More

    ಮಂಡ್ಯ-ಕೌಡ್ಲೆ ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ: ಎಂಟು ವರ್ಷದಿಂದ ಕಾಮಗಾರಿಗೆ ಹಿಡಿದಿತ್ತು ಗ್ರಹಣ

    ಮಂಡ್ಯ: ಕಳೆದ ಎಂಟು ವರ್ಷದಿಂದ ಮಂಡ್ಯ ನಗರದಿಂದ ಕೌಡ್ಲೆವರೆಗಿನ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಕಾಮಗಾರಿ ಪುನರಾರಂಭಕ್ಕೆ ಚಾಲನೆ ನೀಡಿದೆ.
    ಮಂಡ್ಯದಿಂದ ತುಮಕೂರಿನ ಬೀರಗೋನಹಳ್ಳಿವರೆಗೆ ರಸ್ತೆ ನಿರ್ಮಾಣ ಕಾಮಗಾರಿ 2015 ಸೆ.9ರಂದು ಚಾಲನೆ ನೀಡಲಾಗಿತ್ತು. 59.59 ಕಿ.ಮೀವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ 198.27 ಕೋಟಿ ರೂ ವೆಚ್ಚ ನಿಗದಿಪಡಿಸಲಾಗಿತ್ತು. 2017ರ ಜೂ.8ರಂದು ಪೂರ್ಣಗೊಳಿಸುವುದಾಗಿ ಗುತ್ತಿಗೆ ಪಡೆದ ಕಂಪನಿ ಹೇಳಿಕೊಂಡಿತ್ತು. ತೆಗೆದುಕೊಂಡಿದ್ದ ಅವಧಿ ಪೂರ್ಣಗೊಂಡಿದ್ದು, ಕಾಮಗಾರಿ ಅಧಿಕೃತವಾಗಿ ಪೂರ್ಣವಾಗಲಿಲ್ಲ. ಇನ್ನು ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿ ಬಗ್ಗೆ ಜಿಲ್ಲೆಯ ಅಧಿಕಾರಿಗಳು ಗಮನಹರಿಸಲೇ ಇಲ್ಲ. ಅದರ ಗುಣಮಟ್ಟವನ್ನೂ ಪರಿಶೀಲನೆ ಮಾಡಲಿಲ್ಲ. ಕಾಮಗಾರಿಯಲ್ಲಿ ನಡೆಯುತ್ತಿದ್ದ ಅವೈಜ್ಞಾನಿಕತೆ ಬಗ್ಗೆ ಸ್ಥಳೀಯರು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಚಿವ ಹಾಗೂ ಶಾಸಕರು ವಿಶೇಷ ಗಮನಹರಿಸಿ ಜನರ ಮನವಿಗೆ ಸ್ಪಂದಿಸಿದ್ದಾರೆ.
    ನಗರದ ಕಾರೇಮನೆ ಗೇಟ್ ಬಳಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಚಲುವರಾಯಸ್ವಾಮಿ, ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದು ಮಾತ್ರವಲ್ಲ ಅಭಿವೃದ್ಧಿ ಕಾಮಗಾರಿಗಳೂ ನಮ್ಮ ಸರ್ಕಾರ ಅಷ್ಟೇ ಆದ್ಯತೆ ನೀಡುತ್ತಿದೆ. ಇಂದಿನ ಅಭಿವೃದ್ಧಿ ಕಾಮಗಾರಿ ಚಾಲನೆ ನಮ್ಮ ಬದ್ದತೆಗೆ ಸಾಕ್ಷಿಯಾಗಿದೆ. 11 ಕೋಟಿ ರೂ ವೆಚ್ಚದ ಕಾಮಗಾರಿ ಇದಾಗಿದ್ದು, ಇದರೊಂದಿಗೆ ಜನರ ಬಹುದಿನದ ಕನಸು ಈಡೇರಿದೆ. ನಾಗಮಂಗಲ, ಕೌಡ್ಲೆ, ತುಮಕೂರು ಕಡೆಗೆ ತೆರಳುವವರಿಗೆ ಈ ರಸ್ತೆ ಕಾಮಗಾರಿಯಿಂದ ಅನುಕೂಲವಾಗಲಿದೆ. ಇನ್ನು ಶೀಘ್ರದಲ್ಲೇ 150 ಕೋಟಿ ರೂ ವೆಚ್ಚದಲ್ಲಿ ಜಿಲ್ಲೆಯ ವಿವಿಧ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
    ಜಿಲ್ಲೆಯವರಾದ ಡಾ.ವಿವೇಕ್ ಅವರು ಅಮೆರಿಕಾ ಅಧ್ಯಕ್ಷರ ಆಪ್ತ ವೈದ್ಯರಾಗಿರುವುದು ಹೆಮ್ಮೆಯ ವಿಷಯ. ಅವರ ಆಹ್ವಾನದ ಮೇರೆಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಅವರು ಸ್ಟ್ಯಾಚು ಆಫ್ ಮದರ್ ಅರ್ಥ್ ಪ್ರತಿಮೆ ಅನಾವರಣಕ್ಕೆ ಮಂಡ್ಯಕ್ಕೆ ಬರುವ ಸಾಧ್ಯತೆ ಇದೆ. ಅಷ್ಟರಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಪ್ರಮುಖವಾಗಿ ಗುಣಮಟ್ಟ ಕೊಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.

    ಮಂಡ್ಯ-ಕೌಡ್ಲೆ ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ: ಎಂಟು ವರ್ಷದಿಂದ ಕಾಮಗಾರಿಗೆ ಹಿಡಿದಿತ್ತು ಗ್ರಹಣ

    ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಹಲವು ವರ್ಷದಿಂದ ಈ ರಸ್ತೆ ನನೆಗುದಿಗೆ ಬಿದ್ದಿತ್ತು. ಇದೀಗ ದುರಸ್ತಿ ಕಾಮಗಾರಿಗೆ ಈಗ ಚಾಲನೆ ದೊರೆತಿರುವುದು ಸಂತೋಷದ ವಿಚಾರ. ಈ ರಸ್ತೆಯಲ್ಲಿ ಹಲವು ಅಪಘಾತ, ಒಂದೆರೆಡು ಪ್ರಾಣ ಹಾನಿ ಸಂಭವಿಸಿತ್ತು. ಆದರೆ ಹಿಂದೆ ಅಧಿಕಾರದಲ್ಲಿದವರು ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ. ಎರಡು ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅಂತೆಯೇ ನಗರದ ವಿವಿಧ ಭಾಗಗಳಲ್ಲಿ 5 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೂ ಚಾಲನೆ ನೀಡಲಾಗುವುದು ಎಂದು ಹೇಳಿದರು.
    ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಇತರರಿದ್ದರು.

    ಇತ್ತ ಕಡೆ ಗಮನವಿರಲಿ
    ಕೆಲವೆಡೆ ರಸ್ತೆ ಅಪಘಾತಕ್ಕೆ ಇವರೇ ಆಹ್ವಾನ ನೀಡಿರುವಂತೆ ಇದೆ. ಕೌಡ್ಲೆ ಗ್ರಾಮದಲ್ಲಿ ರಸ್ತೆಗೆ ಅಂಟಿಕೊಂಡಂತಿರುವ ತೆಂಗಿನಮರಗಳನ್ನು ಕಡಿದು ಹಾಕಿಲ್ಲ. ಇಲ್ಲಿ ರಕ್ಷಣಾ ಕ್ರಮವಾಗಬೇಕಿದೆ. ಅಂತೆಯೇ ದೊಡ್ಡಹೊಸಗಾವಿ ಮಾರ್ಗವಾಗಿ ಚಂದಗಾಲು ಗ್ರಾಮಕ್ಕೆ ಬರುವಾಗ ಜಮೀನಿನ ಬಳಿ ರಸ್ತೆ ಚಿಕ್ಕದಾಗಿದೆ. ಅದರ ಎರಡು ಕಡೆ ಕಾಟಾಚಾರವೆಂಬಂತೆ ಅಲ್ಲೊಂದು ಇಲ್ಲೊಂದು ರಕ್ಷಣಾ ಕಲ್ಲುಗಳನ್ನು ಅಳವಡಿಸಲಾಗಿತ್ತು. ಈಗ ಅದು ಕೂಡ ಕಂಡುಬರುವುದಿಲ್ಲ. ಇಲ್ಲಿಯೂ ಸವಾರರು ಎಚ್ಚರ ತಪ್ಪಿದರೂ 15 ಅಡಿಗೂ ಆಳವಿರುವ ಜಮೀನಿನ ಒಳಗೆ ಹೋಗುತ್ತಾರೆ. ಈ ರೀತಿ ಹಲವೆಡೆ ಸಮಸ್ಯೆ ಇದೆ. ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಕಾಮಗಾರಿ ಅಧ್ವಾನದ ಸ್ಥಿತಿಯಲ್ಲಿದೆ. ಕಾರಣ ಈವರೆಗೂ ಗ್ರಾಮದ ಬಹುತೇಕ ರಸ್ತೆ ದುರಸ್ತಿ ಮಾಡಲಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts