More

    ಅಂಬೇಡ್ಕರ್ ರಸ್ತೆಗೆ ಪರ್ಯಾಯ ಹೆಸರಿಗೆ ಆಕ್ರೋಶ: ನಿರ್ಣಯ ಹಿಂಪಡೆಯಲು ಪೌರಾಯುಕ್ತರಿಗೆ ಮನವಿ ಸಲ್ಲಿಕೆ

    ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಗೆ(ನೂರಡಿ ರಸ್ತೆ) ಪರ್ಯಾಯ ಹೆಸರು ನಾಮಕರಣ ಮಾಡುವ ನಗರಸಭೆ ನಿರ್ಣಯವನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಪೌರಾಯುಕ್ತ ಮಂಜುನಾಥ್‌ಗೆ ಮನವಿ ಸಲ್ಲಿಸಿದರು.
    ನಗರಸಭೆ 10ನೇ ವಾರ್ಡ್(ಸುಭಾಷ್ ನಗರ), 11ನೇ ವಾರ್ಡ್(ವಿದ್ಯಾನಗರ), 12 ಮತ್ತು 13ನೇ ವಾರ್ಡ್(ಗಾಂಧಿನಗರ),17ನೇ ವಾರ್ಡ್(ಹೌಸಿಂಗ್ ಬೋರ್ಡ್), 21ನೇ ವಾರ್ಡ್(ಹಾಲಹಳ್ಳಿ), 26ನೇ ವಾರ್ಡ್(ನೆಹರು ನಗರ ಪೂರ್ವ ಬಡಾವಣೆ) ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರಸಭೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಕೂಡಲೇ ಅಂಬೇಡ್ಕರ್ ರಸ್ತೆಯಲ್ಲಿ ನಾಮ ಫಲಕ ಅಳವಡಿಸುವಂತೆ ಕೋರಿದರು.
    ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯು ನೂರು ಅಡಿ ಅಗಲವಿದೆ. ಹಾಗಾಗಿ ನೂರಡಿ ರಸ್ತೆ ಎಂದು ಸಾರ್ವಜನಿಕ ವಲಯದಲ್ಲಿ ಬಿಂಬಿತಗೊಂಡಿದೆ. ಇದಕ್ಕೆ ನಗರಸಭೆ ಅಂಬೇಡ್ಕರ್ ರಸ್ತೆಯ ನಾಮಫಲಕ ಹಾಕದಿರುವುದು ಪ್ರಮುಖ ಕಾರಣವಾಗಿದೆ. ಇದನ್ನು ನೆಪ ಮಾಡಿಕೊಂಡು ಈಗಾಗಲೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಹೆಸರನ್ನು ನಾಮಕರಣ ಮಾಡಲಾಗಿರುವ ರಸ್ತೆಗೆ ಈ ರೀತಿ ಬೇರೊಂದು ಹೆಸರನ್ನು ನಾಮಕರಣ ಮಾಡಲು ವುುಂದಾಗಿರುವುದು ಸಂವಿಧಾನ ಬಾಹಿರ ನಡೆಯಾಗಿದೆ. ಸಾಮಾಜಿಕ ಸಮಾನತೆಗೆ ಹೋರಾಡಿದ ಮಹಾ ನಾಯಕ, ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಮಾಡಿದ ಅಪಮಾನವಾಗಿದೆ ಎಂದು ಆರೋಪಿಸಿದರು.
    ನಗರ ಸಭೆಯ ನಿರ್ಣಯಕ್ಕೆ ನಾವುಗಳು ಆಕ್ಷೇಪ ವ್ಯಕ್ತಪಡಿಸಿದ್ದು. ಪರ್ಯಾಯ ಹೆಸರು ನಾಮಕರಣ ಮಾಡುವ ನಿರ್ಣಯವನ್ನು ಹಿಂಪಡೆಯಬೇಕೆಂದು ನಾಗರೀಕರು ನಗರಸಭೆ ಪೌರಾಯುಕ್ತರನ್ನು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
    ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀರಘುನಂದನ್, ಮಾಜಿ ಉಪಾಧ್ಯಕ್ಷ ಎಸ್.ಕುಮಾರಸ್ವಾಮಿ, ಎಸ್‌ಸಿ ಮತ್ತು ಎಸ್‌ಟಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಗುರುಮೂರ್ತಿ, ಮುಖಂಡರಾದ ಎಂ.ಎಸ್.ಮೂರ್ತಿ, ಎಂ.ಪಿ.ಶಿವರಾಮಮೂರ್ತಿ, ಎಂ.ಲೋಕೇಶ್ವರ್, ಎಂ.ಎಲ್.ತುಳಸೀಧರ್, ಸುದೇಶ್‌ಪಾಲ್, ಥಾಮಸ್ ಬೆಂಜಮಿನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts