More

    ಮನಪಾ ವಾರ್ಡ್ ಸಮಿತಿಗೆ ವಿಘ್ನ

    ಹರೀಶ್ ಮೋಟುಕಾನ ಮಂಗಳೂರು

    ನಾಗರಿಕರ ಬಹುಕಾಲದ ಬೇಡಿಕೆಯಾದ ನಾಗರಿಕ ಸಮಿತಿ ಅಂದರೆ ವಾರ್ಡ್ ಸಮಿತಿ ರಚನೆಗೆ ಮಹಾನಗರ ಪಾಲಿಕೆಯಿಂದ ಅನುಮೋದನೆ ದೊರಕಿ ತಿಂಗಳು ಕಳೆದರೂ ಯಾವುದೇ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
    ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಪಾರದರ್ಶಕ ಆಡಳಿತ ನೀಡುವ ಸಲುವಾಗಿ ವಾರ್ಡ್ ಸಮಿತಿ ರಚಿಸಬೇಕು ಎಂಬುದು ನಾಗರಿಕರ ಹಲವು ವರ್ಷಗಳ ಬೇಡಿಕೆಯಾಗಿದೆ. ಹೈಕೋರ್ಟ್ ಕೂಡಾ ವಾರ್ಡ್ ಸಮಿತಿ ರಚಿಸುವುದು ಕಡ್ಡಾಯ ಎಂದು ಹೇಳಿದೆ. ವಾರ್ಡ್ ಸಮಿತಿ ರಚನೆಯಾದ ಬಳಿಕ ಪಾಲಿಕೆ ಅಭಿವೃದ್ಧಿಯಲ್ಲಿ ಜನರ ನೇರ ಸಹಭಾಗಿತ್ವಕ್ಕೆ ಅವಕಾಶ ದೊರೆಯಲಿದೆ.

    ಬೆಂಗಳೂರು ಮುಂತಾದೆಡೆ ಈಗಾಗಲೇ ವಾರ್ಡ್ ಸಮಿತಿ ಅಸ್ತಿತ್ವದಲ್ಲಿದೆ. ಅಲ್ಲಿ ಕಾರ್ಪೊರೇಟರ್‌ಗಳು ಅವರಿಗೆ ಬೇಕಾದ ಜನರನ್ನೇ ಆಯ್ಕೆ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಪಾರದರ್ಶಕ ಆಡಳಿತ ನಿರೀಕ್ಷಿಸುವುದು ಅಸಾಧ್ಯ. ಜನರೇ ಆಯ್ಕೆ ಮಾಡುವ ಅನುಭವಿಗಳು, ಯುವಕರು ವಾರ್ಡ್ ಸಮಿತಿಯ ಸದಸ್ಯರಾಗಬೇಕು ಎನ್ನುವುದು ಇದಕ್ಕೆ ಹೋರಾಡುತ್ತಿರುವ ನಾಗರಿಕರ ವಾದ.

    ಏನಿದು ವಾರ್ಡ್ ಸಮಿತಿ?
    ಇದು ನಗರಪಾಲಿಕೆಯ ಪ್ರತಿ ವಾರ್ಡ್‌ನ ಹಿತ ರಕ್ಷಣೆಗಾಗಿ ಇರುವ ಸಮಿತಿ. ಕಳಪೆ ಕಾಮಗಾರಿಗೆ ಕಡಿವಾಣ, ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಆಡಳಿತದಲ್ಲಿ ಜನತೆಯ ಸಹಭಾಗಿತ್ವ ಇದರ ಉದ್ದೇಶ. ಪ್ರತಿ ಸಮಿತಿಯಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿ, ಇಬ್ಬರು ಸರ್ಕಾರೇತರ ಸಂಸ್ಥೆಯ ಸದಸ್ಯರು ಸೇರಿದಂತೆ ಒಟ್ಟು 7 ಮಂದಿ ಸದಸ್ಯರು. ವಾರ್ಡ್‌ನ ಜನರಿಂದಲೇ ಅನುಮೋದಿತ ವ್ಯಕ್ತಿಗಳು ಸಮಿತಿ ಸದಸ್ಯರಾಗುತ್ತಾರೆ. ಕಾರ್ಪೋರೇಟರ್‌ಗಳು ರಾಜಕೀಯ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಪ್ರತಿನಿಧಿಗಳು. ಆದರೆ ವಾರ್ಡ್ ಸಮಿತಿ ಸದಸ್ಯರು ರಾಜಕೀಯ ರಹಿತವಾಗಿ, ಸೇವಾ ಮನೋಭಾವನೆಯಿಂದ ಕೂಡಿದವರಾಗಿರಬೇಕು. ಕಾರ್ಪೋರೇಟರ್ ಗೌರವ ಅಧ್ಯಕ್ಷತೆಯಲ್ಲಿ ವಾರ್ಡ್‌ನ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ವಾರ್ಡ್ ಸಮಿತಿ ಕೆಲಸ.

    ವಾರ್ಡ್ ಸಮಿತಿ ಅಧಿಕಾರ
    ಪ್ರತಿಯೊಂದು ವಾರ್ಡ್‌ನ ಜನರು ತಾವು ಆಯ್ಕೆ ಮಾಡುವ ಪ್ರತಿನಿಧಿಯ(ಕಾರ್ಪೊರೇಟರ್) ಕಾರ್ಯವೈಖರಿ ಮೇಲೆ ನೇರವಾಗಿ ಪ್ರಭಾವ ಬೀರಲು ವಾರ್ಡ್ ಸಮಿತಿ ನೆರವಾಗುತ್ತದೆ. ಕಾರ್ಪೊರೇಟರ್ ಅಥವಾ ಆ ವಾರ್ಡ್ ಸದಸ್ಯ ತನ್ನ ಇಚ್ಛಾನುಸಾರ, ಅನಗತ್ಯವೆನಿಸುವ ಕಾಮಗಾರಿ ಮಾಡಿಸುವುದನ್ನು ತಡೆಯುವ ಅಧಿಕಾರ ವಾರ್ಡ್ ಸಮಿತಿಗಿರುತ್ತದೆ. ಈಗ ತ್ಯಾಜ್ಯ ನಿರ್ವಹಣೆಯಾಗದಿದ್ದರೆ, ನೀರು ಬರದಿದ್ದರೆ, ಕಾಮಗಾರಿ ಕಳಪೆಯಾಗಿದ್ದರೆ ಯಾರೂ ಕೇಳುವವರಿಲ್ಲ.ಅದೇ ವಾರ್ಡ್ ಸಮಿತಿ ರಚನೆಯಾದರೆ ಆಯಾ ವಾರ್ಡ್‌ಗಳಲ್ಲಿ ನಡೆಯುವ ಕಾಮಗಾರಿಗಳ ಮೇಲ್ವಿಚಾರಣೆಯನ್ನು ಸಮಿತಿ ನಡೆಸಲಿದೆ. ಇದು ಕಾರ್ಪೋರೇಟರ್‌ಗಳಿಗೆ ಇಷ್ಟವಿಲ್ಲದ ಕಾರಣ ವಾರ್ಡ್ ಸಮಿತಿ ರಚನೆಗೆ ಅವರು ಅಸಹಕಾರ ನೀಡುತ್ತಾ ಬಂದಿದ್ದಾರೆ.

    ವಾರ್ಡ್ ಸಮಿತಿ ರಚನೆಯಾಗಬೇಕೆಂಬುದು ನಮ್ಮ ಹಲವು ವರ್ಷಗಳ ಬೇಡಿಕೆ. ಇದೀಗ ಸಮಿತಿ ರಚನೆಗೆ ಅನುಮೋದನೆ ಸಿಕ್ಕಿದೆ. ವಿಳಂಬ ಮಾಡದೆ ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಬೇಕು. ಪ್ರತಿ ವಾರ್ಡ್‌ನಲ್ಲಿಯೂ ಕಾರ್ಪೊರೇಟರ್‌ಗಳು ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡದೆ ಜನತೆಯೇ ಆಯ್ಕೆ ಮಾಡುವಂತಾಗಬೇಕು.
    ಪದ್ಮನಾಭ ಉಳ್ಳಾಲ್, ಎಂಸಿಸಿ ಸಿವಿಕ್ ಗ್ರೂಪ್

    ವಾರ್ಡ್ ಸಮಿತಿ ರಚನೆಗೆ ಪರಿಷತ್‌ನ ಕಳೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಂದಿನ ತಿಂಗಳಿನಿಂದ ಪ್ರಕ್ರಿಯೆ ಆರಂಭಗೊಳ್ಳಲಿದೆ. ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಆಯುಕ್ತರ ಜತೆ ಸಭೆ ನಡೆಸಿ, ಕಾನೂನು ಪ್ರಕಾರವಾಗಿ ವಾರ್ಡ್ ಸಮಿತಿ ರಚನೆ ಮಾಡಲಾಗುವುದು.
    ದಿವಾಕರ ಪಾಂಡೇಶ್ವರ, ಮೇಯರ್ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts