More

    ತಡೆಗೋಡೆ ಕುಸಿದು ಇಬ್ಬರು ಮೃತ್ಯು

    ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಕರಂಗಲ್ಪಾಡಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ದರೆಗೆ ತಡೆಗೋಡೆ ಕಟ್ಟುತ್ತಿದ್ದಾಗ ಶುಕ್ರವಾರ ಮಧ್ಯಾಹ್ನ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕೊಪ್ಪಳದ ಮುದ್ಲಾಪುರ ನಿವಾಸಿ ಭೀಮೇಶ್(30) ಹಾಗೂ ಪಶ್ಚಿಮಬಂಗಾಳ ಮೂಲದ ಮಸ್ರಿಗುಲ್(25) ಮೃತರು. ಮಣ್ಣಿನಡಿ ಸಿಲುಕಿದ್ದ ಇನ್ನೋರ್ವ ಕಾರ್ಮಿಕ ಪಶ್ಚಿಮ ಬಂಗಾಳದ ಅನಿಗುಲ್(25) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜತೆಗೆ ಕೆಲಸ ಮಾಡುತ್ತಿದ್ದ ಇತರ ನಾಲ್ವರು ಗಾಯವಿಲ್ಲದೆ ಪಾರಾಗಿದ್ದಾರೆ.

    ಘಟನೆ ವಿವರ: ಏಳು ಕಾರ್ಮಿಕರು ತಡೆಗೋಡೆ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿದ್ದಾಗ ಮೇಲಿನಿಂದ ದರೆ ಏಕಾಏಕಿ ಕುಸಿದಿದ್ದು, ನಾಲ್ವರು ತಪ್ಪಿಸಿಕೊಂಡಿದ್ದರು. ಮಣ್ಣಿನಡಿ ಸಿಲುಕಿದ ಮೂವರ ಪೈಕಿ ಓರ್ವನನ್ನು ಹೊರಗೆಳೆದು ಪಾರು ಮಾಡಲಾಯಿತು. ಉಳಿದಿಬ್ಬರನ್ನು ಅಗ್ನಿಶಾಮಕದಳ ಆಗಮಿಸಿ ಕಾರ್ಯಾಚರಣೆ ನಡೆಸಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ.
    ಘಟನಾ ಸ್ಥಳಕ್ಕೆ ಪಾಲಿಕೆ ನೂತನ ಮೇಯರ್ ದಿವಾಕರ್, ಉಪ ಮೇಯರ್ ವೇದಾವತಿ, ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ನಗರ ಪೊಲೀಸ್ ಕಮಿಷನರ್ ಡಾ.ಹರ್ಷ, ಕಾರ್ಮಿಕ ಇಲಾಖೆ ಅಧಿಕಾರಿ ವಿಲ್ಮಾ, ನಗರ ಪಾಲಿಕೆ ಜಂಟಿ ನಿರ್ದೇಶಕ ಜಯರಾಜ್, ನಗರ ಯೋಜನಾಧಿಕಾರಿ ಬಾಲಕೃಷ್ಣ ಮತ್ತಿತರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

    ಊಟಕ್ಕೆ ಹೊರಟಿದ್ದರು: ನಗರದ ಉದ್ಯಮಿಯೊಬ್ಬರ ತ್ರಿಸ್ಟಾರ್ ಹೋಟೆಲ್‌ನ 6 ಅಂತಸ್ತಿನ ಕಟ್ಟಡದ ನಿರ್ಮಾಣ ಕಾಮಗಾರಿ ಇದಾಗಿದೆ. ನಾಲ್ಕೈದು ತಿಂಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ 50ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಟ್ಟಡದ ಎರಡು ಪಾರ್ಶ್ವಗಳಲ್ಲಿ ತಡೆಗೋಡೆ ಕಾಮಗಾರಿ ಮುಕ್ತಾಯಗೊಂಡಿತ್ತು. ಹಿಂಭಾಗದಲ್ಲಿ ಮಾತ್ರ ಕಾಮಗಾರಿ ಅರ್ಧದಷ್ಟು ಆಗಿದ್ದು, ಉಳಿದರ್ಧ ಕಾಮಗಾರಿ ನಡೆಯುತ್ತಿತ್ತು. ಕಾರ್ಮಿಕರು ಕೆಲಸ ಮುಗಿಸಿ 5 ನಿಮಿಷದಲ್ಲಿ ಊಟಕ್ಕೆ ಹೊರಡುವವರಿದ್ದರು. ಆದರೆ ತಡೆಗೋಡೆ ಕಾಮಗಾರಿ ಕೈಗೆತ್ತಿಕೊಂಡದ್ದನ್ನು ಪೂರ್ತಿಗೊಳಿಸಿ ವಿಶ್ರಾಂತಿಗೆ ತೆರಳಲು ನಿರ್ಧರಿಸಿದ್ದರು. ಅಷ್ಟರಲ್ಲೇ ಅವಘಡ ಸಂಭವಿಸಿದೆ. 15 ನಿಮಿಷ ಮೊದಲೇ ಮಣ್ಣು ಕುಸಿಯುತ್ತಿದ್ದರೆ ಹಲವು ಮಂದಿ ಮಣ್ಣಿನಡಿ ಸಿಲುಕುವ ಸಾಧ್ಯತೆ ಇತ್ತು. ಅವರೆಲ್ಲ ಕೆಲಸ ನಿಲ್ಲಿಸಿ ಊಟಕ್ಕೆ ತೆರಳಿದ್ದರು.

    ದರೆ ಮತ್ತಷ್ಟು ಕುಸಿಯುವ ಭೀತಿ: ದರೆ ಕುಸಿದಿರು ಸ್ಥಳದಲ್ಲಿ ಮತ್ತಷ್ಟು ಕುಸಿತ ಭೀತಿ ಎದುರಾಗಿದೆ. ಜೇಡಿ ಮಣ್ಣು ಕಂಡು ಬಂದಿದ್ದು, ಸಹಜವಾಗಿ ಕಾಮಗಾರಿಯ ವೇಗ ಹಾಗೂ ಕಂಪನಕ್ಕೆ ಕುಸಿದಿರಬಹುದು ಎಂದು ಹೇಳಲಾಗುತ್ತಿದೆ. ಕುಸಿದ ಭಾಗದಲ್ಲಿ ಆರು ಅಡಿ ಆಳಕ್ಕೆ ಮಣ್ಣು ಜರಿದಿದೆ. ಅದರಡಿ ಸಿಲುಕಿದ ಕಾರ್ಮಿಕರನ್ನು ಜೆಸಿಬಿ ಬಳಸಿ ಅಗ್ನಿಶಾಮಕ ಸಿಬ್ಬಂದಿ ಪತ್ತೆ ಮಾಡಿದ್ದರು. ಇದೇ ವೇಳೆ ವಿದ್ಯುತ್ ಕಂಬ ಕೂಡ ಬಿದ್ದಿದೆ. ಒಳಚರಂಡಿಯ ಪೈಪ್ ಒಡೆದು ಕೊಳಚೆ ನೀರು ಹರಿಯುತ್ತಿದೆ. ಭೂಗತ ಕೇಬಲ್‌ಗಳಿಗೂ ಹಾನಿಯಾಗಿದೆ. ಸಮೀಪವೇ ಇನ್ನೊಂದು ವಾಣಿಜ್ಯ ಕಟ್ಟಡ ಇದ್ದು, ಅದೂ ಅಪಾಯಕ್ಕೆ ಸಿಲುಕಿದೆ. ಮಳೆಗಾಲದಲ್ಲಿ ಮತ್ತಷ್ಟು ಭೀತಿ ಇದೆ ಎನ್ನುತ್ತಾರೆ ಸ್ಥಳೀಯರು.

    ಶಾಲಾ ಆಟದ ಮೈದಾನಕ್ಕೂ ತೊಂದರೆ: ಈ ಕಟ್ಟಡದ ಹಿಂಭಾಗದಲ್ಲಿ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆ ಇದೆ. ಆಟದ ಮೈದಾನದ ಕಂಪೌಂಡ್‌ಗೆ ಈ ಕಟ್ಟಡದ ತಡೆಗೋಡೆ ತಾಗಿಕೊಂಡಿದೆ. ತಡೆಗೋಡೆ ಕಟ್ಟಿದರೂ ಕುಸಿದರೆ ಮಕ್ಕಳಿಗೂ ತೊಂದರೆಯಾಗಬಹುದು.

    ಸೆಟ್‌ಬ್ಯಾಕ್ ಇಲ್ಲ?: ಬಹುಮಹಡಿ ಕಟ್ಟಡ ನಿರ್ಮಾಣ ವೇಳೆ ನಿಯಮಾನುಸಾರ ಸೆಟ್‌ಬ್ಯಾಕ್ ಬಿಡಬೇಕು. ಆದರೆ ಈ ಕಟ್ಟಡ ಸುತ್ತ ಅಂತಹ ಜಾಗ ಇಲ್ಲ. ಇದ್ದರೂ ಅದು ನಿಯಮಾನುಸಾರ ಇಲ್ಲ. ಸೆಟ್‌ಬ್ಯಾಕ್ ಇಲ್ಲದೆ ಕಟ್ಟಡ ನಿರ್ಮಿಸಿದಾಗ ಅನಾಹುತ ನಡೆದರೆ ಕಾರ್ಯಾಚರಣೆಗೆ ಅಡಚಣೆಯಾಗುತ್ತದೆ. ಇಲ್ಲಿ ಕಟ್ಟಡ ನಿರ್ಮಾಣ ನಿಯಮಗಳನ್ನು ಪಾಲಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

    ಒಂದೂವರೆ ಗಂಟೆ ಕಾರ್ಯಾಚರಣೆ: ದರೆ ಕುಸಿತ ಘಟನೆ ಮಧ್ಯಾಹ್ನ 1 ಗಂಟೆಗೆ ಸಂಭವಿಸಿದ್ದು, 15 ನಿಮಿಷ ಯಾರ ಗಮನಕ್ಕೂ ಬಂದಿರಲಿಲ್ಲ. ಬಳಿಕ ಅಲ್ಲಿದ್ದವರು ಕೂಗಿಕೊಂಡಾಗ ಜನ ಸೇರಿದ್ದು, ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಸ್ಥಳದಲ್ಲಿ ಜೆಸಿಬಿ ಇದ್ದುದರಿಂದ ಅದರ ಮೂಲಕ ಕುಸಿದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿ, 3 ಗಂಟೆಗೆ ಮುಕ್ತಾಯಗೊಳಿಸಲಾಯಿತು. ಮಣ್ಣಿನಡಿ ಸಿಲುಕಿದ ಇಬ್ಬರನ್ನು ಹೊರತೆಗೆಯಲು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಬೇಕಾಯಿತು. ಈ ಸಂದರ್ಭ ಪಿವಿಎಸ್-ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಪೊಲೀಸರು ಸಾರ್ವಜನಿಕರನ್ನು ಚದುರಿಸಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

    ಎಲ್ಲ ನಿರ್ಮಾಣ ಕಾಮಗಾರಿಗಳಿಗೆ ನೋಟಿಸ್
    ಘಟನೆ ಬಳಿಕ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈಗ ನಗರದ ಎಲ್ಲ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನೋಟಿಸ್ ಜಾರಿಗೊಳಿಸಿ, ತಡೆಗೋಡೆ ನಿರ್ಮಾಣ ಆದ ಬಳಿಕವಷ್ಟೇ ಕಾಮಗಾರಿ ಮುಂದುವರಿಸಬೇಕು ಎಂದು ಸ್ಥಳದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಸೂಚನೆ ನೀಡಿದ್ದಾರೆ.
    ಪಾಲಿಕೆ ಅಧಿಕಾರಿಗಳು ಪರವಾನಗಿ ನೀಡುತ್ತಾರೆ. ಕಾಮಗಾರಿ ವೇಳೆ ಸುರಕ್ಷಾ ವಿಧಾನ ತಪಾಸಣೆ ನಡೆಸುತ್ತಿಲ್ಲ. ಕಾಮಗಾರಿ ಸ್ಥಳದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ, ಅಪಾಯವಿದೆಯೇ ಎಂಬುದನ್ನು ಪಾಲಿಕೆ ಇಂಜಿನಿಯರ್‌ಗಳು ಖುದ್ದು ಪರಿಶೀಲಿಸಿದ ಬಳಿಕವೇ ಅವಕಾಶ ನೀಡಬೇಕು. ದುರಂತಗಳು ಸಂಭವಿಸಿದರೆ ಆಯಾ ಇಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಪರಿಶೀಲಿಸಿ ವರದಿ ಸಲ್ಲಿಸಿ
    ಘಟನೆ ಹಿನ್ನೆಲೆಯಲ್ಲಿ ಸಮಗ್ರ ವರದಿ ನೀಡುವಂತೆ ಕಾರ್ಮಿಕ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಸೂಚನೆ ನೀಡಿದ್ದಾರೆ. ಕಟ್ಟಡ ನಿರ್ಮಾಣ ನಿಯಮಾನುಸಾರ ನಡೆಯುತ್ತಿದೆಯೇ ಎಂಬ ಅಂಶವನ್ನು ಕೂಲಂಕಷ ಪರಿಶೀಲನೆ ನಡೆಸಿ ವರದಿ ನೀಡಬೇಕು. ಕಾರ್ಮಿಕರ ಜೀವನಭದ್ರತೆ ಬಗ್ಗೆ ನಿರ್ದಿಷ್ಟ ರೂಪುರೇಷೆ ಸಿದ್ಧಪಡಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಸೂಚಿಸಿದ್ದಾರೆ.

    ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
    ಮೃತರ ಕುಟುಂಬಿಕರಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕಟ್ಟಡ ಕಾಮಗಾರಿ ವೇಳೆ ಭೂ ಕುಸಿತದಿಂದ ಇಬ್ಬರು ಮೃತಪಟ್ಟಿರುವುದು ದುಃಖದ ವಿಷಯ. ಘಟನೆ ಬಗ್ಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರಿಗೆ ಇಲಾಖೆಯಿಂದ ಚಿಕಿತ್ಸಾ ವೆಚ್ಚ ಒದಗಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿವರಾವ ಹೆಬ್ಬಾರ್ ೇಸ್‌ಬುಕ್ ಸಂದೇಶದಲ್ಲಿ ತಿಳಿಸಿದ್ದಾರೆ.

    ಭೀಮೇಶ್ ಕಠಿಣ ಪರಿಶ್ರಮಿ
    ಮೃತ ಭೀಮೇಶ್ ಕೊಪ್ಪಳ ಜಿಲ್ಲೆಯ ಮುದ್ಲಾಪುರ ಗ್ರಾಮದ ನಿವಾಸಿ. ಕಠಿಣ ಪರಿಶ್ರಮಿಯಾಗಿದ್ದರು. ವರ್ಷದ ಹಿಂದೆ ಕುಟುಂಬ ಸಮೇತ ಮಂಗಳೂರಿಗೆ ಆಗಮಿಸಿದ್ದರು. ಕದ್ರಿ ಶಿವಭಾಗ್‌ನಲ್ಲಿ ವಾಸವಿದ್ದರು. ಪತ್ನಿ ವಾಚ್‌ಮೆನ್ ಕೆಲಸ ಮಾಡುತ್ತಿದ್ದು, ಭೀಮೇಶ್ ಬೆಳಗ್ಗೆ ಕದ್ರಿ ರಸ್ತೆಯಲ್ಲಿ ಮನೆ ಮನೆಗೆ ಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದರು. ಬಳಿಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ಖಾಸಗಿ ಆಸ್ಪತ್ರೆಯಲ್ಲಿ ಭೀಮೇಶ್ ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃತದೇಹವನ್ನು ರಾತ್ರಿಯೇ ಊರಿಗೆ ಕೊಂಡೊಯ್ಯಲಾಗಿದೆ.

    ಬಡಪಾಯಿಗಳೇ ಬಲಿಪಶು
    ನಗರದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳಲ್ಲಿ ದುಡಿಯುತ್ತಿರುವವರು ಶೇ.80 ಮಂದಿ ಉತ್ತರ ಕರ್ನಾಟಕ, ಉತ್ತರ ಭಾರತದವರು. ಸೆಂಟ್ರಿಂಗ್, ಗಾರೆ ಸೇರಿದಂತೆ ಕಠಿಣ ಕೆಲಸ ಮಾಡುತ್ತಿದ್ದಾರೆ. ಆದರೆ ಇಂಜಿನಿಯರ್, ಬಿಲ್ಡರ್‌ಗಳ ನಿರ್ಲಕ್ಷೃದಿಂದ ಬಡಪಾಯಿಗಳು ಬಲಿಪಶುಗಳಾಗುತ್ತಿದ್ದಾರೆ. ಇವರಲ್ಲಿ ಬಹುತೇಕ ಮಂದಿ ವಲಸಿಗರಾಗಿ ದುಡಿಯುವುದರಿಂದ ಅವರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಕೂಡಾ ಮಾಡಿರುವುದಿಲ್ಲ. ಆದುದರಿಂದ ಅವರಿಗೆ 50 ಸಾವಿರಕ್ಕಿಂತ ಹೆಚ್ಚು ಪರಿಹಾರ ನೀಡುವಂತಿಲ್ಲ. ಒಂದು ವೇಳೆ ನೋಂದಣಿಯಾಗಿದ್ದರೆ 2 ಲಕ್ಷ ರೂ. ಪರಿಹಾರ ನೀಡಬಹುದಾಗಿದೆ ಎನ್ನುತ್ತಾರೆ ಕಾರ್ಮಿಕ ಇಲಾಖೆ ಅಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts