More

    ಮಂಡೆಕೋಲು-ಮೂರೂರು ಹೊಂಡಗುಂಡಿ ರಸ್ತೆಯಲ್ಲಿ ಪ್ರಯಾಣ ದುಸ್ತರ

    ಗಣೇಶ್ ಮಾವಂಜಿ, ಸುಳ್ಯ

    ಕರ್ನಾಟಕವನ್ನು ಕೇರಳದೊಂದಿಗೆ ಬೆಸೆಯುವ ಮಂಡೆಕೋಲು- ಮೂರೂರು ರಸ್ತೆಯ ಕೆಲವೆಡೆ ಡಾಂಬರು ಎದ್ದು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಹೊಂಡಗುಂಡಿ, ಜಲ್ಲಿಕಲ್ಲಿನ ರಾಶಿಯಲ್ಲಿ ವಾಹನಗಳು ಸಾಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ. ಬೇಸಿಗೆಯಲ್ಲೇ ಸಂಚರಿಸಲು ತೊಡಕಾಗುವ ಈ ರಸ್ತೆಯಲ್ಲಿ ಮಳೆಗಾಲ ಬಂದರೆ ಗತಿ ಏನು ಎಂಬುದು ಈ ರಸ್ತೆಯನ್ನು ಪ್ರತಿನಿತ್ಯ ಉಪಯೋಗಿಸುವ ಜನರ ಪ್ರಶ್ನೆ.

    ಕಾಸರಗೋಡು ಜಿಲ್ಲೆಯ ಅಡೂರು ಸುತ್ತಮುತ್ತಲ ಪ್ರದೇಶದ, ಮಂಡೆಕೋಲು ಗ್ರಾಮದ ಕನ್ಯಾನ, ಕಲ್ಲಡ್ಕ, ಬೊಳುಗಲ್ಲು, ಮಾವಂಜಿ, ಪಾತಿಕಲ್ಲು, ಮುಡೂರು ಭಾಗದ ಸಾವಿರಾರು ಜನರು ಈ ರಸ್ತೆಯನ್ನು ಪ್ರತಿನಿತ್ಯ ಉಪಯೋಗಿಸುತ್ತಾರೆ. ಗಡಿಭಾಗದ ಇಲ್ಲಿನ ಜನರು ಸನಿಹದ ಕಾಸರಗೋಡು ಜಿಲ್ಲೆಯನ್ನು ಅತೀ ಹೆಚ್ಚು ಅವಲಂಬಿಸುತ್ತಾರೆ. ಹಾಗಾಗಿ ಈ ರಸ್ತೆಯ ಅಭಿವೃದ್ಧಿ ಆಗಲೇಬೇಕು ಎಂಬುದು ಇಲ್ಲಿನ ಜನತೆಯ ಬೇಡಿಕೆ.

    ಮಂಡೆಕೋಲಿನಿಂದ ಮೂರೂರುವರೆಗಿನ ಸುಮಾರು ಮೂರು ಕಿ.ಮೀ. ರಸ್ತೆ ಈವರೆಗೆ ಅಭಿವೃದ್ಧಿಯೇ ಆಗಲಿಲ್ಲ ಎಂದಲ್ಲ. ದಶಮಾನದ ಹಿಂದೆ ಈ ರಸ್ತೆ ಡಾಂಬರುಗೊಂಡಿದ್ದರೂ ನಡುವೆ ನಿರ್ವಹಣೆ ಕೊರತೆಯಿಂದಾಗಿ ಸಂಚರಿಸಲೇ ಸಾಧ್ಯವಾಗದಷ್ಟು ಕುಲಗೆಟ್ಟಿದೆ. ಮಂಡೆಕೋಲು- ಅಜ್ಜಾವರ- ಸುಳ್ಯ ರಸ್ತೆ ಅಭಿವೃದ್ಧಿಯಾಗುವ ಸಂದರ್ಭ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಸುಳ್ಯವನ್ನು ಸಂಪರ್ಕಿಸಲು ಇದೇ ರಸ್ತೆಯನ್ನು ಬಳಸುತ್ತಿದ್ದ ಕಾರಣ ಈ ರಸ್ತೆಯಲ್ಲಿ ಅಳಿದುಳಿದ ಡಾಂಬರು ಕೂಡ ಮಾಯವಾಗಿದೆ.

    ಕಳೆದ ಬಾರಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಇಲಾಖೆಯಿಂದ ನೀಡಲಾಗುವ ವಿಶೇಷ ಅನುದಾನದಲ್ಲಿ ಈ ರಸ್ತೆ ಕಾಂಕ್ರೀಟ್ ಮಾಡಲಾಗಿತ್ತು. ಒಟ್ಟು 70 ಲಕ್ಷ ರೂ. ಅನುದಾನದಲ್ಲಿ ಈ ರಸ್ತೆಗೆ ಕಾಂಕ್ರೀಟ್ ಮಾಡಲಾಗಿದ್ದರೂ ಮೂರೂರಿನಿಂದ ಸೇತುವೆಯವರೆಗಿನ ಸುಮಾರು 150 ಮೀ ರಸ್ತೆ ಹಾಗೂ ಮಂಡೆಕೋಲು ಮಹಾವಿಷ್ಣು ದೇವಸ್ಥಾನಕ್ಕೆ ತಿರುಗುವ ಸ್ಥಳದಿಂದ ಮುಂದಕ್ಕೆ ಸುಮಾರು 200 ಮೀಟರ್ ರಸ್ತೆಗೆ ಹಾಗೆಯೇ ಬಿಡಲಾಗಿದೆ.

    ಎದ್ದುಬಿದ್ದು ಹೋಗಬೇಕು: ಕಾಂಕ್ರೀಟ್ ಕಾಣದೆ ಬಾಕಿ ಉಳಿದಿರುವ ಈ ರಸ್ತೆಯ ಕೆಲವೆಡೆ ಹೊಂಡಗುಂಡಿಗಳಿದ್ದು, ಮೊನ್ನೆ ಸುರಿದ ಒಂದು ಮಳೆಗೆ ಸಮಸ್ಯೆಗಳನ್ನು ಬಟಾಬಯಲುಗೊಳ್ಳುವಂತೆ ಮಾಡಿದೆ. ಕಳೆದ ಬಾರಿಯೇ ಕೆಲ ದ್ವಿಚಕ್ರ ವಾಹನ ಸವಾರರು ಈ ಹೊಂಡದಲ್ಲಿ ಎದ್ದುಬಿದ್ದು ಹೋಗುವಂತಾಗಿತ್ತು ಎಂದು ಇಲ್ಲಿನ ಸ್ಥಳೀಯ ಜನರು ನೆನಪಿಸುತ್ತಾರೆ. ಹಾಗಾಗಿ, ಮಳೆಗಾಲ ಪ್ರಾರಂಭಗೊಳ್ಳುವ ಮೊದಲೇ ಈ ರಸ್ತೆಯನ್ನು ಸರಿಪಡಿಸಬೇಕೆಂಬುವುದು ಸಾರ್ವಜನಿಕರ ಬೇಡಿಕೆ.

    ಈ ರಸ್ತೆ ಎರಡು ರಾಜ್ಯಗಳನ್ನು ಬೆಸೆಯುವುದರಿಂದ ಹಾಗೂ ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯನ್ನು ಉಪಯೋಗಿಸುವ ಕಾರಣ ಈ ರಸ್ತೆಯ ಅಭಿವೃದ್ಧಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಕಳೆದ ಬಾರಿ ರಸ್ತೆಯನ್ನು ಅರ್ಧಂಬರ್ಧ ಅಭಿವೃದ್ಧಿಗೊಳಿಸಿದ ಪರಿಣಾಮ ಮುಂಬರುವ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು, ಪಾದಚಾರಿಗಳು ಕಷ್ಟಪಡಬೇಕಾಗಬಹುದು. ಹಾಗಾಗಿ ಈ ರಸ್ತೆಯನ್ನು ಆದಷ್ಟು ಶೀಘ್ರವಾಗಿ ಅಭಿವೃದ್ಧಿಪಡಿಸಲು ಗಮನಹರಿಸಬೇಕು.
    ಅಜಿತ್ ಕಣೆಮರಡ್ಕ, ಸ್ಥಳೀಯ ನಿವಾಸಿ

    ನಮ್ಮ ಬೇಡಿಕೆಯಂತೆ ಮಂಡೆಕೋಲು- ಮುರೂರು ರಸ್ತೆಯ ಸಂಪೂರ್ಣ ಅಭಿವೃದ್ಧಿ ಹಾಗೂ ಗ್ರಾಮದ ಇತರ ರಸ್ತೆಗಳ ಅಭಿವೃದ್ಧಿಗಾಗಿ ಕಳೆದ ಬಾರಿಯೇ ಶಾಸಕರು ಒಟ್ಟು 8 ಕೋಟಿ ರೂ.ನ ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಈ ನಡುವೆ ಕರೊನಾ ಕಾರಣದಿಂದಾಗಿ ಹಣ ಬಿಡುಗಡೆ ವಿಳಂಬವಾಗಿತ್ತು. ಈ ಬಾರಿ ಅನುದಾನದ ಲಭ್ಯತೆ ಗಮನದಲ್ಲಿರಿಸಿಕೊಂಡು ಆದ್ಯತೆ ಮೇರೆಗೆ ಈ ರಸ್ತೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
    ವಿನುತಾ ಪಾತಿಕಲ್ಲು, ಅಧ್ಯಕ್ಷೆ, ಮಂಡೆಕೋಲು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts