕ ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ನೆರವೇರಿತು. ಮಂಗಳೂರು ದಸರಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ದೇವರ ವಿಸರ್ಜನಾ ಪೂಜೆ ಸಾಯಂಕಾಲ ಜರುಗಿತು. ಬಳಿಕ ಗಣಪತಿ, ನವದುರ್ಗೆ, ಆದಿಶಕ್ತಿ ಹಾಗೂ ಶಾರದಾಮಾತೆಯ ಮೂರ್ತಿಗಳನ್ನು ಒಂದೊಂದಾಗಿ ಹೊರತಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿದ ಬಳಿಕ ಕ್ಷೇತ್ರದ ಪುಷ್ಕರಿಣಿಯಲ್ಲಿ ವಿಸರ್ಜಿಸಲಾಯಿತು.

    ಕಟೀಲಿನಲ್ಲಿ ಮಹಾರಂಗಪೂಜೆ, ಚಂಡಿಕಾ ಹೋಮ
    ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಮಹಾನವಮಿ ಹಾಗೂ ಸೋಮವಾರ ವಿಜಯದಶಮಿಯ ಎರಡೂ ದಿನದಲ್ಲಿ ಸುಮಾರು 8 ಸಾವಿರ ಹೂವಿನ ಪೂಜೆ, 150 ಮಕ್ಕಳ ಅಕ್ಷರಾಭ್ಯಾಸ, ಸಾವಿರದಷ್ಟು ವಾಹನಗಳ ಪೂಜೆ ನಡೆಯಿತು.
    ಭಾನುವಾರ 25 ಸಾವಿರಕ್ಕೂ ಮಿಕ್ಕಿ ಭಕ್ತರು ಭೇಟಿ ನೀಡಿದರು. ಸೋಮವಾರ ಈ ಸಂಖ್ಯೆ ಕಡಿಮೆಯಾಗಿತ್ತು. ಮಹಾನವಮಿಯಂದು 500ಕ್ಕೂ ಅಧಿಕ ಆರತಿಗಳಿಂದ ಎರಡು ಗಂಟೆಗಳ ಕಾಲ ಮಹಾರಂಗಪೂಜೆ ನಡೆಯಿತು. ಚಂಡಿಕಾ ಹೋಮ ಇತ್ಯಾದಿ ಸೇವೆಗಳಲ್ಲಿ ಭಕ್ತರು ಪಾಲ್ಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts