More

    ಬಳ್ಳಾರಿ ಜಿಲ್ಲೆಯಲ್ಲಿ ಹಾಲಿಗಳಿಗೆ ಮಣೆ ಹಾಕಿದ ಕಾಂಗ್ರೆಸ್ – ಇನ್ನೆರಡು ಕ್ಷೇತ್ರದಲ್ಲಿ ಹೆಚ್ಚಿದ ಕಾತರ

    ಹೀರಾನಾಯ್ಕ ಟಿ. ಬಳ್ಳಾರಿ
    ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಐದು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಜಿಲ್ಲೆಯ ಎಸ್‌ಟಿ ಮೀಸಲು ಕ್ಷೇತ್ರಗಳಾದ ಬಳ್ಳಾರಿ ಗ್ರಾಮೀಣ, ಕಂಪ್ಲಿ ಹಾಗೂ ಸಂಡೂರಿನಿಂದ ಹಾಲಿ ಶಾಸಕರಿಗೆ ಕೈ ಮಣೆ ಹಾಕಿದ್ದು, ಬಳ್ಳಾರಿ ನಗರ ಹಾಗೂ ಸಿರಗುಪ್ಪ ಕ್ಷೇತ್ರದಿಂದ ಇನ್ನು ಟಿಕೆಟ್ ಫೈನಲ್ ಆಗಿಲ್ಲ. ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಯಾರಿಗೆ ಸಿಗಲಿದೆ ಎನ್ನುವುದು ಕ್ಷೇತ್ರದ ಜನರಲ್ಲಿ ಕಾತರ ಹೆಚ್ಚಿಸಿದೆ. ಒಟ್ಟು ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರ ಕಾಂಗ್ರೆಸ್ ತನ್ನದಾಗಿಸಿಕೊಂಡಿದ್ದರೆ, ಇನ್ನೆರಡು ಕ್ಷೇತ್ರದಲ್ಲಿ ಕಮಲ ಅರಳಿದೆ. ಈ ಬಾರಿಯ ಚುನಾವಣೆ ಜಿದ್ದಾಜಿದ್ದಿಯ ರಣಕಣವಾಗಿ ಏರ್ಪಡಲಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಹಾಲಿಗಳಿಗೆ ಮಣೆ ಹಾಕಿದ ಕಾಂಗ್ರೆಸ್ - ಇನ್ನೆರಡು ಕ್ಷೇತ್ರದಲ್ಲಿ ಹೆಚ್ಚಿದ ಕಾತರ
    ಜೆ.ಎನ್.ಗಣೇಶ್

    ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಹಾಲಿ ಶಾಸಕ ಬಿ.ನಾಗೇಂದ್ರ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿದೆ. 2008ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿಯಿಂದ ನಾಗೇಂದ್ರ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಿದ್ದರು. 2013ರಲ್ಲಿ ಕಾಂಗ್ರೆಸ್‌ನಿಂದ ಪ್ರತಿನಿಧಿಸಿದ ನಾಗೇಂದ್ರ ಮತ್ತೊಮ್ಮೆ ಶಾಸರಾಗಿದ್ದರು. 2018ರ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ ಅವರು, 2,696 ಮತಗಳ ಅಂತರದಿಂದ ಬಿಜೆಪಿಯ ಸಣ್ಣ ಫಕೀರಪ್ಪ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಸತತ ಮೂರು ಬಾರಿ ಗೆದ್ದಿರುವ ನಾಗೇಂದ್ರ ಈ ಬಾರಿ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ ಬಿಜೆಪಿಯಿಂದ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಆಪ್ತಮಿತ್ರರ ಕಾಳಗದಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸುವುದರಲ್ಲಿ ಸಂಶಯ ಇಲ್ಲ.

    ಕಂಪ್ಲಿ ಕ್ಷೇತ್ರದಿಂದ ಹಾಲಿ ಶಾಸಕ ಜೆ.ಎನ್.ಗಣೇಶ್ 2018ರಲ್ಲಿ 5,837 ಮತಗಳಿಂದ ಬಿಜೆಪಿಯ ಟಿ.ಎಚ್.ಸುರೇಶಬಾಬು ವಿರುದ್ಧ ಜಯ ಸಾಧಿಸಿದ್ದರು. ಈ ಬಾರಿ ಕಂಪ್ಲಿಯಲ್ಲಿ ಯಾರು ಕಂಪುಸೂಸುವರೋ ನೋಡಬೇಕಿದೆ. ಹ್ಯಾಟ್ರಿಕ್ ಹೀರೋ ಎನಿಸಿರುವ ಈ.ತುಕಾರಾಮ್ ಸಂಡೂರು ಕ್ಷೇತ್ರದಿಂದ ಸತತ ಮೂರು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ ಚುನಾವಣೆಯಲ್ಲಿ 14,010 ಮತಗಳ ಅಂತರದಿಂದ ಬಿಜೆಪಿಯ ಡಿ.ರಾಘವೇಂದ್ರ ಅವರನ್ನು ಸೋಲಿಸಿದ್ದರು. ಈ ಬಾರಿ ಗಣಿ ತವರೂರು ಸಂಡೂರಿನಿಂದ ಮತ್ತೆ ಯಾರು ಗೆಲ್ಲುತ್ತಾರೆ? ಎನ್ನುವುದು ಕುತೂಹಲ.

    ಬಳ್ಳಾರಿ ಜಿಲ್ಲೆಯಲ್ಲಿ ಹಾಲಿಗಳಿಗೆ ಮಣೆ ಹಾಕಿದ ಕಾಂಗ್ರೆಸ್ - ಇನ್ನೆರಡು ಕ್ಷೇತ್ರದಲ್ಲಿ ಹೆಚ್ಚಿದ ಕಾತರ
    ಈ.ತುಕಾರಾಮ್

    ಕಗ್ಗಂಟಾದ ಬಳ್ಳಾರಿ ನಗರ, ಸಿರಗುಪ್ಪ ಕ್ಷೇತ್ರ
    ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಕಗ್ಗಂಟಾಗಿ ಪರಿಣಮಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಅಲ್ಲಂ ವೀರಭದ್ರಪ್ಪ, ಅಲ್ಲಂ ಪ್ರಶಾಂತ್, ನಾರಾ ಭರತ್‌ರೆಡ್ಡಿ, ಅನಿಲ್‌ಲಾಡ್, ಆಂಜನೇಯಲು ಜೆ.ಎಸ್., ದಿವಾಕರ ಬಾಬು ರೇಸ್‌ನಲ್ಲಿದ್ದು, ಯಾರಿಗೆ ಟಿಕೆಟ್ ನೀಡಬೇಕೆನ್ನುವುದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಸಿರಗುಪ್ಪದಿಂದ ಕಾಂಗ್ರೆಸ್‌ನ ಬಿ.ಎಂ.ನಾಗರಾಜ್, ಬಿ.ಮುರಳಿಕೃಷ್ಣ, ಎಸ್.ನರೇಂದ್ರ ಸಿಂಹ, ಪಿ.ಈರಣ್ಣ ಆಕಾಂಕ್ಷಿಗಳಾಗಿದ್ದು, ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದು ಗೊಂದಲ ಮೂಡಿಸಿದೆ. ಕಳೆದ 2018ರ ಚುನಾವಣೆಯಲ್ಲಿ ಬಿ.ಮುರಳಿಕೃಷ್ಣ ಅವರು ಬಿಜೆಪಿ ಹಾಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿರುದ್ಧ ಸೋಲು ಕಂಡಿದ್ದರು.

    ಬಂಡಾಯದ ಬಿಸಿ ಸಾಧ್ಯತೆ?
    ಕಾಂಗ್ರೆಸ್‌ನಲ್ಲಿ ಟಿಕೆಟ್ ಘೋಷಣೆ ಬೆನ್ನಲ್ಲೇ ಬಂಡಾಯದ ಬಿಸಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ. ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಗೆ ಟಿಕೆಟ್ ನೀಡಿರುವುದರಿಂದ ಗಂಗಾವತಿಯ ರಾಜುನಾಯಕ ಹಾಗೂ ಬಿ.ನಾರಾಯಣಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ರಾಜುನಾಯಕ ಪಕ್ಷೇತರವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಾರಾಯಣಪ್ಪ ಅವರು ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಸಿರಗುಪ್ಪದಲ್ಲಿ ಬಿ.ಎಂ.ನಾಗರಾಜ್, ಬಿ.ಮುರಳಿಕೃಷ್ಣ, ಎಸ್.ನರೇಂದ್ರ ಸಿಂಹ ಮೂವರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಬೂದಿಮುಚ್ಚಿದ ಕೆಂಡದಂತೆ ಅಸಮಾಧಾನ ವ್ಯಕ್ತವಾಗಲಿದೆ. ಬಳ್ಳಾರಿ ಕ್ಷೇತ್ರದಲ್ಲೂ ಬಂಡಾಯದ ಬಿಸಿ ತಲೆದೂರುವ ಲಕ್ಷಣಗಳು ಕಾಣುತ್ತಿವೆ. ಅಲ್ಲಂ ಪ್ರಶಾಂತ್, ಅನಿಲ್‌ಲಾಡ್ ಇಲ್ಲವೆ ಅಲ್ಲಂ ವೀರಭದ್ರಪ್ಪಗೆ ಟಿಕೆಟ್ ನೀಡಿದರೆ ನಾರಾ ಭರತ್‌ರೆಡ್ಡಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts