More

    ಬೆಂಬಲಿಗರನ್ನು ಕೈ ಬಿಡುವ ಪ್ರಶ್ನೆ ಇಲ್ಲ

    ಕೆ.ಎಂ.ದೊಡ್ಡಿ: ಕೆಲವೊಂದು ರಾಜಕೀಯ ವಿಚಾರವಾಗಿ ನನಗೆ ವೈಯಕ್ತಿಕವಾಗಿ ನೋವುಂಟಾಗಿದ್ದು ಏನೇ ಆದರೂ ಸರಿ ನನ್ನ ಬೆಂಬಲಿಗರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಅವರ ಜತೆ ನಾನು ಸದಾ ಇರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.


    ಇಲ್ಲಿಗೆ ಸಮೀಪದ ಅಣ್ಣೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಒಬ್ಬ ಜನಪ್ರತಿನಿಧಿಯಾಗಿರುವ ನನಗೆ ಕೆಲವೊಂದು ವಿಷಯಗಳಲ್ಲಿ ಮತ್ತು ಕಾರ್ಯಕರ್ತರಿಗೆ ವೈಯಕ್ತಿವಾಗಿ ನೋವು ಆಗಲು ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜಿ.ಮಾದೇಗೌಡರ ಕಾಂಗ್ರೆಸ್‌ನನ್ನು ಸಂಘಟಿಸಲು ಆರಂಭಿಸಿದ್ದೇನೆ ಎಂದರು.


    ನಾನು ಯಾರನ್ನೂ ಟೀಕೆ ಮಾಡುವ ಅವಶ್ಯಕತೆ ನನಗಿಲ್ಲ. ಕೆಲವೊಂದು ವಿಚಾರಗಳಿಂದ ಕಳೆದ ಒಂದು ವರ್ಷಗಳಿಂದ ಗ್ರಾಮಗಳಿಗೆ ಭೇಟಿ ಕೊಡುವುದನ್ನು ಕಡಿಮೆಗೊಳಿಸಿದ್ದೆ. ಅಭಿಮಾನಿಗಳ ಒತ್ತಾಯದಿಂದ ಮತ್ತೆ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.


    ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರೂ ನನ್ನ ನಿಷ್ಠಾವಂತ ಕಾರ್ಯಕರ್ತರು ನನ್ನನ್ನು ಕೈಬಿಟ್ಟಿಲ್ಲ. ಈಗ ವಿಧಾನಪರಿಷತ್ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡುವಲ್ಲಿಯೂ ಶ್ರಮಿಸಿದವರನ್ನು ಎಂದಿಗೂ ಮರೆಯುವಂತಿಲ್ಲ ಎಂದರು.


    ಬದುಕಿನಲ್ಲಿ ಅಂಧ ಪ್ರೇಮದ ಕಾರ್ಮೋಡ ಕಳಚಿ ಬಿದ್ದು ಜೋರಾಗಿ ಮಳೆ ಸುರಿಸಿದ ವಾತಾವರಣ ಈಗ ಜಿ.ಮಾದೇಗೌಡರ ಬೆಂಬಲಿಗರಲ್ಲಿ ಬಂದಿದ್ದು ರಾಜಕಾರಣದಲ್ಲಿ ಒಂದೊಂದು ಬಾರಿ ಅಂಧ ಪ್ರೇಮ ಉಂಟಾಗುವುದು ಸಹಜ. ಜಿ.ಮಾದೇಗೌಡರು ಮತ್ತು ನಾನು ಅಂಧ ಪ್ರೇಮಕ್ಕೆ ಒಳಗಾಗಿದ್ದೆವು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದೃತರಾಷ್ಟ್ರ ಪ್ರೇಮಕ್ಕೆ ಒಳಗಾಗಿದ್ದೆವು. ಆದರೆ ಇಂದು ಅದು ಕಳಚಿ ಬಿದ್ದು ಈಗ ಎಲ್ಲವೂ ತಿಳಿಯಾಗತೊಡಗಿದೆ. ಹಾಗಾಗಿ ನಿಮ್ಮೆಲ್ಲರನ್ನು ಹತ್ತಿರದಿಂದ ನೋಡುಂತಹ ಅವಕಾಶ ನಮಗೆ ಲಭಿಸಿದೆ ಎಂದರು.


    ಕಾಂಗ್ರೆಸ್ ಕಾರ್ಯಕರ್ತರು ಮತ್ತೊಮ್ಮೆ ಜಿ.ಮಾದೇಗೌಡ ಮತ್ತು ಮಧು ಜಿ.ಮಾದೇಗೌಡರ ಕಡೆಗೆ ಹೋಗೋಣ ಎಂದು ಸಂದೇಶ ನೀಡುತ್ತಿರುವುದು ಸಂತಸ ತಂದಿದೆ. ಕಳೆದ 20 ವರ್ಷಗಳಿಂದಲೂ ನಾನು ರಾಜಕಾರಣ ಮಾಡುತ್ತ ಬಂದಿದ್ದು ಯಾರನ್ನೂ ದ್ವೇಷ ಮಾಡಿಲ್ಲ. ಯಾರಿಗೂ ನೋವು ಮಾಡಿಲ್ಲ. ನನ್ನ ಕೈಲಾದ ಮಟ್ಟಿಗೆ ನೆರವಾಗಿದ್ದೇನೆ ಎಂದರು.


    ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ. ಸತೀಶ್ ಮಾತನಾಡಿ, ಅಣ್ಣೂರು ಗ್ರಾಮಕ್ಕೆ ಮಾಜಿ ಸಂಸದ ದಿ.ಜಿ.ಮಾದೇಗೌಡ ಮತ್ತು ಮಧು ಜಿ.ಮಾದೇಗೌಡ ಕೊಡುಗೆ ಅಪಾರವಾಗಿದ್ದು ಗ್ರಾಮದ ಬಗ್ಗೆ ಅತೀವ ಪ್ರೀತಿ ಅವರಲ್ಲಿದ್ದು ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.


    ಕಾಂಗ್ರೆಸ್ ಮುಖಂಡ ಬಿ.ಎಂ.ನಂಜೇಗೌಡ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಸೊಸೈಟಿ ಮಾಜಿ ಅಧ್ಯಕ್ಷ ಆರ್.ಸಿದ್ದಪ್ಪ, ನಿರ್ದೇಶಕ ಸುನೀಲ್, ಮಾಜಿ ನಿರ್ದೇಶಕ ಜಿ.ರವಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಯರಾಮು, ಸದಸ್ಯ ನಾಗರಾಜು, ಮುಖಂಡರಾದ ಪಾಪಣ್ಣ, ಶಿವಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts